ರಾತ್ರಿಯ ತಣ್ಣನೆ ತೋಳಿನಲಿ
ಮಲಗಿರೆ ಲೋಕವೆ ಮೌನದಲಿ
ಯಾರೋ ಬಂದು, ಹೊಸಿಲಲಿ ನಿಂದು
ಸಣ್ಣಗೆ ಕೊಳಲಿನ ದನಿಯಲ್ಲಿ
ಕರೆದರಂತಲ್ಲೆ ಹೆಸರನ್ನು
ಕರೆದವರಾರೇ ನನ್ನನ್ನು?
ಬೇಗೆಗಳೆಲ್ಲಾ ಆರಿರಲು
ಗಾಳಿಯು ಒಯ್ಯನೆ ಸಾಗಿರಲು
ಒಳಗೂ ಹೊರಗೂ ಹುಣ್ಣಿಮೆ ಚಂದಿರ
ತಣ್ಣನೆ ಹಾಲನು ತುಳುಕಿರಲು
ಕರೆದರಂತಲ್ಲೆ ಹೆಸರನ್ನು
ಕರೆದವರಾರೇ ನನ್ನನ್ನು?
ಮರಗಳ ಎಲೆಗಳ ಗೂಡಿನಲಿ
ಮೆಚ್ಚಿನ ಬೆಚ್ಚನೆ ಮಾಡಿನಲಿ
ರೆಕ್ಕೆಯ ಹೊಚ್ಚಿ, ಮರಿಗಳ ಮುಚ್ಚಿ
ಮಲಗಿರೆ ಹಕ್ಕಿ ಪ್ರೀತಿಯಲಿ
ಕರೆದರಂತಲ್ಲೆ ಹೆಸರನ್ನು
ಕರೆದವರಾರೇ ನನ್ನನ್ನು?
ಹೇಗೆ ಇದ್ದರೇ, ಎಲ್ಲಿ ಹೋದರೇ?
ಕಂಡರೆ ಹೇಳಿ ಗುರುತನ್ನು
ನಿದ್ದೆಯ ತೊರೆದು ಕಾಯುತ್ತಿರುವೆ
ಎಂಥ ಹೊತ್ತಿನಲು ಅವರನ್ನು
ಕರೆದವರಾರೇ ನನ್ನನ್ನು?
ಕರೆದರೆ ನಿಲ್ಲೆನು ನಾ ಇನ್ನು
*****