ಲೋಟ ಮೇಲೇರುವುದು
ಲೋಟ ಕೆಳಗಿಳಿಯುವುದು
ಒಂದರಿಂದಿನ್ನೊಂದಕ್ಕೆ
ಧುಮುಕುವುದು
ಭೋರ್ಗರೆವ ಜಲಪಾತ
ಪಾರದರ್ಶಕ ಗ್ಲಾಸುಗಳಲ್ಲಿ
ತುಂಬಿ ಹರಿಯುವುದು
ಗುಳ್ಳೆಯೆಬ್ಬಿಸಿ
ಮೂಗಿನ ಹೊಳ್ಳೆಯೆಬ್ಬಿಸಿ
ಆದ್ದರಿಂದಲೆ ಅವರಿಗೆ
ಹೊಳ್ಳರೆಂದು ಹೆಸರು
ಕಳ್ಳರಿಗೆ ಸುಳ್ಳರಿಗೆ
ಹುಳ್ಳರಿಗೆ ಎಲ್ಲಿರಿಗೆ
ಪ್ರಿಯವಾದವರು
ಕಡಿಯೆ ಕಾರದ ಕಡ್ಡಿ
ಎಂಥ ಹಲ್ಲುಗಳಿಗೂ
ಸವಾಲಿನಂತಿರುವ ’
ಮುರುಕು-ಅಥವ
ಹತ್ತಿ ಹಾಸಿಗೆಯಂತೆ
ಮೆತ್ತನೆಯ ಪೋಡಿ
ಬೆಂಚಿನ ಮೇಲೆ ಬ೦ದು
ಕುಳಿತುಕೊಳ್ಳುವುವು
ಅಟ್ಟದ ಅಡ್ದದಿಂದ
ಕಟ್ಟಿ ತೂಗಿದ ಬಾಳೆಯ ಹಣ್ಣು
ಮಿಟುಕಿಸುವುದು ಕಣ್ಣು
ಯಾವ ಮಾಯಕದಲ್ಲಿ
ಎಲ್ಲ ಮಂಗ ಮಾಯ
ಹೇಳಿ ಹೊಳ್ಳರೆ ಹೇಳಿ
ಕೋಚಣ್ಣ ಬಂಟರಿಗೆ
ಹೇಗೆ ಹಿಡಿಯಿತು ಹುಚ್ಚು ?
ಹೆಂಗಸು ಮಕ್ಕಳೆದುರು
ಹೊಯ್ದು ಬಿಟ್ಟರೆ ಉಚ್ಚು !
ಸೋತರು ಕೆಳಕೋರ್ಟಿನಲಿ
ಸೋತರು ಮೇಲು ಕೊರ್ಟಿನಲಿ
ಮಾನ ಹೋಯಿತು
ಮರ್ಯಾದೆ ಹೋಯಿತು
ಉಳಿದುದೊಂದೆ ಕೋಮಣ ನೋಡಿ!
ಸೊರ್ ಸೊರ್ ಎ೦ದು
ಯಾರು ಯಾರನ್ನು ಅಣಕಿಸುವ ಸದ್ದು?
ಲೋಟದಿಂದ ಬಟ್ಟಲಿಗೆ
ಬಟ್ಟಲಿನಿಂದ ಗಂಟಲಿಗೆ
ಸಾಗಿ ಹೋದ ಸುಖವೆ
ಬದಲಾದ ಮುಖವೆ!
ಹೀಗೇಕೆಂದು
ಕೇಳುವೆನು ನನಗೆ ನಾನು
ಮರಳಿ ಈ ಚೌಕದಲಿ ನಿಂತು
*****