ಇಲ್ಲಿಯ ತನಕಾ ಬಂದಿಹೆನು
ಸುಳಿವೇ ಕಾಣದೆ ನಿಂದಿಹೆನು
ತೋರದೆ ಮೌನವ ಧರಿಸಿಹೆನು
ಮೀರಿತು ಸಹನದ ಗುಣವಿನ್ನು
ನಿನ್ನನು ಕಲೆಯಲು ಕಾದಿಹೆನು
ಒಳ ಒಳಗಿದ್ದೂ ಮರೆ ಏನು
ಆರಿಸು ಬರುತಿಹ ತೆರೆಗಳನು
ಸೇರಿಸು ಗಮ್ಯಸ್ಥಾನವನು
ಮತಗಳ ಬೀಜವ ನಾಟಿರುವೆ
ಭಿನ್ನವ ಭೇದವ ಸೃಜಿಸಿರುವೆ
ತ್ರಿಗುಣಾತೀತನು ಎನಿಸಿರುವೆ
ನೀನೇ ನಾನು ಎನುತಿರುವೆ
ನೀನು ಎನ್ನುವ ಪದವೇಕೆ?
ಸರ್ವಾವಸ್ಥೆಯ ಸ್ಥಿತಿ ಏಕೆ?
ಸಿಹಿಯೊಳು ಕಹಿಯನು ತರಲೇಕೆ?
ಏತಕೊ ಅರಿಯನು ಈ ಬಯಕೆ!
ಸಗುಣ ನಿರ್ಗುಣ ಭೇದಗಳು
ನಿಲುಕದ ಗಹನದ ಭಾವಗಳು
ಮಥನಕೆ ಮೀರಿದ ವಿಷಯಗಳು
ಏನಿವು ಅದ್ಭುತ ಮಹಿಮೆಗಳು?
ತುಂಬಿಹೆ ನನ್ನಯ ಒಳ ಹೊರಗೆ
ಕಂಡೂ ಕಾಣದೆ ಇಹುದೆನಗೆ
ಶೋಭಿಸು ಥಟ್ಟನೆ ಕಂಗಳಿಗೆ
ತೋರಿಸು ನಿಜವನು ಜನಕಜೆಗೆ
*****