ನಿನ್ನ ತಿಳಿವುದಕಿಂತ ನನ್ನ ತಿಳಿವುದೇ ಲೇಸು
ನೀನೆ ನಾನೆಂದೆಂಬ ಪದವೇ ಲೇಸು
ಕಂಡವರು ಕೇಳಿದರೆ ನಗರೆ ಈ ಭಾವವನು?
ಅದ್ವೈತ ಸಿದ್ಧಾಂತ ಸುಲಭವೇ ಏನು?
ಉನ್ನತದ ಬ್ರಹ್ಮಾಂಡಕಾದಿಬೀಜವು ನೀನು
ನಿನ್ನಿಂದ ಬಂದಿರುವ ಜೀವಿ ನಾನು
ಬದಿಯೊಳಿದ್ದೂ ಎನಗೆ ಕಾಣದಿಹೆಯಾ ನೀನು
ತಾಳು ತಾಳೋ ನಿನ್ನ ಕಲೆವೆ ನಾನು
ದೇಹಧಾರಿಯ ಸ್ಫರ್ಧೆ ಬೆಳೆಯುತಿರಲಿ
ಪರೆಬಿಟ್ಟು ಪರೆಬಿಟ್ಟು ತಿಳಿವು ಬರಲಿ
ನನ್ನ ಮದ ಒಳಗೊಳಗೆ ಕುಗ್ಗುತಿರಲಿ
ನಿನ್ನ ಕರುಣದ ಬಲವು ಹೆಚ್ಚುತಿರಲಿ
ಚಲನವಿಲ್ಲದ ಚಿತ್ತ ಮೂಡದೇನು?
ಎಂದಿಗಾದರು ದಾರಿ ಗಾಣದೇನು?
ಸಪ್ತ ಸ್ವರ್ಗವ ತೂರಿ ಬಾರದಿಹೆನೆ?
ಮುಕ್ತಿ ಪಥದೊಳು ಕಹಳೆ ಊದದಿಹೆನೆ?
ತನ್ಮಯತ್ವದ ಪಂಥ ಗೆಲ್ಲದೇನು?
ಜನಕಜೆಯು ತಾನೆ ತಾನಾಗಳೇನು?
*****