ಮುಂಜಾವದ ತಂಪೊತ್ತಿನಲ್ಲಿ
ಕೆಂಪು ಹೃದಯದ ಹುಡುಗಿ
ರಸ್ತೆಯಂಚಿನಲ್ಲಿ ನಿಂತಿದ್ದಾಳೆ.
ಯಾಕೆ? ಎಂದು ಕೇಳಬೇಕು,
ಹೇಗೆ ಕೇಳುವುದು?
ನೆಲವನ್ನು ಜಗ್ಗಿ ಹಿಡಿದಿರುವ ಕಾಲು.
ಸೋತು ತೂಗುತ್ತಿರುವ ಕೈಗಳು.
ದಿಟ್ಟಿಸಿ ದಿಟ್ಟಿಸಿ ಆಳಕ್ಕಿಳಿದಿರುವ ಕಣ್ಣು
ಇವಳನ್ನು ಸಂತೈಸಬೇಕು,
ಹೇಗೆ ಸಂತೈಸುವುದು?
ಹೃದಯ ತುಂಬಿ ತುಳುಕುತ್ತಿದೆ.
ಒಂದಾದರೂ ಹನಿ ಹಂಚಿಕೊಳ್ಳಿ
ಎಂದು ಕಂಡವರ ಕಾಡುತ್ತಿದ್ದಾಳೆ.
ಅವರೋ… ಬೆನ್ನಲ್ಲೆ ಮಾರುತ್ತರ
ಕೊಟ್ಟು ಸಾಗುತ್ತಿದ್ದಾರೆ.
ಇವಳಿಗೆ ಹೇಳಬೇಕು,
ಹೇಗೆ ಹೇಳುವುದು?
ಹೋಗು-
ಆ ತಾರೆಯರು ನಿನ್ನನ್ನು
ಅರ್ಥೈಸಿಕೊಳ್ಳುವರು
ಆ ಮರಗಳು ಅವರೆದೆಯೊಳಗೆ
ನಿನ್ನ ಕರೆದುಕೊಳ್ಳುವರು
ಆ ಚಂದಿರ ನಿನಗೆ ಜತೆಯಾದರೂ
ಆಗಬಹುದು ಎಂದು
ಇವಳಿಗೆ ಹೇಳಬೇಕು.
ಹೇಗೆ ಹೇಳುವುದು?
ಹುಡುಗಿ ಮರದಲ್ಲಿ
ಹೂವಾಗಿ ತೂಗುತ್ತಿದ್ದಾಳೆ.
ತಾರೆಯರು, ಚಂದಿರ,
ಮೋಡಗಳ ಮರೆಯಲ್ಲಿ
ಕುಳಿತು ಬಿಕ್ಕಳಿಸುತ್ತಿದ್ದಾರೆ
ದಳದಳ ಉದುರುತ್ತಿರುವ
ಕಣ್ಣೀರಿನಿಂದ ನೆಲ ಒದ್ದೆಯಾಗಿದೆ
ಹೀಗಾಗಬಾರದಿತ್ತು.