ದೀಪದ ಕುಡಿಗಳು ಎಲ್ಲೆಲ್ಲೂ
ದೀಪದ ಪಡೆಯೇ ಎಲ್ಲೆಲ್ಲೂ,
ಬಾನಲ್ಲೂ ಬುವಿಯಲ್ಲೂ
ಮಕ್ಕಳು ಮುದುಕರ ಕಣ್ಣಲ್ಲೂ.
ಕರೀ ಮೋಡದಾ ಮರೆಯಲ್ಲಿ
ಹಾಸಿದ ಬೆಳಕಿನ ತೆರೆಯಲ್ಲಿ
ಮಿಂಚುವ ಭಾಷೆ, ಏನೋ ಆಸೆ
ಕಾತರ ತುಂಬಿದ ಬಾನಲ್ಲಿ
ಕಲ್ಲು ಮುಳ್ಳಿನಾ ಬದಿಯಲ್ಲೇ
ಬಿರುಸುಮಣ್ಣಿನಾ ಎದೆಯಲ್ಲೇ,
ಆಡಿವೆ ಗಿಡಮರ ಬಳ್ಳಿಗಳು
ತೂಗಿವೆ ಹೂವೂ ಹಣ್ಣುಗಳು.
ಇದ್ದೇ ಇವೆ ಹಳೆ ನೋವುಗಳು
ಮರೆಯಲು ಬಯಸವೆ ಜೀವಗಳು?
ನೋವಿನ ನೆತ್ತಿಯ ಒತ್ತಿರಲಿ
ಆಸೆಯ ವಾಮನ ಪಾದಗಳು.
*****