ಇಲ್ಲಿ
ಸಣ್ಣಗೆ ಮಳೆ
ನಿನ್ನೆದುರು
ಕುಳಿತು
ಧ್ಯಾನಿಸಿದಂತೆ
ಮಗು
ಆಕೆಯ ತೊಡೆಯ
ಮೇಲೆ
ಹರಿದಾಡಿತು
ನದಿ
ನಡೆದು
ಹಾಡಿದಂತೆ
ನಿನ್ನೆದುರೇ
ರಮ್ಯತೆ
ಹುಟ್ಟುವುದಾದರೆ
ನಾನು
ಮರವಾಗುವೆ
ನೀ ಅಲ್ಲಿ
ಹೂವಾಗು
ಕಡಲು ಅಬ್ಬರಿಸುತ್ತಿದೆ
ಮೋಡ ಧ್ಯಾನಿಸುತ್ತಿದೆ
ಆಕಾಶದ ಬಯಲಲ್ಲಿ
ಆಕೆ
ಬರುವ ಸುಳಿವು ಸಿಕ್ಕಿದೆ
ಮುಂಗಾರಿನ ಹಂಗಾಮಿನಲ್ಲಿ
ಬಿಸಿಲ ಬಯಲ ಕಡಲ ಮೇಲೆ
ಸುಳಿದು ಬೀಸುವ ಗಾಳಿ
ಆಕೆಯ ನೆನಪಗಂಧವ ತರಲು
ದಂಡೆಯಲ್ಲಿನ ಹಕ್ಕಿ ನಾಚಿತು
ದಂಡೆಯಲ್ಲಿ ಅವರು
ನಡೆದು ಹೋದರು
ಜೋಡಿ ಹೆಜ್ಜೆಗೆ ನೆರಳು ಸಾಕ್ಷಿ
ಹೆಜ್ಜೆಗಳಲ್ಲಿ ಒಲವು ನಗುತ್ತಿತ್ತು
ಅವರ
ಪಾದಗಳಿಗೆ
ಮುತ್ತಿಕ್ಕಿದ್ದ ಅಲೆ
ಪ್ರೇಮ ಪಲ್ಲವಿ ಬರೆಯುತ್ತಿತ್ತು.
ಬಟಾ ಬಯಲು
ವಿಶಾಲ ಕಡಲ ಬಾಗಿಲೊಳಗೆ
ನುಸುಳಿದೆ ಬೆಳಗು
ಅದು ಬೇರೇನು ಅಲ್ಲ ;
ನಿನ್ನದೇ ಉಸಿರು
ಉರಿ ಉರಿ ಬಿಸಿಲು
ಬರ ಬರನೆ ಬೀಸುವ ಗಾಳಿ
ಗಾಳಿಗೆ ಮೈ ಮುರಿದೇಳುವ ಕಡಲು
ಮುಗಿಲಿಗೆ ದಿಗಿಲು ಬಡಿದಂತೆ
ನೋಡುವ ಅವಳು
ಸಾಕು ಸಾಕಾಗಿದೆ ಈ ಬಿಸಿಲು
ಎಷ್ಟು ಋತುಗಳ ಕಳೆದೆನೋ ಹೀಗೆ
ಒಂಟಿಯಾಗಿ ಒಬ್ಬಂಟಿಯಾಗಿ
ಏಕಾಂಗಿಯಾಗಿ
ಜೊತೆಗೆ ಬುದ್ಧನೂ ನಿಲ್ಲಲಿಲ್ಲ
ರೂಮಿಯೂ ನಿಲ್ಲಲಿಲ್ಲ
ಎಲ್ಲರೂ ಬೆಳಕ ಬೆನ್ನ ಹತ್ತಿದವರೇ
ನಾನು ಕಾದಿದ್ದೇನೆ
ನಿನಗಾಗಿ ; ನಿನ್ನ ಕಿರುನಗೆಗಾಗಿ
ಇರುಳು ಹಗಲು ನದಿ ಕಡಲು
ಬೆಡಗು ಬಯಲು ಹಕ್ಕಿ ಚುಕ್ಕಿ
ಇಳೆ ಮಳೆ ಆಕಾಶ ಚಂದಿರ
ಒಂದಾದವು
ಒಂದಾದ ಮೇಲೊಂದರಂತೆ
ದಶಕಗಳು ಕಳೆದವು
ನಾವು ಇಲ್ಲೇ ಇದ್ದೇವೆ
ಚಲನೆಯೊಳಗೂ ಚಲನೆ ಮರೆತು
ಮೌನದೊಳಗು ಮಾತು ಮೊರೆತು
ಬಯಲ ಬೆಳಕು ಕೂಡಿತು
ಕ್ಷಿತಿಜ ಭೂ ಆಕಾಶ ಬೆಸೆಯಿತು
ಅದರಾಚೆಯ ಹುಡುಕಾಟ
ನನಗೂ ನಿನಗೂ