ಹೊಳೆಸಾಲಿನ ಮರಕ್ಕೆ
ನಿಂತ ನೆಲವೇ ವರ ;
ಇಳಿಸುತ್ತದೆ ಬೇರನ್ನು
ಅಳಕ್ಕೆ, ಅಗಲಕ್ಕೆ
ನೀರಿನ ಯೋಚನೆ ಎಲ್ಲಿದೆ ಅದಕ್ಕೆ ?
ಹೊಳೆಸಾಲಿನ ಮರದ
ತಲೆತುಂಬ ಫಳಫಳ ಎಲೆ,
ಕೆಳಗೆ ನದಿಯುದ್ದ ಏರಿಳಿಯುವ
ಜುಳು ಜುಳು ಅಲೆ.
ನೀರಿನ ವಿಶಾಲ ಕನ್ನಡಿ
ಹೊಳೆಯುತ್ತ ಬಿದ್ದಿದೆ ಕೆಳಗಡೆ,
ಸೂರ್ಯ ಚಿಕ್ಕೆ ಚಂದ್ರಮರ ಬಿಂಬ
ಒರೆಸಿಟ್ಟಂತೆ ಅದರ ತುಂಬ;
ನಡುವೆ ದೊಡ್ಡದಾಗಿ ತನ್ನ ನೆರಳು
ಇದ್ದರೆ ಏನನಿಸಬೇಡ ಪಾಪ, ಮರುಳು !
ಆದರೂ ಗೊತ್ತಿದೆ ಮರಕ್ಕೆ
ಇದು ಅಯಾಚಿತ ಭಾಗ್ಯ;
ಹೇಳಿಕೊಳ್ಳುತ್ತದೆ ತನ್ನಲ್ಲೇ
ನಾನಲ್ಲ ಇದಕ್ಕೆ ಯೋಗ್ಯ.
ಹೊಳೆಸಾಲಿನ ಮರದ
ರೀತಿ ರಿವಾಜೇ ಬೇರೆ.
ಮೈ ತುಂಬ ಎಲೆ ಟಸಿಲು ಎದ್ದು
ಎಳೆ ಬಿಸಿಲಿನ ಬೆಚ್ಚನೆ ಶಾಲು ಹೊದ್ದು
ಎಲೆ ಎಲೆಯೂ ಹಕ್ಕಿ ದನಿ ಚಿಮ್ಮಿ
ಏನೋ ಮೋದ ನರನರದಲ್ಲೂ ಹೊಮ್ಮಿ
ಹೊಳೆ ಮೇಲಿನ ಗಾಳಿ
ಒಳಗೆಲ್ಲ ನುಗ್ಗಾಡಿ
ಮರಕ್ಕೆ ಮರವೇ ಬೀಗಿ
ತಾರಶ್ರುತಿಗೆ ಹಾಡಿ
ಆಗುತ್ತದೆ ಒಮ್ಮೊಮ್ಮೆ
ತುಳುಕುವ ಹಾಡಿನ ಕಿನ್ನರಿ
ನೋಡಲು ನೀವೂ ಒಮ್ಮೆ
ಹೊಳದಂಡೆಗೆ ಬನ್ನಿರಿ.
*****