ಸ್ವರ

ಸ್ವರ

ಚಿತ್ರ: ಗರ್‍ಡ್ ಆಲ್ಟ್‌ಮನ್

ಮಾರ್ಚೆಸಾ ಬೊರ್ಗಿ, ಸಾಯುವ ಕೆಲವೇ ದಿವಗಳ ಮುಂಚೆ, ತನ್ನ ಮಗ ಸಿಲ್ವಿಯೋನನ್ನು ಡಾ. ಗಿಯೂನಿಯೋ ಫಾಲ್ಸಿಗೆ ತೋರಿಸಬೇಕೆಂದು ನಿರ್ಧರಿಸಿದ್ದಳು. ಅವಳ ಮಗನ ಕಣ್ಣು ಕುರುಡಾಗಿ ಆಗಲೇ ಒಂದು ವರ್ಷವಾಗಿತ್ತು. ಇಟಲಿ ಮತ್ತು ವಿದೇಶದ ಖ್ಯಾತ ನೇತ್ರ ಚಿಕಿತ್ಸಾ ತಙ್ಞರಲ್ಲಿ ಮಗನನ್ನು ಪರೀಕ್ಷಿಸಿದ್ದಳು ಕೂಡ. ಅವರೆಲ್ಲರೂ ಆತ ಗುಣಪಡಿಸಲಾಗದ ಗ್ಲೌಕೋಮಾ (ಕಣ್ಣುಗುಡ್ಡೆಗಳಲ್ಲಿ ಬಿಗಿತ ಕಾಣಿಸಿಕೊಳ್ಳುವ ರೋಗ – ಅನು) ದಿಂದ ನರಳುತ್ತಿದ್ದಾನೆ ಎಂದಿದ್ದರು.

ಈಚೆಗಷ್ಟೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೂತು, ಗಿಯೂನಿಯೋ ಫಾಲ್ಸಿ ನೇತ್ರ ಚಿಕಿತ್ಸಾಲಯದ ವಿರ್ದೇಶಕನ ಸ್ಥಾನಗಳಿಸಿದ್ದ. ಆದರೆ ಆತ ಬಹಳ ಸುಸ್ತಾದವನಂತೆ, ಅನ್ಯಮನಸ್ಕನಂತೆ ವರ್ತಿಸುತ್ತಿದ್ದುರಿಂದಲೋ ಅಥವಾ ಅವನು ಯಾವ ನಯ ನಾಜೂಕಿಲ್ದದೆ ಕಾಣಿಸಿಕೊಳ್ಳುತ್ತಿದ್ದುದರಿಂದಲೋ – ಅಂದರೆ ತನ್ನ ಉದಾಸೀನದ ನಡಿಗೆ, ಮುಚ್ಚಿಕೊಳ್ಳದೆ ಹಾಗೇ ಬಿಟ್ಟಿರುವ ಬೋಳುತಲೆ, ಬಡಕಲು ಮುಖದ ಮೇಲೆ ಹಡಗಿನ ಹಾಯಿಯಂತಿರುವ ಸಪೂರ ಮೂಗು ಮತ್ತು ಆಗಲೇ ಬೂದುಬಣ್ಣಕ್ಕೆ ತಿರುಗಿರುವ ಕುರುಚಲು ಗಡ್ಡ ಗಳಿಂದಾಗಿ ಅಂತೂ ಅವನನ್ನು ಬಹಳ ಕಡಿಮೆ ಮಂದಿ ಮೆಚ್ಚಿಕೊಳ್ಳುತ್ತಿದ್ದರು. ಇನ್ನು ಕೆಲವರಂತೂ ಅವನಿಗೆ ವೈದ್ಯಕೀಯದ ಗಂಧಗಾಳಿಯೂ ಇಲ್ಲ ಎಂದೂ ಹೇಳುವುದಿತ್ತು. ಮಜಾ ಎಂದರೆ ಅವನಿಗೆ ಈ ಎಲ್ಲದರ ಅರಿವೂ ಇದ್ದು ಅದನ್ನಾತ ಆನಂದಿಸುತ್ತಿದ್ದ. ದಿನೇ ದಿನೇ ಮತ್ತಷ್ಟು ಅನ್ಯಮನಸ್ಕನಾಗಿ ಬಳಲಿ ಮಂಕಾದವನಂತೆ ಕಾಣುತ್ತಿದ್ದರೂ ಕೆಲವು ಸೂಕ್ಷ್ಮ ಮತ್ತು ತೀಕ್ಷ್ಣ ಪ್ರಶ್ನೆಗಳನ್ನು ಕೇಳಿ ಎದುರಿನವರನ್ನು ಧೈರ್ಯಗೆಡಿಸಿ ತಬ್ಬಿಬ್ಬುಗೊಳಿಸಿಬಿಡುತ್ತಿದ್ದ. ಕ್ರಮೇಣ ಅವನಿಗೆ ಬದುಕೆಂದರೆ ಬರೇ ಟೊಳ್ಳು ಬೂಟಾಟಿಕೆಯ, ತಪ್ಪಿಸಿಕೊಳ್ಳಲಾಗದ ಯಾವುದೋ ಭ್ರಮೆಗಳಿಂದ ರಚೆಸಲ್ಪಟ್ಟಿರುವಂತೆ ಕಂಡಿತು. ಅಲ್ಲದೆ ಪ್ರತಿಯೊಬ್ಬರೂ ತಮ್ಮ ಸ್ವಂತಿಕೆಯನ್ನು ಬಿಟ್ಟು ಯಾರದೋ ಅಗತ್ಯೆತೆಗಾಗಿ ಸಾಮಾಜಿಕ ಸ್ವಾಸ್ಥ್ಯವನ್ನು ನಿರ್ವಹಿಸುತ್ತಿರುವವರ ಹಾಗೆ ಅವನಿಗೆ ಕಂಡರು. ಬದುಕಿನ ಕುರಿತು ಈ ಥರದ ಭಾವನೆಯನುಣ್ಮು ರೂಪಿಸಿಕೊಂಡವನ ಸಹವಾಸವೇ ಜನರಿಗೆ ಅಸಹನೀಯವಾಗಿಬಿಟ್ಟಿತು.

ಯಾವುದೋ ಒಂದು ಮುಂಜಾನೆ ಮಾರ್ಗರಿಟಾ ಬ್ರಿಜ್ಜಿನ ಆಚೆಗಿದ್ದ ಕ್ಯಾಸಲ್ ಮೆಡೋಸ್ನ ತುತ್ತತುದಿಯ ಮಾರ್ಚೆಸಾ ಬೋರ್ಗಿಯ ಮನೆಗೆ ಅವಳು ಆಹ್ವಾನಿಸಿದ್ದಾಳೆ ಎಂಬ ಕಾರಣಕ್ಕೆ ಒಮ್ಮೆ ಹೋಗಿದ್ದ. ನಿರ್ಜನ ರಸ್ತೆಯಲ್ಲಿ ಒತ್ತೊತ್ತು ಮನೆಗಳು. ಗಾಳಿಯಾಡುತ್ತಿತ್ತು. ಬೇರೆ ಬೇರೆ ವೈದ್ಯರು ಮಾಡಿದ ರೋಗವಿದಾನ, ಖಾಯಿಲೆಯ ಹೆಸರು, ಇದುವರೆಗೆ ಪ್ರಯತ್ನಿಸಿದ ಚಿಕಿತ್ಸಾ ಕ್ರಮಗಳೆಲ್ಲ ಮಾರ್ಚೆಸಾ ಹೇಳುತ್ತಿದ್ದರೂ ಕೂಡಾ ಅದಕ್ಕೆ ಗಮನವನ್ನೇ ಕೊಡದೆ ಅವಳ ಮಗನ ಕಣ್ಣುಗಳನ್ನು ಬಹಳ ಹೊತ್ತಿನಿಂದ ಸೂಕ್ಷ್ಮವಾಗಿ ಪರೀಕ್ಷಿಸಿದ್ದ. ಗ್ಲೌಕೋಮಾವೇ? ಅಲ್ಲವೇ ಅಲ್ಲ ಎನಿಸಿತವನಿಗೆ, ಆ ಕಾಯಿಲೆಯ ಯಾವ ರೋಗಲಕ್ಷಣಗಳು, ನೀಲಿ, ಹಸಿರು, ಬಣ್ಣದ ನಿಷ್ಪಾರದರ್ಶಕಗುಣ ಇತ್ಯಾದಿಗಳ್ಯಾವುದೂ ಇದೆಯೆಂದು ಅವನಿಗನಿಸಲಿಲ್ಲ. ಬದಲಿಗೆ, ಈಗ ತನ್ನೆದುರು ಇರುವ ಈ ಅಪರೂಪದ ಮತ್ತು ವಿಚಿತ್ರ ಕಾಯಿಲೆ” ಕ್ಯಾಟರ್‍ಯಾಕ್ಟ್ (ಕಣ್ಣಿನ ಪೊರೆ) ಎಂದೇ ಆತ ನಿರ್ಧರಿಸಿದ್ದ. ತನ್ನ ಈ ಅನುಮಾನವನ್ನು ಒಮ್ಮೆಗೆ ಮಾರ್ಚೆಸಾಗೆ ಹೇಳಿ ಅವಳಲ್ಲಿನ್ನೂ ಉಳಿದಿರುವ ಚೂರುಪಾರು ಭರವಸೆಯನ್ನು ಚೆವುಟಿಬಿಡಲು ಅವನ ಮನಸ್ಸು ಒಪ್ಪಲಿಲ್ಲ. ಮೇಲಾಗಿ, ಅವನಿಗೆ ಕಾಯಿಲೆಯ ಕುರಿತು ಖಚಿತತೆ ಇರಲಿಲ್ಲ. ಬದಲು, ಈ ವಿಚಿತ್ರ ಕಾಯಿಲೆ ತನ್ನಲ್ಲಿ ಹುಟ್ಟಿಸಿರುವ ಕುತೂಹಲವನ್ನು ತೋರ್ಪಡಿಸದೆ, ಇನ್ನು ಕೆಲವೇ ದಿನದಲ್ಲಿ ತಾನೊಮ್ಮೆ ರೊಗಿಯನ್ನು ಪುನಃ ನೋಡಬೇಕು ಎಂದ.

ಆತ ಪುನಃ ವಾಪಾಸಾದಾಗ, ಯಾವತ್ತೂ ನಿರ್ಜನವಾಗಿರುವ ಮಾರ್ಚೆಸಾ ಬೋರ್ಗಿಯ ಮನೆಯಿರುವ ಕ್ಯಾಸಲ್ ಮೆಡೋಸ್ ಈವತ್ತು ಜನರಿಂದ ಗಿಜಿಗುಡುತ್ತಿತ್ತು. ಗೇಟು ತೆರೆದೇ ಇದ್ದು, ಜನರ ಗುಂಪು ಕುತೂಹಲದಿಂದ ಮನೆಯತ್ತಲೇ ನೋಡುತ್ತಿತ್ತು. ಮಾರ್ಚೆಸಾ ಬೋರ್ಗಿ ಇದ್ದಕ್ಕಿದ್ದಂತೆ ಆ ರಾತ್ರಿಯೇ ಸತ್ತಿದ್ದಳು.

ಈಗೇನು ಮಾಡುವುದು? ವಾಪಸು ಹೋಗುವುದೆ? ಮಗನಿಗಿದ್ದಿದ್ದು ಗ್ಲೌಕೋಮಾ ಅಲ್ಲ ಎಂದು ಮೊದಲ ಭೆಟ್ಟಿಯಲ್ಲೇ ಆ ತಾಯಿಗೆ ತಿಳಿಸಿದ್ದಲ್ಲಿ, ಕುರುಡು ಮಗನನ್ನು ಬಿಟ್ಟು ಹೋಗಬೇಕಾಯಿತಲ್ಲ ಎಂಬ ಖಿನ್ನತೆಯಿಂದ ಅವಳು ಸಾಯುತ್ತಿರಲಿಲ್ಲವೇನೋ ಎಂದೆನಿಸಿತು ಅವನಿಗೆ. ಆದರೆ, ತಾಯಿಯನ್ನು ಸಮಾಧಾನಪಡಿಸಲಾರದೆ ಹೋದರೇನಂತೆ, ಕನಿಷ್ಠಪಕ್ಷ ಬದುಕುಳಿದಿರುವ ಮಗನಿಗಾದರೂ ನಿಜಸಂಗತಿ ತಿಳಿಸಿ ಅವನನ್ನು ಸಂತೈಸಬಹುದಲ್ಲವೇ ಎಂಬ ಸಮಾಧಾನ ಹುಟ್ಟಿಕೊಂಡಿತು.

ಈಗ ಆತ ಮನೆಯತ್ತ ನಡೆದ.

ಗೊಂದಲದಲ್ಲೇ, ಬಹಳ ಹೊತ್ತು ಕಾದನಂತರ ಕಪ್ಪುಬಟ್ಟೆಯುಟ್ಟ ಎಳೆಪ್ರಾಯದ ಹೆಂಗಸೊಬ್ಬಳು ಸ್ವಾಗತಿಸಿದಳು. ಅವಳು ತೀರಿಕೊಂಡ ಮಾರ್ಚೆಸಾಳ ಆಪತಸಹಾಯಕಿಯಾಗಿದ್ದಳು. ಡಾ. ಫಾಲ್ಸಿ ತಾನು ಬಂದ ಉದ್ದೇಶವನ್ನು ವಿವರಿಸಿದ. ಅವಳು ಸಣ್ಣಗೆ ಆಶ್ಚರ್ಯ ವ್ಯಕ್ತಪಡಿಸುತ್ತ ತನಗೆ ವಿಶ್ವಾಸವೇ ಆಗಿಲ್ಲವೆಂಬಂತೆ, “ಹಾಗಾದರೆ…. ಯುವಕರಿಗೂ ಕ್ಯಾಟರ್‍ಅಕ್ಟ್ ಆಗುವ ಸಂಭವ ಇದೆಯಾ?” ಎಂದು ಕೇಳಿದಳು.

ಫಾಲ್ಸಿ ಒಂದು ಕ್ಷಣ ಅವಳ ಕಣ್ಣಲ್ಲಿ ಕಣ್ಣಿಟ್ಟು ಮೋಡಿದ. ನಂತರ ತುಟಿಗಿಂತ, ಕಣುಣಗಳಲ್ಲೇ ವ್ಯಂಗ್ಯ ನಗುವನ್ನು ಸೂಸುತ್ತ ಉತ್ತರಿಸಿದ: “ಯಾಕಾಗಬಾರದು ಮಿಸ್? ಪ್ರೀತಿಗೆ ಸಿಲುಕುವ ಮನುಷ್ಯ ಮಾನಸಿಕವಾಗಿ ಕುರುಡಾಗುವಂತೆ, ದುರದೃಷ್ಟವಶಾತ್ ದೈಹಿಕವಾಗಿಯೂ ಆಗಬಲ್ಲ ….”

ಮಾರ್ಚೇನಾ ಕುಟುಂಬದ ಸದ್ಯದ ಪರಿಸ್ಥಿತಿಯಲ್ಲೀಗ ಯಾವ ವಿಷಯವನ್ನೂ ಮಾತಾಡುವುದು ಸಾಧ್ಯವಿಲ್ಲ ಎಂದು ಸಂಭಾಷಣೆಯನ್ನು ಅಲ್ಲೇ ಮೊಟಕುಗೊಳಿಸಿದಳು. ಮುಂದೆ ಎಲ್ಲವೂ ತಣ್ಣಗಾದ ನಂತರ, ಈ ವಿಷಯದ ಕುರಿತು ಮಾತಾಡಲು ಖಂಡಿತ ನಿಮ್ಮನ್ನು ಕರೆಸುತ್ತೇನೆ ಎಂದಳು.

ಎಲ್ಲ ಮುಗಿದು ತಿಂಗಳು ಮೂರು ದಾಟಿದರೂ ಡಾ. ಫಾಲ್ಸಿಗೆ ಇದುವರೆಗೂ ಕರೆಹೋಗಿಲ್ಲ.

  • * *

ಹಾಗೆ ನೋಡಿದರೆ, ಮೊದಲಸಲ ಈ ವೈದ್ಯನನ್ನು ಹೇಳಿಕಳಿಸಿದ್ದಾಗ ಮಾರ್ಚೆಸಾಳೆದುರು ಈತ ಕೆಟ್ಟದಾಗಿ ಪ್ರಭಾವ ಬೀರಿದ್ದ. ಮಾರ್ಚೆಸಾಳ ಸಹಾಯಕಿಯಾಗಿದ್ದ ಮಿಸ್ ಲಿಡಿಯಾ ವೆಂಚೂರಿ ಮಾತ್ರ ಇದನ್ನು ಸ್ಪಷ್ಟ ನೆನಪಿಟ್ಟುಕೊಂಡಿದ್ದಳು. ಆದರೆ ಸಿಲ್ವಿಯೋನ ಚೇತರಿಸುವಿಕೆಯ ಸಂಭಾವ್ಯತೆಯ ಕುರಿತು ಡಾ. ಫಾಲ್ಸಿ ಶುರುವಿಗೇ ಎಲ್ಲ ಮಾರ್ಚೆಸಾಳ ಹತ್ತಿರ ವಿವರಿಸಿದ್ದಲ್ಲಿ ಅವನ ಬಗೆಗಿನ ನಿಲುವು ಬೇರೆಯೇ ಆಗಿರುತ್ತಿತ್ತೇನೋ. ಇದೇ ಸಂಗತಿ ಮಿಸ್ ಲಿಡಿಯಾಳನ್ನು ಬಾಧಿಸುತ್ತಿತ್ತು ಕೂಡ. ಅವಳ ಪ್ರಕಾರ, ಈ ವೈದ್ಯನ ಎರಡನೇ ಭೇಟಿ-ಅದರಲ್ಲೂ ಮಾರ್ಚೆಸಾ ಸತ್ತ ದಿನವೇ ಬಂದು ತನ್ನ ಅಭಿಪ್ರಾಯವನ್ನು ಸೂಚಿಸಿದ್ದು ಬರೇ ನಾಟಕವಾಗಿತ್ತು.

ಆದರೆ, ಅಷ್ಟರಲ್ಲಾಗಲೇ ಆ ಯುವಕ ತನ್ನ ದುರಾದೃಷ್ಟಕ್ಕೆ ಒಗ್ಗಿಕೊಂಡಂತಿತ್ತು. ಅಂದರೆ, ಅವನ ತಾಯಿ ಹಠಾತ್ತನೆ ತೀರಿಕೊಂಡದ್ದೇ, ಅವನೊಳಗಡೆ ಕುರುಡುತನದ ಜತೆಗೇ ಮತ್ತೊಂದು ಕತ್ತಲು ಸೇರಿಕೊಂಡಿತ್ತು. ಎಲ್ಲ ಪುರುಷರೂ ಒಂಥರಾ ಕುರುಡರೆ! ಹಾಗಾಗಿ ಅವನ ಪಾಲಿಗೆ ಇದು ತುಸು ಭೀಕರವಾದ ಕತ್ತಲೆ ಎಂದೇ ಹೇಳಬಹುದು. ಕಣ್ಣಿದ್ದವರು ಇಂಥ ಕತ್ತಲ ಬದುಕಿನಿಂದ ದೃಷ್ಟಿ ಹೊರಳಿಸಿ ಸುತ್ತಣ ಜಗತ್ತನ್ನಾದರೂ ನೋಡಬಹುದು. ಆದರೆ ಸಿಲ್ವಿಯೋಗೆ ಇದು ಸಾಧ್ಯವಿರಲಿಲ್ಲ. ಪಾಪ, ಈತ ಬದುಕಿನಲ್ಲಷ್ಟೇ ಅಲ್ಲ; ಸಾವಿನಲ್ಲೂ ಕುರುಡನಾಗಿದ್ದ. ಇಂಥ ದಿಗಿಲು ಹುಟ್ಟಿಸುವ ಕಗ್ಗತ್ತಲಲ್ಲಿ ಅವನನ್ನು ಒಬ್ಬಂಟಿಯಾಗಿ ಬಿಟ್ಟು ಅವನ ತಾಯಿ ಸದ್ದಿಲ್ಲದೆ ಮಾಯವಾಗಿದ್ದಳು. ಹಾಗಾಗಿ ಇದರಿಂದ ಭಯ ಹುಟ್ಟಿಸುವ ದೊಡ್ಡ ಶೂನ್ಯ ಕವಿದಿತ್ತು.

ಈ ನಡುವೆ, ಯಾರೆಂದು ಸ್ಪಷ್ಟವಾಗಿ ಗೊತ್ತಿಲ್ಲದಿದ್ದರೂ ಇದ್ದಕ್ಕಿದ್ದಂತೆ ಮಧುರವಾದ ಸ್ವರವೊಂದು ಅಂಥ ಕತ್ತಲಲ್ಲೂ, ಬೆಳಕಿನಂತೆ ಸುಳಿದಿತ್ತು. ಭಯ ಹುಟ್ಟಿಸುವಂಥ ಶೂನ್ಯ ಕವಿದಿದ್ದ ಅವನ ಅಂತರಾತ್ಮ ಆ ಸ್ವರವನ್ನು ತಕ್ಷಣ ಎದೆಗವಚಿಕೊಂಡುಬಿಟ್ಟಿತು.

ಮಿಸ್ ಲಿಡಿಯಾ ಅವನ ಪಾಲಿಗೆ ಬರೇ ಒಂದು ಸ್ವರವಾಗಿದ್ದಳು ಆಷ್ಟೆ. ಆದರೆ ಅವನ ತಾಯಿಗೆ ಮಾತ್ರ, ಕೊನೇದಿನಗಳಲ್ಲಿ ಅವಳು ಅತ್ಯಂತ ಆಪ್ತಳಾಗಿದ್ದಳು. ಯಾವಾಗಲೋ ಒಮ್ಮೆ, ಅವನ ತಾಯಿ, ಲಿಡಿಯಾಳ ಕುರಿತು ಬಹಳ ತೃಪ್ತಿ ವ್ಯಕ್ತಪಡಿಸಿದ್ದನ್ನು ಅವನೀಗ ನೆನಪಿಸಿಕೊಂಡ. ಸಹಜವಾಗಿ ಅವನಿಗೆ ಲಿಡಿಯಾ ಅನುಕಂಪವುಳ್ಳವಳೂ, ಸುಶಿಕ್ಷಿತಳೂ, ಬುಧಿವಂತೆಯೂ ಆಗಿ ಕಂಡಳು. ಅವಳು ಕಾಳಜಿವಹಿಸುತ್ತಿರುವ ರೀತಿ, ಸಮಾಧಾನಪಡಿಸುವ ರೀತಿಯಿಂದ ತನ್ನ ಆರೈಕೆಗೆ ಅತ್ಯಂತ ಅರ್ಹಳಂತೆಯೂ ಕಂಡುಬಂದಳು.

ನಂತರ, ಆತ ತನ್ನ ಪುಕ್ಕಲುತನ ಮತ್ತು ಕುರುಡರಿಗೇ ಇರುವ ವಿಚಿತ್ರ ಕುತೂಹಲವನ್ನು ಮೈಗೂಡಿಸಿಕೊಂಡು ಅವಳ ಗೋಳುಹೊಯ್ಯತೊಡಗಿದ. ತನ್ನೊಳಗಿನ ಕತ್ತಲಲ್ಲಿ ಅವನಿಗೆ ಅವಳನ್ನು ಕಾಣಬೇಕಿತು. ಅವಳ ಸ್ವರ ತನ್ನೊಳಗಡೆ ಒಂದು ಬಿಂಬವಾಗಬೇಕೆಂದಿತ್ತು.

ಶುರುಶುರುವಿಗೆ, ಅಸ್ಪಷ್ಟವಾದ ಚುರುಕು ಪ್ರಶ್ನೆಗಳನ್ನು ಕೇಳಿದ. ಅವಳು ಓದುವಾಗ, ಮಾತಾಡುವಾಗೆಲ್ಲ. ತಾನು ಮನಸ್ಸಲ್ಲೇ ಅವಳನ್ನು ಚಿತ್ರಿಸಿಕೊಂಡ ರೀತಿಯನ್ನು ಹೇಳಬೇಕೆಂದು ಕೊಂಡ.

“ನೀನ ಸುಂದರವಾಗಿದ್ದೀ…. ಅಲ್ವಾ?” ಎಂದ.

“ಹೌದು” ಎಂದಳು.

ನಿಜಕ್ಕೂ ಅವಳು ಸುಂದರಿಯಾಗಿದ್ದಳು. ಆದರೆ ಅವಳ ಕೂದಲುಗಳು ಮಾತ್ರ ತುಸು ತೆಳುವಾಗಿ ಒರಟಾಗಿದ್ದವು. ಇದು ಅವಳ ಕಳೆಗುಂದಿದ ಚರ್ಮದ ಬಣ್ಣಕ್ಕೆ ಚೂರೂ ಹೊಂದಿಕೆಯಾಗುತ್ತಿರಲಿಲ್ಲ. ಆದರೆ ಇದನ್ನು ಅವನಿಗೆ ಹೇಳುವುದು ಹೇಗೆ? ಮತ್ತು ಯಾಕಾದರೂ ಹೇಳಬೇಕು?

“ಅರೆ…. ನಿನ್ನ ಕಣ್ಣುಗಳು ನೀಲಿಯಾಗಿವೆ ಅಲ್ವಾ ?”

ನೀಲಿಯಾಗಿವೆಯೇನೋ ಹೌದು. ಆದರೆ ದುಃಖ, ಖಿನ್ನತೆ, ಬೇಸರ ಎಲ್ಲವೂ ಎದ್ದುಕಾಣುವ ಹುಬ್ಬಿನ ಕೆಳಭಾಗದಲ್ಲಿ ಮಡುಗಟ್ಟಿವೆ. ಇದನ್ನೆಲ್ಲ ಅವನಿಗೆ ಹೇಗೆ ಹೇಳುವುದು? ಮತ್ತು ಹೇಳುವುದಾದರೂ ಯಾಕೆ?

ಅವಳ ಮುಖ ಸುಂದರವಾಗಿರಲಿಲ್ಲ ನಿಜ. ಆದರೆ ಅವಳ ಕೈಗಳು, ಅವಳ ಸ್ವರ ಎಲ್ಲವೂ ಸುಂದರವಾಗಿದ್ದವು. ನಿಜವಾದ ಅರ್ಥದಲ್ಲಿ ಸುಂದರ! ಸುಕೋಮಲವೂ, ನಾಜೂಕೂ ಆಗಿದ್ದ ಅವಳ ದೇಹ ಬಳುಕುವಂತಿತ್ತು.

ಮುಖದಲ್ಲಿ ಖಿನ್ನತೆ, ವಿಷಣ್ಣತೆಯಿದ್ದರೂ, ಅವಳ ಸ್ವರ ಮಾತ್ರ ಅತ್ಯಂತ ಮಧುರವಾಗಿತು. ಈತ ತನ್ನ ಸ್ವರದ ಮಾದುರ್ಯಕ್ಕೆ ಕರಗಿ ಪೆದ್ದು ಪೆದ್ದು, ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಾನೆಂದು ಅವಳಿಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಅವಳು ಕನ್ನಡಿಯ ಎದುರು ನಿಂತರೂ, ಅವನು ತನ್ನ ಕುರಿತು ಕಲ್ಪಿಸಿಕೊಂಡ ಆ ಕಾಲ್ಪನಿಕ ಬಿಂಬದಂತೆ ಕಾಣಿಸಿ ಕೊಳ್ಳಲು ಹೆಣಗಾಡುತ್ತಿದ್ದಳು. ಅವನೊಳಗಿನ ಆ ಕತ್ತಲ ಕಾಲ್ಪನಿಕ ಮುಖಭಾವಕ್ಕೆ ಹೊಂದುವ ಪ್ರಯತ್ನ ಮಾಡುತ್ತಿದ್ದಳು. ಈ ಎಲ್ಲದರ ನಡುವೆ, ಅವಳಿಗೂ ಅವಳ ಕೊರಳಿನಿಂದ ಹೊಮ್ಮುವ ಸ್ವಂತದ ಸ್ವರ ಅವಳದ್ದೆಂದನಿಸದೆ ಅವನ ಕಲ್ಪನೆಯಲ್ಲಿ ಮೂಡಿದ ಸ್ವರದಂತೆ ಅನಿಸಲು ಪ್ರಾರಂಭವಾಯಿತು. ಥಟ್ಟನೆ ನಕ್ಕರೂ, ಅವಳಿಗೆ ತಾನೇ ನಕ್ಕಂತೆ ಅನಿಸದೆ ಅವನ ಮನಸ್ಸಿನ ಬಿಂಬ ನಕ್ಕಂತೆ ಅನಿಸತೊಡಗಿತು.

ಇದರಿಂದಾಗಿ ಅವಳಿಗೆ ಅತೀವ ಹಿಂಸೆಯಾಗತೊಡಗಿತು; ಈಗ ಗಲಿಬಿಲಿಗೊಂಡಳು. ಆತ ತನ್ನೊಳಗೆ ಎಬ್ಬಿಸಿದ ಅನುಕಂಪದಿಂದ ಯಾಕೋ ಅವಳಿಗೆ ತಾನು ತಾನಾಗಿರದೆ, ತನ್ನ ಅಂತರಾತ್ಮಕ್ಕೇ ದ್ರೋಹ ಮಾಡುತ್ತಿರುವಂತೆ ಅನಿಸತೊಡಗಿತು. ಬರೇ ಅನುಕಂಪ ಮಾತ್ರವಲ್ಲ…. ಅದೀಗ ಪ್ರೇಮ ಕೂಡಾ ಆಗಿತ್ತು. ಅವನ ಕೈಗಳಿಂದ ತನ್ನ ಕೈಯನ್ನು ಹಿಂದಕ್ಕೆಳೆಯಲು ಅವಳಿಗಾಗುತ್ತಿರಲಿಲ್ಲ. ಅವನ ಸೆಳೆತದಿಂದಾಗಿ ತನ್ನ ಮುಖವನ್ನು ಅವನಿಂದ ತಿರುಗಿಸಲೂ ಸಾಧ್ಯವಾಗುತ್ತಿರಲಿಲ್ಲ.

“ಬೇಡಪ್ಪ…. ಹೀಗೆಲ್ಲ ಆಗುವುದಾದರೆ ಬೇಡ….”

ತನ್ನೊಳಗಿನ ಗುದ್ದಾಟಗಳಿಂದ ಪಾರಾಗಿ ತಕ್ಷಣ ಒಂದು ನಿರ್ಧಾರಕ್ಕೆ ಬರುವುದು ಮಿಸ್. ಲಿಡಿಯಾಗೆ ಅನಿವಾರ್ಯವಾಗಿಬಿಟ್ಟಿತು. ಯುವಕ ಮಾರ್ಚೆಸಾನಿಗೆ ಹತ್ತಿರದ ಅಥವಾ ದೂರದ ಯಾವ ಸಂಬಂಧಿಕರೂ ಇರಲಿಲ್ಲ. ಅವನ ಬದುಕಿನ ನಿರ್ಧಾರಗಳಿಗೆ, ಬೇಕು ಬೇಡಗಳಿಗೆ ಅವನೇ ಅಧಿಪತಿಯಾಗಿದ್ದ. ಆದರೆ ಊರಿನ ಜನ ಬಿಡಬೇಕಲ್ಲ. ಮಾರ್ಚೆಸಾನ ಸಂಕಷ್ಟಗಳಿಂದ ಲಾಭ ಪಡೆದು ಈಕೆ ಅವನನ್ನೇ ಮದುವೆಯಾಗಿ ಶ್ರೀಮಂತಳಾಗಿಬಿಟ್ಟರೆ ಎಂದವರು ಯೋಚಿಸುವುದಿಲ್ಲವೆ? ಖಂಡಿತಾ ಹೇಳಿಯೇ ಹೇಳುತ್ತಾರೆ. ಕಾಲುಬಾಲ ಸೇರಿಸಿಯೇ ಹೇಳುತ್ತಾರೆ. ಆದರೆ ಹೀಗೇ ಎಷ್ಟು ಸಮಯ ಅಂತ ಇದೇ ಮನೆಯಲ್ಲಿರುವುದು? ಹೊಟ್ಟೆಕಿಚ್ಚುಪಡುವ ಜನರಿಗೆ ಹೆದರಿ ಈ ಕುರುಡನನ್ನು ಹೀಗೇ ಕೈಬಿಡುವುದು ಕ್ರೌರ್ಯವಲ್ಲವೆ? ಹಾಗೆ ನೋಡಿದರೆ, ಅವಳು ಬಹಳ ಅದೃಷ್ಟಶಾಲಿ ಎಂಬುದರಲ್ಲಿ ಅನುಮಾನವೇ ಇಲ್ಲ. ಆತನನ್ನು ನೇರ ಪ್ರೀತಿಸುವ ಸುಯೋಗ ಸಿಕ್ಕಿದ್ದರಿಂದ ಅವಳು ದೊಡ್ಡ ಮಟ್ಟದಲ್ಲಿ ಅದೃಷ್ಟಶಾಲಿ ಎನ್ನಬಹುದು. ತನ್ನ ದೇಹ-ಮನಸ್ಸು ಪೂರ್ತಿಯಾಗಿ ಇನ್ನು ಮುಂದೆ ಯಾವತ್ತೂ ಅವನವೇ ಎಂದು ನಿರ್ಭಿಡೆಯಿಂದ ಹೇಳುವ ಸುಯೋಗ ಇದು. ಅವನಿಗೆ-ಅವನನ್ನೇ ನೋಡಲಾಗುತ್ತಿಲ್ಲ. ಚಿಕ್ಕ ಹುಡುಗಿಯಂತೆ ಸುಂದರನಾಗಿರುವ ಅವನಿಗೆ ತನ್ನೊಳಗಿನ ಅಸಂತೃಪ್ತ ಮನಸ್ಸನ್ನು ಬಿಟ್ಟರೆ ಬೇರೇನನ್ನು ನೋಡಲಾಗುತ್ತಿಲ್ಲ. ಅವಳು ಅವನನ್ನು ನೋಡುತ್ತ ಯೋಚಿಸುವುದಿತ್ತು: “ನೀನು ಯಾವತ್ತೂ ನನ್ನವನೇ… ಯಾಕೆಂದರೆ ನಿನಗೆ ನಿನ್ನನ್ನೇ ನೋಡಲಾಗುತ್ತಿಲ್ಲ…. ನಿನ್ನನ್ನೇ ಅರಿಯಲು ಸಾಧ್ಯವಾಗುತ್ತಿಲ್ಲ. ನಿನ್ನ ಆತ್ಮ ನಿನ್ನೊಳಗಡೆಯೇ ಬಂಧಿಯಾಗಿಬಿಟ್ಟಿದೆ. ಹೂರಗನ್ನು ಕಾಣಲು ನನ್ನ ಅವಶ್ಯಕತೆ ಇದೆ. ಆದರೆ ಅವನ ಆಸೆ-ಆಕಾಂಕ್ಷೆಗಳನ್ನು ಪೂರೈಸುವ ಮುನ್ನ ಆತನ ಕಲ್ಪನೆಯಂತೆ ತಾನಿಲ್ಲ ಎಂದು ಮೊದಲೇ ಅವನಿಗೆ ಸೂಚಿಸುವುದು ಅಗತ್ಯೆವಲ್ಲವೆ? ಮೌನವಾಗಿರುವುದು ಅವನನ್ನು ಮೋಸ ಮಾಡಿದಂತಲ್ಲವೆ! ಹೌದು. ಮೋಸವೇ ಆಗುತ್ತದೆ. ಆತ ಕುರುಡ ಎಂಬ ಒಂದೇ ಕಾರಣದಿಂದ ಅವನನ್ನು ಪ್ರೀತಿಯಿಂದ ತೃಪ್ತಿಪಡಿಸಬಹುದು ಅಷ್ಟೆ. ಅಲ್ಲದೆ ಅವಳೇನೂ ಕುರೂಪಿಯಾಗಿರಲಿಲ್ಲ. ಆದರೆ ಬೇರೆಯೇ ಒಬ್ಬಳು – ನಿಜವಾಗಿಯೂ ಸುಂದರವಾಗಿರುವವಳು – ಅವನ ಈ ಪರಿಸ್ಥಿತಿಯಲ್ಲಿ ಮೋಸ ಮಾಡುತ್ತಿದ್ದಳೋ ಏನೋ…. ಯಾರಿಗ್ಗೊತ್ತು?

ಬಹಳ ದಿವಸದ ಅನಿಶ್ಚಿತತೆ, ಯಾತನೆಯ ನಂತರ ಕೊನೆಗೂ ಮದುವೆಯೆಂದು ನಿಶ್ಚಯವಾಯಿತು. ತೀರಿಕೊಂಡ ತಾಯಿಯ ಶೋಕಾಚರಣೆಯ ಆರನೇ ತಿಂಗಳು ಸರಿದ ತಕ್ಷಣವೇ ಮದುವೆ ಎಂದಾಯಿತು.

ಹಾಗಾಗಿ ಅವಳಿಗೆ ಸೂಕ್ತ ತಯಾರಿ ನಡೆಸಲು ಇನ್ನೂ ಒಂದೂವರೆ ತಿಂಗಳ ಕಾಲಾವಕಾಶವಿತ್ತು. ಅವು ಅತ್ಯಂತ ಸಂತೋಷದ ದಿನಗಳಾಗಿದ್ದವು. ಮನೆಯನ್ನು ಸಜ್ಜುಗೊಳಿಸುವುದು, ಅವನ ಆರೈಕೆ, ಪ್ರೀತಿಯ ಉತ್ಕಟತೆ ಎಲ್ಲದರ ನಡುವೆ ಅವನಿಂದ ಸಣ್ಣಗೆ ಕೊಸರಿ ಕೊಳ್ಳುತ್ತಿದ್ದಳು. ಇಬ್ಬರೂ ಸೇರಿ ಅನುಭವಿಸುವ ಈ ಸುಖದ ತೀವ್ರತೆಯನ್ನು ಮದುವೆಯ ದಿನದ ತನಕ ಕಾಯ್ದುಕೊಂಡಿದ್ದಳು.

ಇನ್ನು ಬರೇ ಒಂದು ವಾರವೂ ಇಲ್ಲ ಅನ್ನುವಾಗ ಲಿಡಿಯಾಗೆ ಅನಿರೀಕ್ಷಿತವೆಂಬಂತೆ ಡಾ. ಗಿಯೂನಿಯೋ ಫಾಲ್ಸಿಯ ಆಗಮನದ ಸುದ್ದಿ ಬಂತು.

ಮೊದಲಿಗೇ ಆಕೆ, ತಾನು ಮನೆಯಲ್ಲಿ ಇಲ್ಲ ಎಂದೇನೋ ಪಿಸುಗುಟ್ಟಿದಳು. ಆದರೆ ಕುರುಡನಿಗೆ ಸಣ್ಣಧ್ವನಿಯಲ್ಲಿ ಯಾರೋ ಮಾತಾಡುತ್ತಿರುವುದು ಕೇಳಿಸಿತು.

“ಯಾರದು?” ಎಂದ.

“ಡಾ. ಫಾಲ್ಸಿ ಬಂದಿದ್ದಾರೆ….” ಕೆಲಸದಾಳು ಪುನರುಚ್ಚರಿಸಿದ.

“ನಿನ್ನ ತಾಯಿ ತೀರಿಕೊಳ್ಳುವ ಕೆಲವೇ ದಿನಗಳ ಮುಂಚೆ ಆ ವೈದ್ಯನನ್ನು ಕರೆಸಿದ್ದಳು…. ಗೊತ್ತಲ್ಲ” ಎಂದಳು ಲಿಡಿಯಾ.

“ಓಹೋ…. ಹೌದೌದು ಗೊತ್ತಿದೆ…. ಆತ ಬಹಳಹೊತ್ತು ನನ್ನನ್ನು ಪರೀಕ್ಷಿಸಿದ್ದ. ಇನ್ನೂ ನೆನಪಿದೆ…. ಬಹಳ ಸಮಯ ಕೂಡ ತೆಗೊಂಡಿದ್ದ…. ಮತ್ತೆ ಬರ್ತೇನೆಂದೂ ಹೇಳಿದ್ದ.” ನೆನಪಿಸಿಕೊಳ್ಳುತ್ತ ಬೋರ್ಗಿ ಹೇಳಿದ.

“ನಿಲ್ಲು….” ಎಂದ ಲಿಡಿಯಾ ತಕ್ಷಣ ತುಸು ವ್ಯಗ್ರವಾಗಿಯೇ ಅವನನ್ನು ತಡೆದು

“ಅವನಿಗೇನು ಬೇಕೆಂದು ನಾನೇ ವಿಚಾರಿಸಿ ಬರುತ್ತೇನೆ” ಎಂದಳು.

ಅತಿಥಿಗಳ ಸ್ವಾಗತಕೋಣೆಯ ನಡುಮಧ್ಯೆ ಡಾ. ಫಾಲ್ಸಿ ತನ್ನ ಕಣ್ಣುಗಳನ್ನು ಅರ್ಧವೇ ಮುಚ್ಚಿ ಬಕ್ಕತಲೆಯನ್ನು ಹಿಂದಕ್ಕೆತ್ತಿ ಗದ್ದಭಾಗದ ಚಿಕ್ಕಗಡ್ಡವನ್ನು ತುರಿಸಿಕೊಳ್ಳುತ್ತಿದ್ದ – ಅನ್ಶಮನಸ್ಕನಂತೆ.

ಅವನಿಗೆ ಗೊತ್ತಾಗದಂತೆ ಮೆಲ್ಲಬಂದ ಲಿಡಿಯಾ, “ಕೂತ್ಕೊಳ್ಳಿ ಡಾಕ್ಟರೆ” ಎಂದಳು.

ಫಾಲ್ಸಿ ಮತ್ತೆ ತಲೆಯೆತ್ತಿ ಬಾಗಿ, “ಕ್ಷಮಿಸಿ….” ಎಂದೇನೋ ಹೇಳಬೇಕೆನ್ನುವಷ್ಟರಲ್ಲಿ, ಅವಳ ಉದ್ವೇಗ ಹೆಚ್ಚಾಗಿ ರೇಗಿಬಿಟ್ಟಳು.

“ನಿಮಗೆ ಬರಲು ಕರೆ ಹೋಗಿರಲಿಲ್ಲವಲ್ಲ….” ಎಂದಳು.

“ನನ್ನ ಕ್ಷಮಿಸಿ ಮಿಸ್” ಎಂದ ಫಾಲ್ಸಿ ಎಂದಿನ ತನ್ನ ಅಣುಕುನಗುವನ್ನು ತುಟಿಗಳಲ್ಲಿ ತೇಲಿಸಿದ.

“ಯಾಕೆ? ಇದೆಲ್ಲ ….” ಎಂದ ಲಿಡಿಯಾಳ ಮುಖ ಈಗ ಕೆಂಪೇರಿತು.

“ನನ್ನಂಥ ವಿಜ್ಞಾನಕ್ಕೆ ಸಂಬಂಧಪಟ್ಟ ಮನುಷ್ಯನಿಗೆ ಇಂಥ ಕುತೂಹಲಕರ ಮೆಡಿಕಲ್ ಕೇಸ್ಗಳಲ್ಲಿ ಎಷ್ಟೊಂದು ಆಸಕ್ತಿ ಇರುತ್ತದೆ ಅಂತ ನಿಮಗೆ ಗೊತ್ತಿರಲಿಕ್ಕಿಲ್ಲ. ಆದರೆ ನಿಮಗೆ ನಿಜಸಂಗತಿ ಹೇಳಲೇಬೇಕು ಮಿಸ್. ಮಾರ್ಚೆಸಾ ಬೋರ್ಗಿಯ ಕೇಸು ನನ್ನ ಅಭಿಪ್ರಾಯದ ಪ್ರಕಾರ ವಿಚಿತ್ರವೂ, ಅಸಾಧಾರಣವೂ ಆಗಿದೆಯಾದರೂ ನಾನು ಮಾತ್ರ ಆದನ್ನು ಮರೆತೇ ಬಿಟ್ಟಿದ್ದೆ. ನಿನ್ನೆ ಗೆಳೆಯರ ಜೊತೆ ಹರಟೆ ಹೊಡೆಯುವಾಗ ನಿಮ್ಮ ಜತೆ ಅವನ ಮದುವೆ ಅಂತ ಗೊತ್ತಾಯಿತು. ಇದು ನಿಜವೇ ಮಿಸ್?”

ಲಿಡಿಯಾ ತುಸು ಬಿಗುಮಾನದಿಂದಲೇ ಹೌದೆಂದು ತಲೆಯಾಡಿಸಿದಳು.

“ಹಾಗಾದರೆ ಶುಭಾಶಯಗಳು” ಎಂದ ಫಾಲ್ಸಿ ಮತ್ತೆ ಮುಂದುವರೆದ: “ಹಾಂ…. ಈಗ ಥಟ್ಟನೆ ನೆನಪಾಯಿತು. ಉಳಿದ ನನ್ನ ಖ್ಯಾತ ಸಹವೈದ್ಯರೆಲ್ಲ ಗ್ಲೌಕೋಮಾ ಎಂದೇ ನಿರ್ಧರಿಸಿದ್ದಾರೆ ಅಲ್ವೇ? ಇದೇ ಕಾಯಿಲೆ ಅಂತ ಸಾಮಾನ್ಯವಾಗಿ ಎಲ್ಲರೂ ಸುಲಭವಾಗಿ ನಿರ್ಧರಿಸಿಬಿಡುತ್ತಾರೆ ಮಿಸ್. ನಿಜದಲ್ಲಿ, ಈ ಖ್ಯಾತ ವೈದ್ಯರೆಲ್ಲ ಮಾರ್ಚೆಸಾನನ್ನು ನಾನು ಪರೀಕ್ಷಿಸುವ ವೇಳ ಉಪಸ್ಥಿತರಿದ್ದಲ್ಲಿ ಅವರು ಇದು ಗ್ಲೌಕೋಮಾ ಅಲ್ಲವೆಂಬ ನಿರ್ಧಾರಕ್ಕೆ ಬರುತ್ತಿದ್ದರು. ಇರಲಿ, ನಾನು ಎರಡನೇ ಸಲ ಬರುತ್ತೇನೆಂದು ಹೇಳಿದ್ದು ನೆನಪಾಯಿತು. ಬಹುಶಃ ಮಿಸ್, ನನಗನ್ನಿಸುತ್ತೆ – ನೀವು ಮೊದಲ ಸಲ ಮಾರ್ಚೆಸಾ ತೀರಿಕೊಂಡಿದ್ದರಿಂದ ಮತ್ತು ಎರಡನೇ ಸಲ ಈ ಮದುವೆಯಂಥ ಹೊಸ ಸಂಗತಿಯಿಂದಾಗಿ ಇದನ್ನೆಲ್ಲ ಖಂಡಿತ ಮರೆತಿದ್ದೀರಿ…. ನಾನು ಸರಿಯಾಗಿಯೇ ಹೇಳಿದೆನಲ್ಲ…. ಮರೆತಿದ್ದೀರಿ…. ಹೌದಲ್ಲ ?”

ವೈದ್ಯನ ಈ ಕಹಿಯಾದ ಉದ್ದ ಭಾಷಣ ಅವಳಿಗೆ ಹಿಂಸೆಯಾಗತೊಡಗಿತು.

“ಇಲ್ಲ” ಎಂದು ಹರಿತವಾಗಿಯೇ ವಿರೋಧಿಸಿದಳು.

“ಇಲ್ಲವೇ?” ಕೇಳಿದ ಫಾಲ್ಸಿ.

“ಇಲ್ಲ” ಎಂದು ಮತ್ತೆ ಹೇಳಿದ ಲಿಡಿಯಾ ನಂತರ, “ನನಗೆ ನೆನಪಿರುವಂತೆ, ನೀವು ಹೇಳಿದ ಮೇಲೂ ಮೌರ್ಚೆಸಾರಿಗೆ ತಮ್ಮ ಮಗ ಗುಣ ಹೊಂದುತ್ತಾನೆಂಬ ಭರವಸೆ ಚೂರೂ ಇರಲಿಲ್ಲ” ಎಂದಳು. ದನಿ ಧೃಡವಾಗಿತ್ತು.

“ಆದರೆ, ಅವರ ಮಗನ ಖಾಯಿಲೆಯ ಕುರಿತ ನನ್ನ ದೃಷ್ಟಿಕೋನವನ್ನು ನಾನು ಮಾರ್ಚೆಸಾರಿಗೇನೂ ಹೇಳೇ ಇಲ್ಲವಲ್ಲ” ಎಂದು ಫಾಲ್ಸಿ ತಕ್ಷಣ ಹಿಮ್ಮೆಟ್ಟಿದ.

“ಹೇಳಿಲ್ಲ ನಿಜ…. ಆದರೆ ನನಗೆ ಹೇಳಿದಿರಲ್ಲ…. ನನಗೂ ಕೂಡಾ ಮಾರ್ಚೆಸಾರಂತೆ ಚೂರೂ ಭರವಸೆ ಇರಲಿಲ್ಲ.”

ಫಾಲ್ಸಿ ಮಧ್ಯೆ ಬಾಯಿಹಾಕಿ, “ಆದರೆ ಈ ನಡುವೆ ಮಗನಿಗೆ ನನ್ನ ಬರುವಿಕೆಯ ಬಗ್ಗೆ ಏನೂ ಹೇಳಿಲ್ಲವಲ್ಲ ….”

“ಇಲ್ಲ. ಒಮ್ಮೆಯೂ ಹೇಳಿಲ್ಲ.”

“ಆಮೇಲೂ, ಹೇಳಿಲ್ಲವೆ?”

“ಇಲ್ಲ, ಆಮೇಲೂ ಹೇಳಿಲ್ಲ…. ಯಾಕೆಂದರೆ….”

ಡಾ. ಫಾಲ್ಸಿ ಒಂದು ಕೈ ಎತ್ತಿ: “ಗೊತ್ತಾಯಿತು…. ಅಷ್ಟರಲ್ಲಿ ಪ್ರೇಮ ಉಂಟಾಯಿತು… ಆದರೆ ನನ್ನ ಕ್ಷಮಿಸಿ ಮಿಸ್… ಪ್ರೇಮ ಕುರುಡು ಎಂಬ ಮಾತಿದೆ. ನೀವು ನಿಜವಾಗಿಯೂ ಮಾರ್ಚೆಸಾನ ಪ್ರೇಮ ಇಷ್ಟೊಂದು ಕುರುಡಾಗಲು ಅಂದರೆ ದೈಹಿಕವಾಗಿಯೂ ಕುರುಡಾಗುವಂತೆ ಬಯಸುವಿರಾ?”

ಈ ಮನುಷ್ಯನ ಇರಿಯುವಂಥ ಮಾತುಗಳನ್ನು ಎದುರಿಸಲು ತಾನಿನ್ನೂ ಬಿಗುಮಾನದಿಂದ ಇದ್ದರೆ ಏನೂ ಪ್ರಯೋಜನವಿಲ್ಲ ಎಂದು ಲಿಡಿಯಾಗೆ ಗೊತ್ತಾಯಿತು. ಅವನ ಅನುಮಾನದ ಮಾತುಗಳಿಂದ ತನ್ನ ಘನತೆ ಕಾಪಾಡಿಕೊಳ್ಳಬೇಕೆಂದುಕೊಂಡಳು. ಆದ್ದರಿಂದ ಸಹಜವಾಗಿಯೇ, ಮುಂದಿನ ಸಂಭಾಷಣೆಯಲ್ಲಿ ಸಂಯಮವನ್ನು ಪ್ರದರ್ಶಿಸಿದಳು: “ನಿಮ್ಮ ಪ್ರಕಾರ, ಮಾರ್ಚೆಸಾಗೆ ನಿಮ್ಮ ಸಹಾಯ ಪಡೆದುಕೊಂಡರೆ ದೃಷ್ಟಿ ವಾಪಸಾಗಬಹುದೆ?”

“ದುಡುಕಬೇಡಿ…. ಮಿಸ್. ನಾನೇನೂ ಭಗವಂತನಲ್ಲ…. ನಾನು ಮಾರ್ಚೆಸಾನ ಕಣ್ಣುಗಳನ್ನು ಒಮ್ಮೆ ಮಾತ್ರ ಪರೀಕ್ಷಿಸಿದ್ದು. ಹಾಗಾಗಿ ಗ್ಲೌಕೋಮಾ ಅಲ್ಲವೆಂದು ಖಾತರಿ ಪಡಿಸಿಕೊಂಡೆ. ಈ ನನ್ನ ನಿರ್ಧಾರ ಇನ್ನೂ ಅನುಮಾನವಾಗಿಯೇ ಉಳಿದಿದೆ. ಬಹುಶಃ ನಿಮ್ಮ ಭಾವೀಪತಿಯ ಒಳಿತಿಗೆ ಇಷ್ಟು ಧಾರಾಳ ಸಾಕು ಎಂದು ನನ್ನ ಅನಿಸಿಕೆ! ಎಂದ.

“ಆದರೆ ಈ ಅನುಮಾನ ಸುಳ್ಳೆಂದು ಸಾಬೀತಾದರೆ? ನಿಮ್ಮ ಪರೀಕ್ಷೆಯ ನಂತರವೂ ನನ್ನ ಈ ಸಣ್ಣ ಭರವಸೆಯೂ ಭಗ್ನವಾಗಿಬಿಟ್ಟರೆ? ನೀವು ಆಗಲೇ ಕ್ಷೋಭೆಗೊಳಗಾದವನನ್ನು ವ್ಯರ್ಥ ತೊಂದರೆ ಕೊಟ್ಟಂತಾಗುವುದಿಲ್ಲವೆ?”

“ಇಲ್ಲ ಮಿಸ್” ಫಾಲ್ಸಿ ತಣ್ಣಗಿನ, ಆದರೆ ಗಂಭೀರ ದನಿಯಲ್ಲಿ ಉತ್ತರಿಸಿದ.

ಮಾತನ್ನು ಮುಂದುವರೆಸಿದ ಪಾಲ್ಸಿ: “ಓರ್ವ ವೈದ್ಯನಾಗಿ ಯಾವ ಆಹ್ವಾನವೂ ಇಲ್ಲದೆ ಬಂದುಬಿಡುವುದು ನನ್ನ ಕರ್ತವ್ಯವೆಂದು ನೇರ ಬಂದುಬಿಟ್ಚೆ. ಇದೀಗ ಬರೇ ವೈದ್ಯಕೀಯ ಕೇಸಷ್ಟೇ ಆಗಿ ಉಳಿದಿಲ್ಲ. ಕರ್ತವ್ಯಪ್ರಜ್ಞೆಯನ್ನು ನಿರ್ವಹಿಸುವ ಕೇಸೂ ಹೌದು.”

“ಅಂದರೆ, ನಿಮ್ಮ ಅನುಮಾನ….” ಲಿಡಿಯಾ ತಡೆಯಲು ಪ್ರಯತ್ನಿಸಿದಳು. ಫಾಲ್ಸಿ ಅದಕ್ಕೆ ಆಸ್ಪದವೇ ಕೊಡದೆ ಮುಂದುವರೆಸಿದ: “ಈಗಷ್ಟೇ ನೀವು ಹೇಳಿದಿರಿ…. ನನ್ನ ಬರುವಿಕೆಯ ಕುರಿತು ಮಾರ್ಚೆಸಾಗೆ ನೀವೇನೂ ಹೇಳಲಿಲ್ಲ ಅಂತ. ಆದರೆ ಅದಕ್ಕೆ ಕೊಟ್ಟ ಕಾರಣ ಮಾತ್ರ ನಾನೊಪ್ಪಿ ಕೊಳ್ಳಲಾರೆ. ಯಾಕೆಂದರೆ ಅದರಿಂದ ನನ್ನ ಅವಮಾನವಾಯಿತು ಎಂದಲ್ಲ; ನನ್ನ ಮೇಲೆ ಭರವಸೆ ಇದೆಯೋ, ಇಲ್ಲವೋ ಅಂತ ಮಾರ್ಚೆಸಾನ ಬಾಯಿಂದಲೇ ಬರಬೇಕೇ ಹೊರತು ನಿಮ್ಮಿಂದಲ್ಲ. ನೋಡಿ ಮಿಸ್. ತುಸು ಕಟುವಾಗಿಯೇ ನಾನು ಮಾತಾಡುತ್ತಿರಬಹುದು. ಇಲ್ಲ ಅನ್ನುವುದಿಲ್ಲ. ಆದರೆ ನನ್ನ ಕ್ಲಿನಿಕ್ಕಿಗೆ ಮಾರ್ಚೆಸಾ ಬಂದರೆ ಅವನಿಂದ ಯಾವುದಕ್ಕೂ ಹಣವನ್ನೇ ಪಡೆಯುವುದಿಲ್ಲ. ಅಷ್ಟೇ ಅಲ್ಲ, ವೈದ್ಯವಿಜ್ಞಾನದ ಎಲ್ಲಾ ಸೌಲಭ್ಯಗಳನ್ನು ಸಂಪೂರ್ಣ ನಿರ್ವಂಚನೆಯಿಂದ ಒದಗಿಸಬಲ್ಲೆ. ಇಷ್ಟು ಹೇಳಿದ ಮೇಲೆ, ಈಗಲಾದರೂ ಮಾರ್ಚೆಸಾನಿಗೆ ನಾನು ಬಂದಿರುವ ಸಂಗತಿ ತಿಳಿಸಬಹುದೆ?”

ಲಿಡಿಯಾ ಎದ್ದು ನಿಂತಳು.

ಫಾಲ್ಸಿ ಕೂಡಾ ತನ್ನ ರೂಢಿಯ ಶೈಲಿಯಲ್ಲಿ ಎದ್ದು ನಿಂತು, “ನಿಲ್ಲಿ ಮಿಸ್, ಕಳೆದ ಸಲ ಬಂದಿದ್ದರ ಕುರಿತು ನಾನು ಒಂದು ಶಬ್ದವನ್ನೂ ಅವನಿಗೆ ಹೇಳುವುದಿಲ್ಲ ಎಂದು ನಿಮಗೆ ಹೇಳುತ್ತಿದ್ದೇನೆ. ಬೇಕಾದರೆ ಈಗ ಮದುವೆಗೆ ಮುಂಚೆ ನೀವೇ ನನ್ನನ್ನು ಮುಂಜಾಗ್ರತೆಯ ದೃಷ್ಟಿಯಿಂದ ಕರೆಸಿದ್ದು ಎಂದೂ ಹೇಳುತ್ತೇನೆ.”

ಲಿಡಿಯಾ ಚೂರೂ ಎದೆಗುಂದದೆ, ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದಳು.

“ನೀವು ಅವನ ಬಳಿ ನಿಜ ಹೇಳುತ್ತೀರಾ…. ಬೇಡ ನಾನೇ ನಿಜ ಹೇಳಿಬಿಡುತ್ತೇನೆ.”

“ಏನಂತ ಹೇಳ್ತೀರಿ? ನೀವು ನನ್ನನ್ನು ನಂಬಲಿಲ್ಲ ಅಂತಯೋ?”

ಫಾಲ್ಸಿ ಭುಜಹಾರಿಸುತ್ತ ಮುಗುಳ್ನಕ್ಕ: “ಇದರಿಂದ ನಿಮಗೇ ತೊಂದರೆ…. ಮತ್ತು ನನಗದು ಬೇಕಾಗಿಲ್ಲ ಕೂಡ. ಆದರೆ ನಾನು ಮುದುವೆಯ ನಂತರವೇ ಬರುವ ಹಾಗೆ ನನ್ನ ಆಗಮನವನ್ನು ಮುಂದೂಡುವುದಾದರೆ ನನಗೇನೂ ಅಭ್ಯಂತರವಿಲ್ಲ. ಮತ್ತೆಂದಾದರೂ ಬರುತ್ತೇನೆ.”

ಮಾತಿಗಿಂತ, ದೈಹಿಕ ಹಾವಭಾವಗಳಲ್ಲೇ “ಬೇಡ’ ಎಂದು ನಿರಾಕರಿಸಿದಳು. ವೈದ್ಯನ ಈ ತೋರುಗಾಣಿಕೆಯ ಔದಾರ್ಯದಿಂದ ಅವಳ ಮುಖ ನಾಚಿಕೆಯಿಂದ ಕೆಂಪೇರಿತು. ತನ್ನ ಕೈಯಿಂದಲೇ ‘ಬಾ’ ಎಂಬಂತೆ ವೈದ್ಯನಿಗೆ ಸೂಚಿಸಿದಳು.

ಅಲ್ಲಿ ಸಿಲ್ವಿಯೋ ಬೋರ್ಗಿ ತಾಳ್ಮೆ ಕಳಕೊಂಡವನಂತೆ ತನ್ನ ಕೋಣೆಯಲ್ಲಿ ಕಾಯುತ್ತಿದ್ದ.

“ಸಿಲ್ವಿಯೋ… ಡಾ ಫಾಲ್ಸಿ ಬಂದಿದ್ದಾರೆ”! ಎಂದಳು ಲಿಡಿಯಾ, ನಡುಗುತ್ತ.
“ಕೆಳಗಡೆ, ನಾವು…. ನಮ್ಮ ನಮ್ಮ ಕೆಲ ತಪ್ಪುಗ್ರಹಿಕೆಗಳನ್ನು ಸ್ಪಷ್ಟಪಡಿಸಿಕೊಳ್ಳುತ್ತಿದ್ದೆವು. ನಿನಗೆ ನೆನಪಿದೆಯಾ…. ಮೊದಲಸಲ ವೈದ್ಯರು ಭೇಟಮಾಡಿದ್ದಾಗ ಮುಂದೊಂದು ದಿನ ಮತ್ತೆ ವಾಪಾಸಾಗುತ್ತೇನೆಂದು ಅವರು ಹೇಳಿದ್ದು?”

“ಹೌದು…. ವೈದ್ಯರೆ…. ನನಗೆ ಚೆನ್ನಾಗಿ ನೆನಪಿದೆ.” ಉತ್ತರಿಸಿದ ಬೋರ್ಗಿ.

“ಈಗ ನಿನಗೆ ಗೊತ್ತಿಲ್ಲದಿರುವ ವಿಷಯ ಎಂದರೆ ನಿನ್ನ ತಾಯಿ ತೀರಿಕೊಂಡ ಬೆಳಿಗ್ಗೆಯೇ ಇವರು ಬಂದಿದ್ದರು. ನನ್ನ ಜತೆ ಮಾತಾಡುತ್ತ, ನಿನ್ನ ಕಾಯಿಲೆ ಅಸಲಿಗೆ ಉಳಿದ ವೈದ್ಯರು ಅಂದುಕೊಂಡಂತಲ್ಲ ಎಂದೂ ಹೇಳಿ ತಮ್ಮ ಅಭಿಪ್ರಾಯದ ಪ್ರಕಾರ, ಅದು ಗುಣಪಡಿಸಲು ಸಾಧ್ಯವಾಗುವಂಥದು ಎಂದರು. ಈ ಕುರಿತು ನಾನು ಮಾತ್ರ ನಿನ್ನ ಹತ್ತಿರ ಏನೂ ಹೇಳಿರಲಿಲ್ಲ. ಅಷ್ಟೇ”.

ಡಾ ಫಾಲ್ಸಿ ನಡುವೆ ಬಾಯಿ ಹಾಕಿದ: “ಹಾಗ್ಯಾಕೆ ನಿನ್ನ ಭಾವೀಹೆಂಡತಿ ಹೇಳದೇ ಉಳಿದರೆಂದರೆ ಆ ಕ್ಷಣದಲ್ಲಿ ನಾನೇನೋ ಅನುಮಾನ ವ್ಯಕ್ತಪಡಿಸಿದ್ದು ಅಸ್ಪಷ್ಟವಾಗಿ ಇತ್ತು. ಹಾಗಾಗಿ ಅವರದನ್ನು ಸಾಂತ್ವನದ ಮಾತೆಂದು ಪರಿಗಣಿಸಿ, ಅದಕ್ಕೆ ಜಾಸ್ತಿ ಮಹತ್ವ ಕೊಡಲಿಲ್ಲ. ಅಷ್ಟೆ.”

“ಅದು ನಾನು ಹೇಳಿದ್ದು; ನೀವು ಯೋಚಿಸಿದ್ದಲ್ಲ.” ಎಂದಳು ಲಿಡಿಯಾ ತುಸುವೂ ಅಂಜದೆ. “ಸಿಲ್ವಿಯೋ, ನಾನು ಬೇಕಂತಲೇ ನಿನಗೆ ಅವರ ಎರಡನೇ ಭೇಟಿಯ ಕುರಿತು ಹೇಳಲಿಲ್ಲ ಎಂದವರಿಗೆ ಅನಿಸಿದೆ. ಈಗ, ಮದುವೆಗೂ ಮುಂಚೆ ಯಾವ ಫಲಾಪೇಕ್ಷೆಯೂ ಇಲ್ಲದೆ ನಿನಗೆ ಚಿಕಿತ್ಸೆ ನೀಡಲೆಂದು ಸ್ವತಃ ಅವರೇ ಬಂದುಬಿಟ್ಟಿದ್ದಾರೆ. ಸಿಲ್ವಿಯೋ, ನಿನ್ನನ್ನು ಕುರುಡನಾಗಲು ಬಿಟ್ಟು ನಂತರ ಮದುವೆಯಾಗುವಂತೆ ಮಾಡಿದ್ದು ನಾನೇ ಎಂದವರು ತಿಳಿದಿದ್ದಾರೆ. ಅದು ಹೌದೋ ಅಲ್ಲವೋ ಎಂದು ನೀನು ಮುಕ್ತಮನಸ್ಸಿನಿಂದ ಈಗ ಯೋಚಿಸಬಹುದು.”

“ಏನು ಹೇಳ್ತಾ ಇದೀಯ ಲಿಡಿಯಾ?” ಕುರುಡ ಬೆಚ್ಚಿಬಿದ್ದ.

“ಹೌದು…. ಇದು ನೀವೂ ಇರಬಹುದು…. ಯಾಕೆಂದರೆ ಈ ಮೂಲಕ ನಾನು ನಿನ್ನ…”

“ಏನು ಹೇಳ್ತಾ ಇದೀಯ?” ಬೋರ್ಗಿ ಮತ್ತೆ ಬಾಯಿಹಾಕಿದ.

“ನೋಡ್ತಾ ಇರು ಸಿಲ್ವಿಯೋ…. ಡಾ. ಫಾಲ್ಸಿ ನಿನ್ನ ದೃಷ್ಟಿ ಪುನರ್ಸ್ಥಾಪಿಸಿದರೆ ಈ ಕ್ಷಣವೇ ನಿನ್ನ ತೊರೆಯುವೆ.”

“ಲಿಡಿಯಾ! ಲಿಡಿಯಾ!” ಬೋರ್ಗಿ ಕೂಗಿದ.

ಬಾಗಿಲನ್ನು ಧಡಾಲ್ಲನೆ ಬಡಿದು ಆಗಲೇ ಅವಳು ಹೋಗಿಯಾಗಿತ್ತು. ಹೊರಗೆ ಹೋದವಳೇ ಹಾಸಿಗೆಯಲ್ಲಿ ಮೈಚೆಲ್ಲಿ, ದಿಂಬನ್ನವಚಿಕೊಂಡು ಬಿಕ್ಕಿ ಬಿಕ್ಕಿ ಅಳತೊಡಗಿದಳು. ಒಮ್ಮೆ ಸಂಪೂರ್ಣ ಅತ್ತು ಕಣ್ಣೀರು ಕಮ್ಮಿಯಾದಾಗ, ತನ್ನ ಆತ್ಮ ಸಾಕ್ಷಿ ನೆನೆದು ತಾನೇ ದಂಗಾದಳು; ಮಾತೇ ಹೊರಡದೆ ಮೂಕಳಾದಳು. ಆ ವೈದ್ಯ ತನ್ನ ಎಂದಿನ ತಣ್ಣಗಿನ ಕ್ರೂರ ದನಿಯಲ್ಲಿ ಹೇಳಿದ್ದು, ಆಗಲೇ ಯಾರೋ ತನ್ನೊಳಗೆ ಹೇಳಿದಂತೆ ಅವಳಿಗೆ ಅನಿಸಿತು. ಮತ್ತೀಗ ತಾನು ಅದನ್ನು ಕೇಳಬಾರದೆಂದುಕೊಂಡಳು. ಉದ್ದಕ್ಕೂ ಅವಳು ಡಾ. ಫಾಲ್ಸಿಯನ್ನು ನೆನೆಯುತ್ತ, ಪ್ರತಿಸಲ ಅವನ ಮುಖ ಮನಸ್ಸಲ್ಲಿ ಮೂಡಿದಾಗೆಲ್ಲ, “ಯೊಗ್ಯತೆಯಿಲ್ಲದವ!” ಎಂದು ಬೈಯುತ್ತ ಅದನ್ನು ಅದುಮಿಡುವುದಿತ್ತು. ಈಗ ಇನ್ನೂ ಎಷ್ಟು ಸಮಯ ನಿರಾಕರಿಸುತ್ತ ಕೂರುವುದು? ನಿಜದಲ್ಲಿ, ಅವಳು ಸಿಲ್ವಿಯೋ ಕುರುಡನಾಗಲೆಂದೇ ಬಯಸಿದ್ದಳು. ಅವನ ಕುರುಡುತನವೇ ತನ್ನಮೇಲೆ ಇಷ್ಟೊಂದು ಪ್ರೀತಿಗೆ ಮೂಲಕಾರಣ ಎಂದವಳು ನಂಬಿದ್ದಳು. ಪಕ್ಕನೆ ನಾಳೆಯೇನಾದರೂ ಅವನ ದೃಷ್ಟಿ ವಾಪಸಾದರೆ? ಇಂಥ ಸುಂದರನಾಗಿರುವ ಶ್ರೀಮಂತ ಅವಳನ್ಯಾಕೆ ಮದುವೆಯಾಗುತ್ತಾನೆ? ಕೃತಜ್ಞತೆ ಉಕ್ಕಿಬಂದೋ? ಅನುಕಂಪದಿಂದಲೋ? ವಿನಾಕಾರಣ ಮದುವೆಯಾಗುತಾನೋ? ಹಾಗೇನಾದರೂ ಮದುವೆಗೆ ಅವನು ಒಪ್ಪಿದರೂ ಅವಳು ಒಪ್ಪಬೇಕಲ್ಲ ? ಯಾವ ಕಾರಣವೂ ಇಲ್ಲದೆ ಅವಳು ಅವನನ್ನು ಪ್ರೇಮಿಸಿದ್ದಳಲ್ಲ…. ಅವನ ದುರಾದೃಷ್ಟದಲ್ಲೇ ಅವಳಿಗೆ ತನ್ನ ಪ್ರೇಮಕ್ಕೊಂದು ಕಾರಣವಿತ್ತಲ್ಲ…. ಜನರ ಅಸೂಯೆಗೂ ಅದು ನೆಪವಾಗಿತ್ತಲ್ಲ…. ಅಂಥ ಯಾವ ದೊಡ್ಡ ಅಪರಾಧವನ್ನೂ ಎಸಗಿಲ್ಲ… ಹಾಗಿರುವಾಗ ಯಾರಾದರೂ ತಮ್ಮ ಆತ್ಮ ಸಾಕ್ಷಿಯೊಂದಿಗೇ ರಾಜಿ ಮಾಡಿಕೊಳ್ಳುತ್ತ ಕೂರುತ್ತಾರೆಯೆ? ಪ್ರಾಮಾಣಿಕವಾಗಿ ನೋಡಿದರೆ, ಅವಳ ವೈರಿಯಾದ ಆ ವೈದ್ಯ, ಕಣ್ಣಿನ ದೃಷ್ಟಿಯನ್ನು ಪುನರ್ಸ್ಥಾಪಿಸುವೆ ಎಂದು ಹೇಳಿದಾಗ ಅವಳಿಗೇ ನಂಬಿಕೆಯಿರಲಿಲ್ಲ. ಈಗಲೂ ಕೂಡ ಅವಳಿಗೆ ನಂಬಿಕೆಯಿಲ್ಲ. ಆದರೆ ಈಗ್ಯಾಕೆ ಅವಳು ಮೌನವಾಗಿದ್ದಾಳೆ? ಈ ವ್ವೆದ್ಯನನ್ನು ನಂಬುವುದು ಒಳಿತಲ್ಲ ಎಂದಾಕೆ ಭಾವಿಸಿದಳೆ? ವೈದ್ಯ ಅನುಮಾನ ವ್ಯಕ್ತಪಡಿಸಿದ ರೀತಿಯಲ್ಲೇ ಸಿಲ್ವಿಯೋನ ಬದುಕಿಗೊಂದು ಸಣ್ಣ ಭರವಸೆ ತಂತಾನೇ ಹುಟ್ಟಿ, ಅದು ತನ್ನ ಪ್ರೇಮವನ್ನು ಕೊಲ್ಲುವುದೆಂದು ಭಾವಿಸಿದಳೇ? ಹಾಗೇನಾದರೂ ನಿಜವಾಗಿ ನಡೆದುಬಿಟ್ಟರೆ ಮುಂದೆ ಏನು ಎಂದುಕೊಂಡಳೊ? ಈಗಲೂ ಕಣ್ಣು ಕಳೆದುಕೊಂಡ ಅವನ ನಷ್ಟವನ್ನು ತನ್ನ ಪ್ರೇಮದಿಂದ ಭರಿಸಬಹುದೆಂದೇ ಅವಳ ನಂಬಿಕೆ. ನಾಳೆ ಅವನ ದೃಷ್ಟಿ ಮರುಕಳಿಸಿದರೂ, ಇನ್ಯಾವ ಹೆಂಗಸಿನ ಪ್ರೇಮ ಕೂಡಾ ಈ ನಷ್ಟ ಭರಿಸಲಾರದೆಂದೇ ಅವಳ ನಂಬಿಕೆ. ಆದರೆ ಇವೆಲ್ಲ ಅವಳ ಕಾರಣಗಳಾಗಿದ್ದವೇ ಹೊರತು ಅವನವಲ್ಲ! ಅವಳೇನಾದರೂ ಅವನ ಹತ್ತಿರ ಹೋಗಿ, “ಸಿಲ್ವಿಯೋ ಒಂದೋ ದೃಷ್ಟಿ; ಇಲ್ಲಾ ನನ್ನ ಪ್ರೇಮ-ಎರಡರಲ್ಲಿ ಒಂದನ್ನು ಆರಿಸು” ಎಂದರೆ ಆತ ಖಂಡಿತ, “ಯಾಕೆ ನನ್ನ ಕುರುಡನಾಗಿಡುತ್ತೀ?” ಎಂದೇ ಕೇಳುತ್ತಿದ್ದ. ಈ ಒಂದೇ ಮಾರ್ಗದಿಂದ, ಅಂದರೆ ಅವನ ದುರಾದೃಷ್ಟದಲ್ಲೇ ಅವಳ ಸಂತೋಷವಿತ್ತು.

ಇದ್ದಕ್ಕಿದ್ದಂತೆ, ಏನೋ ಹೇಳಲು ಹೊರಟವಳಂತೆ ಎದ್ದುನಿಂತಳು. ಆ ಕೋಣೆಯಲ್ಲಿ ಇನ್ನೂ ಪರೀಕ್ಷೆ ನಡೆಯುತ್ತಿದೆಯೆ? ವೈದ್ಯ ಏನು ಹೇಳುತ್ತಿದ್ದಾನೆ? ಸಿಲ್ವಿಯೋ ಏನು ಯೋಚಿಸುತ್ತಿರಬಹುದು? ತಾನೇ ಸ್ವತಃ ಮುಚ್ಚಿದ ಬಾಗಿಲಿಗೆ ಕಿವಿಗೊಟ್ಟು ಅವರಿಬ್ಬರ ಮಾತುಕತೆಯನ್ನು ಆಲಿಸಬೇಕೆಂದು ಅವಳಿಗೆ ಬಲವಾಗಿ ಅನಿಸಿದರೂ ಯಾಕೋ ತಡೆದುಕೊಂಡಳು. ತಾನು ಮಾತ್ರ ಮುಚ್ಚಿದ ಬಾಗಿಲಿನ ಆಚೆಗೇ ಉಳಿದಳು. ಅವಳು ಈಗ ವೈದ್ಯನ ಆಮಿಷಗಳಿಗೆ ಒಪ್ಪಬಹುದೆ? ಅವನೇ ಮದುವೆಯ ನಂತರ ಪುನಃ ಬರುತ್ತೇನೆಂದು ಹೇಳುವಷ್ಟು ಮಾತು ಮುಂದುವರೆಸಿದ್ದನಲ್ಲ…. ಪಕ್ಕನೆ ಅವಳು ಇದಕ್ಕೆಲ್ಲ ಒಪ್ಪಿಕೊಂಡರೆ… ಇಲ್ಲ…. ಇಲ್ಲ…. ಅವಳಿಗೀಗ ಜಿಗುಪ್ಸೆಯಿಂದ ಹೇವರಿಕೆಯುಂಟಾಯಿತು…. ಅಯ್ಯೋ! ಅದೆಂಥ ಅಸಹ್ಯಕರ ಮನೋವ್ಯಾಪಾರ ಆಗುತ್ತಿತ್ತು ಎಂದನಿಸಿತು! ವಂಚನೆ! ಮತ್ತೂ ಮುಂದೇನಾಗುತ್ತಿತ್ತು? ಪ್ರೇಮದ ಬದಲು ತಾತ್ಸಾರ ತುಂಬುತ್ತಿತ್ತು. ಅಷ್ಟೆ.

ಅವಳಿಗೆ ಈಗ ಬಾಗಿಲು ತೆರೆದ ಸದ್ದು ಕೇಳಿಸಿದ್ದೇ ನಡುಗಿಹೋದಳು. ಡಾ ಫಾಲ್ಸಿ ದಾಟಬೇಕಾದ ಕೋಣೆಯ ಒಂದು ಮೂಲೆಯತ್ತ ಆತ ಹೋಗುತ್ತಾನೆಂದು ಗೊತ್ತಿದ್ದೇ ಅತ್ತ ಓಡಿದಳು.

’ನಿಮ್ಮ ತುಸು ಹೆಚ್ಚೇ ಎನಿಸುವ ತೆರೆದ ಮನಸ್ಸಿನ ಸ್ವಭಾವವನ್ನು ನಾನು ಸಂಪೂರ್ಣ ಉಪಯೋಗಿಸಿಕೊಂಡೆ ಮಿಸ್… ಖಾಯಿಲೆಯನ್ನು ನಾನೀಗ ಪುನಃ ದೃಢಪಡಿಸಿಕೊಂಡೆ. ನಾಳೆ ಬೆಳಿಗ್ಗೆ ಸಿಲ್ವಿಯೋ ಕ್ಲಿನಿಕ್ಕಿಗೆ ಬರುತ್ತೇನೆಂದು ಹೇಳಿದ್ದಾನೆ…. ಅಂದಹಾಗೆ ನೀವೀಗ ಅವನ ಹತ್ತಿರ ಹೋಗಿ. ಆತ ನಿಮಗೋಸ್ಕರ ಕಾಯುತ್ತಿದ್ದಾನೆ. ಗುಡ್‍ಬೈ” ಎಂದು ತಣ್ಣಗೆ ಹೇಳಿದ ಫಾಲ್ಸಿ. ಅಲ್ಲಿಂದ ಕಾಲ್ಕಿತ್ತ.

ಡಾ. ಫಾಲ್ಸಿ ದೂರದ ಮೂಲೆಯಲ್ಲಿರುವ ಬಾಗಿಲತನಕ ಹೋಗುವುದನ್ನೇ ನಿಶ್ಚೇಷ್ಟಿತಳಾಗಿ ನೋಡುತ್ತಾ ನಿಂತಳು. ಈಗ ಸಿಲ್ವಿಯೋ ತನ್ನ ಕೋಣೆಯಿಂದ ಅವಳನ್ನು ಕರೆಯುವುದು ಕೇಳಿಸಿತು. ಆಕೆಗೀಗ ಗೊಂದಲವಾಯಿತು. ತಲೆತಿರುಗಿ ಬಂದು ಬೀಳುವಂತಾದಳು. ಕೈಗಳಿಂದ ಮುಖ ಮುಚ್ಚಿಕೊ೦ಡು ಅಳು ಉಕ್ಕಿ ಬಂದರೂ ಅವನ ಕೋಣೆಯತ್ತ ಓಡಿದಳು.

ಅವನು ಕೂತು ಅವಳನ್ನೇ ಕಾಯುತ್ತಿದ್ದ. ಬಂದವಳನ್ನು ಗಟ್ಟಿಯಾಗಿ ತಬ್ಬಿಕೊಂಡು, ಸಂತೋಷ, ಉದ್ವೇಗದಿಂದ’ – ಲಿಡಿಯಾ, ನಿನಗೋಸ್ಕರ ನಾನು ದೃಷ್ಟಿ ಮುರು ಪಡೆಯುತ್ತಿರುವುದು; …. ನಿನ್ನ ಮುಖ ನೋಡಲೆಂದು, ನನ್ನ ವಧುವಾಗಲಿರುವವಳ ಸೌಂದರ್ಯವನ್ನು ನೋಡಲೆಂದು ನಾನು ದೃಷ್ಟಿ ವಾಪಸು ಪಡಕೊಳ್ಳುತ್ತಿರುವುದು ಎಂದು ತುಣುಕು ತುಣುಕಾಗಿ ಭಾವುಕನಾಗಿ ವಿವರಿಸಿದ.

“ನೀನು ಅಳುತ್ತ ಇದೀಯ? ಯಾಕೆ? ನಾನಾದರೂ ಸಂತೋಷದಿಂದ ಅಳುತ್ತ ಇದ್ದೇನೆ….. ನೋಡಿಲ್ಲಿ…. ನಾನಿನ್ನು ಮುಂದೆ ನೋಡಬಲ್ಲೆ! ಹಾಹ್ಹಾ…. ನೋಡಬಲ್ಲೆ!”

ಅವನ ಪ್ರತಿಯೊಂದು ಮಾತೂ ಅವಳನ್ನು ಇರಿಯುತ್ತಿತ್ತು. ಅವಳ ಕಣ್ಣೀರು ನನ್ನ ಥರದ್ದಲ್ಲ ಎಂದವನಿಗೆ ಸ್ವಲ್ಪ ಹೊತ್ತಿನಲ್ಲೇ ಅರಿವಾಯಿತು. ಈವತ್ತಿನ ದಿವಸ, ಆ ವೈದ್ಯ ಹೇಳಿದ ಮಾತನ್ನು ನನಗೇ ನಂಬಲಿಕ್ಕೆ ಆಗುತ್ತಿಲ್ಲ. ಹಳೆಯದನ್ನೆಲ್ಲ ಮರೆತುಬಿಡು…. ಏನು ಯೋಚನೆ ಮಾಡ್ತಾ ಇದ್ದೀಯ? ನಮ್ಮ ಎಲ್ಲ ಚಿಂತೆ-ದುಃಖಗಳು ಹಾಳಾಗಿ ನೋಡಿದಾಗಲೇ ಮುಂದೆ ಅವಳಿಗೆ ಮನೆಯನ್ನು ಸಜ್ಜುಗೊಳಿಸಲು, ಅದರ ಅಂದ ಚಂದವನ್ನು ಹೆಚ್ಚಿಸಲು ಜಾಸ್ತಿ ವೇಳೆ ಸಿಗುವುದು. ಇಂಥ ಕನಸಿನ ಏಣಿಯನ್ನು ಅವನೀಗ ಮೊದಲ ಬಾರಿ ಕಲ್ಪಿಸಿಕೊಳ್ಳುತ್ತಿದ್ದ. ಕಣ್ಣುಗಳಿಗೆ ಬ್ಯಾಂಡೇಜು ಹಾಕಿದ ನಂತರ ಅದನ್ನು ಮೊಟ್ಟಮೊದಲು ಬಿಡಿಸುವುದು ಕೂಡಾ ಇಲ್ಲೇ…. ಇದೇ ಮನೆಯಲ್ಲಿ ಎಂದವಳಿಗೆ ಪ್ರಾಮಿಸ್ ಕೂಡಾ ಮಾಡಿಬಿಟ್ಟ.

“ಮಾತಾಡು…. ಮಾತಾಡು… ಎಲ್ಲ ನಾನೊಬ್ಬನೇ ಹೇಳ್ತಿದೀನಲ್ಲ!”

“ನಿನಗೆ ದಣಿವಾಗ್ತ್, ಇದೆಯಾ?”

“ಇಲ್ಲಪ್ಪ ಹಾಗೇನೂ ಇಲ್ಲ…. ನಿನ್ನ ಆ ಸ್ವರವನ್ನು, ಆ ತುಟಿಗಳನ್ನು ಚುಂಬಿಸಬೇಕೆಂದು ಅವಿಸುತ್ತಿದೆ.”

“ಖಂಡಿತ….”

“ಹಾಗಾದರೆ ಮಾತಾಡು…. ಹೇಳು…. ಹೇಗೆ ನಮ್ಮ ಮನೆಯನ್ನು ಅಲಂಕರಿಸುತ್ತೀ ಹೇಳು?”

“ಹೇಗೆ? ನೀನೇ ಹೇಳು?”

“ಅರೇ…. ಹೌದಲ್ಲ…. ಹಾಗೆಂದು ನಾನಿನ್ನೂ ಆಲೋಚಿಸಿಲ್ಲ…. ಹೇಗೆ ಬೇಕಾದರೂ ಚೆಂದಗೊಳಿಸು…. ಅದೆಲ್ಲ ನಿನ್ನ ಜವಾಬ್ದಾರಿ…. ನನಗಂತೂ ಇದೊಂದು ಅದ್ಭುತ…. ಮನಮೋಹಕವಾದ್ದು ಕೂಡಾ. ಆದರೆ ನಾನು ನೋಡುವುದು ನಿನ್ನನ್ನು ಮಾತ್ರ…. ಕೇವಲ ನಿನ್ನನ್ನು!”

ದೃಢನಿಶ್ಚಯದಿಂದ ಅವಳೀಗ ತನ್ನ ಅಳುವನ್ನು ನಿಗ್ರಹಿಸುತ್ತ, ಮುಖವನ್ನು ತುಸು ಸಡಿಲಿಸಿ ನಗು ತಂದುಕೊಂಡಳು. ಇಬ್ಬರೂ ಅಪ್ಪಿಕೊಂಡ ಆ ಮಧುರಕ್ಷಣದಲ್ಲಿ ಅವನ ಕಿವಿಯಲ್ಲಿ ತನ್ನ ಪ್ರೇಮದ ಕುರಿತು ಮೆಲ್ಲನೆ ಉಸುರಿದಳು. ಆದರೆ ಆತ ತನ್ನನ್ನು ಗಟ್ಟಿಯಾಗಿ ಹಿಡಿದು ಬಿಗಿದಪ್ಪಿಕೊಂಡು ಬಿಡಿಸಿಕೊಳ್ಳಲು ಒಪ್ಪದಿದ್ದಾಗ ಅವನಿಂದ ಕೊಡವಿಕೊಂಡು ಎದ್ದುನಿಂತಳು. ಮನಸ್ಸಲ್ಲಿ ಅವಳಿಗೆ ತನ್ನ ಮೇಲೆ ಹಿಡಿತ ಸಾಧಿಸಿದ ಭಾವ ಹುಟ್ಟಿ ಗೆದ್ದಂತೆನಿಸಿತು. ಮನಸ್ಸು ಮಾಡಿದ್ದರೆ ಅವನ ಅಪ್ಪುಗೆಯಿಂದ ಬಿಡಿಸಿಕೊಳ್ಳದೆ, ಸುಮ್ಮನಿರಬಹುದಾಗಿತ್ತು. ಆದರೆ ಊಹೂಂ…. ಇಲ್ಲ. ನಿಜದಲ್ಲಿ ಅವನನ್ನು ಅವಳು ಗಾಢವಾಗಿ ಪ್ರೀತಿಸುತ್ತಿದ್ದಳು.

ಆ ದಿವಸವಿಡೀ ಅವನನ್ನು ಸಂತೈಸುತ್ತಲೇ ಇದ್ದಳು. ಕಾರಣ: ಆತ ಇನ್ನೂ ಕತ್ತಲಲ್ಲೇ ಇದ್ದ. ಆ ಕತ್ತಲಲ್ಲಿ ಭರವಸೆಯ ಪುಟ್ಟಕಿಡಿ ಮೆಲ್ಲ ಹೊತ್ತಿ ಕೊಳ್ಳತೊಡಗಿತ್ತು. ಅಲ್ಲದೆ, ಅದು ಆತ, ಅವಳ ಕುರಿತು ಕಲ್ಪಿಸಿಕೊಂಡ ಬಿಂಬದಷ್ಟೆ ಸುಂದರವಾಗಿತ್ತು ಕೂಡಾ.

ಮಾರನೇ ದಿವಸ, ಲಿಡಿಯಾ ಅವನನ್ನು ಗಾಡಿಯಲ್ಲಿ ಕೂರಿಸಿ ಕ್ಲಿನಿಕ್ಕಿನ ತನಕ ಅವನಿಗೆ, ಜತೆ ಕೊಟ್ಟಳು. ಅವನನ್ನು ಅಲ್ಲಿಯೇ ಬಿಟ್ಟು ಸ್ಟಾಲೋಪಕ್ಷಿಗಳು ಗೂಡು ಕಟ್ಟುವಂತೆ ತಾನೀಗ ಮನೆಗೆಲಸದಲ್ಲಿ ತಲ್ಲೀನಳಾಗಬೇಕು ಎಂದವನಿಗೆ ತಿಳಿಸಿದಳು. “ನೀನು ಖಂಡಿತ ನೋಡಬಲ್ಲೆ!” ಎಂದೂ ಹೇಳಿದಳು.

ಮುಂದಿನ ಎರಡು ದಿನಗಳ ತನಕ ಅಪರೇಷನ್ಶಿನ ಫಲಿತಾಂಶಕ್ಕಾಗಿ ಭಯಂಕರ ಉತ್ಸುಕತೆಯಿಂದ ಕಾದಳು. ಅದು ಯಶಸ್ವಿಯಾಯಿತು ಎಂಬ ಸುದ್ದಿ ಬಂದಿದ್ದೇ ತನ್ನ ಖಾಲಿ ಖಾಲಿ ಮನೆಯಲ್ಲಿ ಮತ್ತಷ್ಟು ಚಡಪಡಿಸುತ್ತ ಕಾದಳು. ಅವನಿಗಾಗಿ ಮನೆಯನ್ನು ಇನ್ನಷ್ಟು ಸಜ್ಜು ಗೊಳಿಸಿದಳು. ಅವನಿಗೆ ಅತಿಶಯವಾದ ಸಂತೋಷ ಉಂಟಾಗಿ ಹತ್ತಿಕ್ಕಲಾರದೆ, ಈಗಲೇ ಒಂದು ಕ್ಷಣದ ಮೆಟ್ಟಿಗಾದರೂ ಕಾಣಬೇಕು ಎಂದ. ಅದಕ್ಕೆ ಇನ್ನೂ ಕೆಲದಿನಗಳ ಮಟ್ಟಿಗೆ ತಾಳ್ಮೆಯಿಂದಿರುವಂತೆ ಹೇಳಿಕಳಿಸಿದಳು. ಅವನು ಉದ್ವೇಗಕ್ಕೆ ಒಳಗಾಗದ ಹಾಗೆ ಅವಳು ಅನಾವಶ್ಯಕ ಗಡಿಬಿಡಿ ಮಾಡದೆ ಸುಮ್ಮನಿದ್ದಳು. ಅಲ್ಲದೆ, ವೈದ್ಯರ ಅಪ್ಪಣೆಯ ವಿರುದ್ಧ ಏನೂ ಮಾಡುವಂತಿರಲಿಲ್ಲ.

“ಹಾಗೇನಾದರೂ ಇದ್ದಿದ್ದಲ್ಲಿ ಅವಳು ಯಾವ ಹೊತ್ತೂ ಬರಬಹುದಾಗಿತ್ತು.”

ಕನಿಷ್ಠಪಕ್ಷ ಒಂದು ಸ್ವರವಾಗಿ ಅವನ ಮನಸ್ಸಲ್ಲಿ ಶಾಶ್ವತವಾಗಿ ಉಳಿಯುವಂತೆ, ಈಗಾಗಲೇ ಆತ ತನ್ನ ಅಂತರಂಗದ ಕತ್ತಲಿನಿಂದ ಹೊರಬಂದಿರುವುದು ಗೊತ್ತಾಗಿದ್ದೇ ಇನ್ನು ಮುಂದೆ ಆತ ಇದೇ ಸ್ವರವನ್ನು ಸದಾಕಾಲ ಯಾರ್‍ಯಾರದೋ ತುಟಿಗಳಲ್ಲಿ ವೃಥಾ ಅರಸುತ್ತಲೇ ಇರಲಿ ಎಂದುಕೊಂಡು ಅವಳು ತನ್ನ ಸಾಮಾನುಗಳನ್ನೆಲ್ಲ ಮೂಟೆಕಟ್ಟಿ ಅವನ ಆಗಮನಕ್ಕೆ ಒಂದು ದಿನ ಇರುವಾಗಲೇ ಯಾರಿಗೂ ಗೊತ್ತಾಗದಂತೆ ಹೊರಟೇ ಹೋದಳು.

*****

A Voice

Previous post ಪ್ರಪಾತ
Next post ಏಳೆನ್ನ ಮನದನ್ನೆ

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…