ಬೀಜ ಬೇರೂರಿ
ಕುಡಿ ಇಡುತ್ತಿರುವಾಗಲೇ
ಹತ್ತಿಕೊಂಡಿತ್ತು ಗೆದ್ದಲು
ಬಿಡಿಸಿಕೊಳ್ಳಲು ಹರಸಾಹಸಗೈದರೂ
ತಪ್ಪಿಸಿಕೊಳ್ಳಲು ಆಗಲೇ ಇಲ್ಲ
ಗೆದ್ದಲು ಹಿಡಿದ ಬೀಜ
ಸಾಯುವುದೇ ದಿಟ
ಎಂದುಕೊಂಡರೂ ಹಾಗಾಗಲಿಲ್ಲ
ಉಳಿವಿಗಾಗಿ ಹೋರಾಟ
ತುಸು ಉಸಿರುವವರೆಗೂ
ಚಿಗುರಿಕೊಂಡಿತು
ಬೀಜ ಮೆಲ್ಲನೆ ಗಿಡವಾಗಿ
ಆದರೆ,
“ಒಬ್ಬನ ಕತ್ತು ಇನ್ನೊಬ್ಬನ ತುತ್ತು”
ಹಿಡಿದ ಬೀಜದ ಬಿಡಲೊಲ್ಲದ
ಗೆದ್ದಲು ಕಾಯತೊಡಗಿತ್ತು
ಸಸಿಯ ಕ್ಷೀಣ ಕಾಲವ
ದಿನಕಳೆದಂತೆ ಬತ್ತಿದ ಉತ್ಸಾಹ
ಕುಗ್ಗಿದ ಹುಮ್ಮಸ್ಸು
ಆಸೆಕುಂದಿದ ಸಸಿ
ಬಲಿಯಾಗಿತ್ತು ಗೆದ್ದಲ ಬಾಯಿಗೆ
“ಸಬಲರ ಉಳಿವು ದುರ್ಬಲರ ಅಳಿವು”
ಪ್ರಕೃತಿ ನಿಯಮ
ಬಲಿಮೆದ್ದು ಹಿರಿಮೆಯಲ್ಲಿ
ಮೆರೆದಿತ್ತು ಗೆದ್ದಲು
ಹುತ್ತವ ಮಾಡಿ
ಹೂಡಿತ್ತು ಸಂಸಾರ
ಆದರೆ
ಉರಗವೊಂದು ತೆವಳಿ
ಬಂದಿತ್ತು ನೋಡಿ
ಗೆದ್ದಲ ಗೂಡು
ದಿನ ನಾಲ್ಕು ದೂಡಬಹುದು
ಕಷ್ಟವಿಲ್ಲದೆ ಪಾಡು
ನಡೆಸಿತ್ತು ಗೆದ್ದಲ
ಕೂಡು ಕುಟುಂಬದ
ಮಾರಣ ಹೋಮ
“ಕಾಲಾಯ ತಸ್ಮೈ ನಮಃ”