ಕಸಕಿಂತ ಕಡೆಯಾಯ್ತೆ
ಹೆಣ್ಣು ಜನ್ಮವು ನಿನಗೆ
ಈ ಭಾರ ಹೊರಿಸುವುದಕೆ
ಲಂಚಕೋರನು ನೀನು
ವಂಚನೆಯ ಮಾಡಿರುವೆ
ಮೃದುತನದ ಸ್ತ್ರೀವರ್ಗಕೆ
ಗಿಡವೆಂದು ಬಗೆದೆಯೋ
ಹೆಣ್ಣು ಜನ್ಮದ ಒಡಲ
ಫಲಗಳನು ಸೃಜಿಸುವುದಕೆ
ಕವಣೆ ಕಲ್ಲೋ ನಿನ್ನ
ಮಾನಸವು ಎಲೆ ದೇವ
ಈ ಕ್ರಮವೆ ಸ್ತ್ರೀವರ್ಗಕೆ?
ಪುಷ್ಪ ಸೃಷ್ಟಿಯನೇನೊ
ಸುಲಭದಿಂ ನೀ ಗೈದೆ
ಅಲ್ಲಿ ಕನಿಕರವು ಬಂತೆ?
ಕುಸುಮಕಿಂತಲು ಮೃದುವು
ಹೆಣ್ಣು ಜನ್ಮವು ಎಂಬ
ಅರಿವೆ ನಿನಗಿಲ್ಲವಾಯ್ತೆ?
ಏನ್ನುಡಿದು ಫಲವೇನು?
ನ್ಯಾಯವಿಲ್ಲದ ಬಳಿಕ
ತೀರುವುದೆ ಈ ಪ್ರಶ್ನೆಯು
ನೀನೆ ಕಾಣದ ಮುನ್ನ
ನಾವು ಮಾಡುವುದೇನು
ಇನ್ನೆಲ್ಲಿ ವಿಶ್ರಾಂತಿಯು?
ಅದಕಾಗಿ ಬಿತ್ತಿದೆಯೊ
ನಿರ್ಗುಣದ ಸುದ್ದಿಯನು
ವನಿತೆಯರಿಗಳುಕಿ ನೀನು
ಅಲ್ಲದೊಡೆ ನೀನೆಮ್ಮ
ಸಂಧಿಯನು ಬಯಸಿದೊಡೆ
ಈ ಸೃಷ್ಟಿ ಉಳಿವುದೇನು?
ಇರಲಿರಲಿ ಈ ಭಾರ-
ಕಳುಕುವರು ನಾವಲ್ಲ
ಅರ್ಜುನನ ಒಕ್ಕಲಲ್ಲ!
ನೆರವಾಗಿ ನಿಂತಿಹೆವು
ಅನುಗಾಲ ನಿನಕೃತಿಗೆ
ಸೋಲಿಗಿಲ್ಲೆಡೆಯಿಲ್ಲವು!
ಕಾಲ ಚಕ್ರವ ಮೆಟ್ಟಿ
ಅಭಿಮಾನಗಳ ತೊರೆದು
ಲೆಕ್ಕಿಸದೆ ಸಾವು ನೋವ
ನಿನ್ನ ಬೆಳಸನು ಅಪ್ಪಿ
ತೊಟ್ಟಿಲೊಳು ಲಾಲಿಸುತ
ಜೋಗುಟ್ಟುತಿಹೆವು ನಾವು
ಬಹುಕಾಲದೆಜಮಾನ
ಬಹುದೊಡ್ಡ ಕೃಷಿಗಾರ
ತೀರದಾರಂಬಗಾರ
ನಿನ್ನ ಗೆಯ್ಮೆಗೆ ಹೆಣ್ಣು
ನೇಗಿಲಿಲ್ಲದ ಮೇಲೆ
ಉಂಟೆ ಈ ಸತ್ಯಸಾರ!
ಅಂತಿರಲಿ ನೀನೇನೊ
ಮುಕ್ತಿದಾಯಕನೆಂಬ
ಸುದ್ದಿ ಹಬ್ಬಿಹುದು ಇಲ್ಲಿ
ದೊಡ್ಡವರ ಮಾತುಗಳೆ
ಸಾಕ್ಷಿಯಾಗಿಹವೆಮಗೆ
ಗ್ರಂಥ ಶೋಧನೆಗಳಲ್ಲಿ!
ವನಿತೆಯರು ಕಾಣುತಿಹ
ಪಾರಮಾರ್ಥಿಕವೆಂಬ
ದೃಷ್ಟಾಂತ ತಾ ಮುಕ್ತಿಯೆ?
ಕಾಯಗಳ ಬಿಟ್ಟೊಡನೆ
ಸಗ್ಗ ದೊರೆಯುವುದೆಂಬ
ಕಥೆಯೊಳುಂಟೇ ಮುಕ್ತಿಯು?
ಹೆಣ್ತನದಿ ತುಂಬಿರುವ
ಮುಕ್ತಿಪಥವೇ ಸಾಕು
ಮತ್ತೊಂದ ಬಯಸಲೇಕೆ?
ಆನಂದ ಒಳಹೊರಗೆ
ತುಂಬಿರಲಿ ಎಂದಿಹಳು
ಜನಕಜೆಯು ಸ್ತ್ರೀವರ್ಗಕೆ!
*****