ಸಾವಿರ ಬಗಯಲಿ ಸಾಗುತಿದೆ
ಸ್ವಾತಂತ್ರ್ಯದ ಲಾಸ್ಯ,
ಬಾನು ಬುವಿಯೂ ಬರೆಯುತಿವೆ
ಸಿರಿಬೆಳಕಿನ ಭಾಷ್ಯ.
ಒಣಗಿದ ಮರದಲಿ ಸಾಗುವ ಚೈತ್ರನ
ಚಿಗುರಿನ ದಾಳಿಯಲಿ,
ಮುಗಿಲ ಬಾಗಿಲ ಸರಿಸಿ ಸುರಿಯುವಾ
ನಿರ್ಮಲ ಧಾರೆಯಲಿ,
ಕಾಷ್ಠದ ಸೆರೆಯಲ್ಲಿ
ಕುದಿಯುತ ಮರೆಯಲ್ಲಿ
ಭಗ್ಗನೆ ಬಂಧನ ಭೇದಿಸುವಾ
ಕೆರಳಿದ ಜ್ವಾಲೆಯಲಿ.
ಬೆಳಗು ಬಾನಿನಲಿ ಹೊನ್ನಿನ ಬಿಂಬ
ಹಚ್ಚಿದೆ ಸಿರಿಹಣತೆ,
ಹಕ್ಕಿದನಿಗಳೀ ದಿಕ್ಕಿನ ತುಂಬ
ದನಿಯೊಡದಿದೆ ಕವಿತೆ,
ಅರಳಿದ ಸುಮಸರಣಿ
ಪರಿಮಳದಾ ಭರಣಿ
ವಾಯುಮಂಡಲವ ಘಮಘಮಿಸಿ
ಕೆಂಪಾಗಿದೆ ಧರಣಿ!
*****