ರೀ ಅನಂತಮೂರ್ತಿ
ನೀವು ಅದೆಷ್ಟು ಸ್ವಾರ್ಥಿ!
ಯಾರಿಗೂ ಬಿಡದೆ ಒಬ್ಬರೇ
ದೋಚಿಕೊಳ್ಳುವುದೇ ಎಲ್ಲಾ ಕೀರ್ತಿ ?
ಏನೆಲ್ಲ ಕಾಡಿದುವಪ್ಟ ನಿಮ್ಮನ್ನ !
ಹೆಣ್ಣು, ಹೆಸರು, ಹಾಗೇ
ಮಣ್ಣಿನ ಮಕ್ಕಳ ಮೂಕ ನಿಟ್ಟುಸಿರು;
ಗಾಂಧೀ, ಲೋಹಿಯಾ, ಹಾಗೇ
ಧಗಧಗಿಸುವ ಸೃಷ್ಟಿಕಾರಕ ಬಸಿರು;
ನೇರ ಮಠದಿಂದಲೇ ಬಂದರೂ
ಗುಂಡು, ಚಾಕಣದ ತುಂಡು, ಜೊತೆಗೇ
ಕೇಳುಗರೆದೆ ಜುಮ್ಮೆನಿಸುವ ಮಾತಿನ ತೊಂಡು;
ಹಿಮಾಲಯದಂಥ ಅಡಿಗ, ಜೊತೆಗೇ
ಪತ್ರಿಕೆದೊಣ್ಣೆಯ ಬೀಸುವ
ಸ್ನೇಹಾಸೂಯೆಯ ಬಡಿಗ.
ಇಲ್ಲವೆಂದಲ್ಲ ಮನಸ್ಸಿನ ತಳಾತಳದಲ್ಲಿ
ಮಿಣ್ಣನೆ ಧೂರ್ತ,
ಆದರೆ ಅಲ್ಲೇ ಇದ್ದಾನೆ ಅವನನ್ನು
ನಿಯಂತ್ರಿಸುವ ಕುಶಲಿ ಪಾರ್ಥ.
ಜೀರ್ಣಿಸಿಕೊಂಡಿರಿ ಎಲ್ಲಾ
ಪ್ರೀತಿಯ ಬಲದಲ್ಲಿ
ಜೀರ್ಣಿಸಿಕೊಂಡಿರಿ ಬರೆದು ಮನಸಾಕ್ಷಿಯ ಸಹಿಯಲ್ಲಿ;
ಒಳಗಿನ ಕೌಶಿಕನನ್ನೇ
ಅರಣಿ ಸಮಿತ್ತು ಮಾಡಿ
ಸತ್ಯಕ್ಕೆ ಆಹುತಿ ನೀಡಿ
ಶೂದ್ರ ಋಷಿಯಾದಿರಿ ಗಾಯತ್ರಿಯ ಹಾಡಿ.
ಸದ್ದುಗದ್ದಲವಿರದೆ ಏನೆಲ್ಲ ಗೆದ್ದಿದ್ದೀರಿ!
ಶರಣರ ವಚನ ಜ್ಯೋತಿಯ
ಆಯೋವಾದಲ್ಲಿ ಮುಡಿಸಿ,
ಪುರಂದರ ಕೃತಿ ಹೂರಣವ
ಪ್ಯಾರಿಸ್ಸಿನಲ್ಲಿ ಬಡಿಸಿ,
ಕನ್ನಡ ಸಂಸ್ಕೃತಿ ಕೇದಗೆ
ಕಡಲಾಚೆಗೂ ಕಳಿಸಿ,
ಅರಿಯದಂತೆ ಇದ್ದೀರಿ
ಸಾಮಾನ್ಯರ ಥರ ನಟಿಸಿ.
ಇದೆ ನಿಮ್ಮ ತೆಕ್ಕೆಯಲ್ಲಿ ಘನವಾದದ್ದೆಲ್ಲ:
ಅಡಿಗರ ಪದ್ಯ, ಲಂಕೇಶರ ಗದ್ಯ
ಕುವೆಂಪು ಕಥಾಲೊಕ,
ಎಮರ್ಜನ್ಸಿಗೆ ಬಲಿಯಾದ ಸ್ನೇಹಲತಾ ಕುರಿತ ಶೋಕ,
ಬೇಂದ್ರೆಯ ಮಾಯಾಸೃಷ್ಟಿ,
ಕಾರಂತರ ಎವೆಹೊಳಚದ ನಿಷ್ಠುರದೃಷ್ಟಿ,
ಕ್ರಿಸ್ತನ ಮಗಳು ಎಸ್ತರಳ ಪ್ರೇಮ,
ಸಾವಿರ ಕನಸುಗಳ ಶಿಖರಸ್ತೋಮ.
ಇನ್ನೂ ಏನೇನೋ-
ಹೇಳಲು ಸೋತೆ, ತೋಚುತ್ತಿಲ್ಲ ಮಾತೇ
ಸಡಿಲಿಸಿ ಕೊಂಚ ತೋಳು,
ಒಳಕ್ಕೆ ನುಸುಳಲಿ ಈ ಭಟ್ಟನದೂ
ಒಂದೆರಡು ಸಾಲು!
*****