ಎತ್ತಿನ ಕತ್ತಿನ ಗೆಜ್ಜೆಯ ಸರವು
ಮೊರೆಯಿತು ಘಲ್ ಘಲ್ ಘಲ್ಲೆಂದು
ಹಳ್ಳಿಯ ಸರಳದ ಜೀವನ ನೆನೆದು
ಕುಣಿಯಿತು ಎನ್ನೆದೆ ಥೈ ಎಂದು
ಸೂರ್ಯನ ಅಸ್ತಮ ಸಮಯದ ಚೆಲುವು
ಪಚ್ಚೆಯ ಪಯಿರಿನ ನೋಟದ ಸುಖವು
ಹಕ್ಕಿಗಳೋಟದ ಗುಂಪಿನ ಸೊಗವು
ವಿಶ್ವವ ತುಂಬಿದ ಆಗಸವು
ಏರಿಯ ನೀರಿನ ಅಲೆಗಳ ತೆರೆಯು
ಗದ್ದೆಯ ಬದುವಿನ ಸಾಲಿಗೆ ಜನರು
ವನಿತೆಯರಾಡುವ ಶ್ರಾವ್ಯದ ಪದವು
ಶ್ರಮೆಯನು ಮರೆಸುವ ಆ ವಿಧವು
ಕಣ್ಣಿಗೆ ಬಣ್ಣದ ಕಾಮನಬಿಲ್ಲು
ಬಾಲಕರಾಡುವ ಚಿಣ್ಣಿಯ ಕೋಲು
ಮಲ್ಲಿಗೆ ಚಪ್ಪರ ಮನೆಗಳ ಮುಂದೆ
ಊರಿಗೆ ಮರಳುವ ತುರು ಮಂದೆ
ಮಾವಿನ ತೋಪಿನ ಮರಗಳ ತಂಪು
ಕೋಗಿಲೆ ಕೂಗುವ ಶಬ್ದದ ಇಂಪು
ತಾವರೆ ಪುಷ್ಪದ ಕೊಳಗಳ ತುಳುಕು
ಚಂದ್ರನ ಉದಯದ ಆ ಬೆಳಕು
ಊರಿನ ಮುಂದಿನ ದೇವರ ಗುಡಿಯು
ಬಕುತಿಯ ಪೂಜೆಯ ಗಂಟೆಯ ದನಿಯು
ಸ್ವಾಮಿಗೆ ಚಿಗುರಿನ ಉರುವೆಯ ಮೊರೆಯು
ಊರನು ಸುತ್ತುವ ಪಲ್ಲಕಿಯು
ಹೊರೆಗಳ ಕಣಗಳಿಗೊಯ್ಯುವ ಓಟ
ಗ್ರಾಮದಿ ರೈತರ ಮನೆಗಳ ಊಟ
ಥಾಕಿಟ ಥಾಕಿಟ ಶಬ್ದದ ಕೂಟ
ಝೋಕಿಲಿ ಹಾಕುವ ಕೋಲಾಟ
ಹಳ್ಳಿಯ ಜನಗಳ ಬೀಸುವ ಪದವು
ಬಿತ್ತಿದ ಹೊಲಗಳ ತೆನೆಗಳ ಕೊಯ್ಲು
ಕಣದಲಿ ರಾಶಿಯನಳೆಯುವ ಮುದವು
ಜನಕಜೆ ಮನಕದು ಬಲು ಹಿತವು
*****