ಅಡುಗೆ ಮನೆಯಲ್ಲಿ ಒಗ್ಗರಣೆಯ ಸದ್ದು
ಕುಂಟೆಬಿಲ್ಲೆಯ ಆಟ ಹೊರಗೆ
ಮೇಜಿನ ಮೇಲೆ ಲೇಖನಿ ಹಿಡಿದ ಕವಿ-
ಗಣೇಶ ಹೊರಟಿದೆ ಮೆರವಣಿಗೆ
ಬೆಳಗಿನಿಂದಲೂ ಹೀಗೆಯೇ–
ಪದಗಳ ನಿರೀಕ್ಷೆಯಲಿ ಪದಗಳು
ಎಲ್ಲರೂ ನಿದ್ರಿಸಿದಾಗ ಬಂದು ಹಾಗೆಯೇ
ಮರಳುವ ಬೆಳದಿಂಗಳು
ಬರೆಯುವುದಾದರೆ ಬರೆಯಬಹುದು
ಗೊಲ್ಕೊಂಡಾದ ಲಗ್ಗೆ
ಇಲ್ಲ ಅಸ್ಸಾಮದ ಇಲ್ಲ ಪಂಜಾಬದ
ಇಲ್ಲ ಶ್ರೀಲಂಕೆಯ ಬಗ್ಗೆ
ಎಲ್ಲ ವಿಷಯಗಳೂ ಮೂಲದಲ್ಲಿ ಒಂದೇ-
ವ್ಯತ್ಯಾಸವೆಂದರೆ ಶಬ್ಧ
ಈ ವ್ಯತ್ಯಾಸದ ಅರ್ಥವಾಗುವುದರಲ್ಲೆ
ಕಳೆದು ಹೋಗುತ್ತದೆ ಅಬ್ದ
ಆಗುವಿಕೆಯೋ ಅದು ಪ್ರಾರ್ಥನೆಯ ಕರೆ
ವಿಶ್ವಾಸಿಯನ್ನು ತಲುಪುವ ಹಾಗೆ
ಅಥವ ತಿಳಿಯದೇ ಅರಳುವಂತೆ
ಮನೆಯಂಗಳದ ಮೊಗ್ಗೆ
ಈ ಮಧ್ಯೆ ಹಳೆ ಸರಕಾರ ಹೋಗಿ
ಹೊಸ ಸರಕಾರ ಬರುತ್ತದೆ
ನಿಜ– ಕಾಯುವುದಿಲ್ಲ ಯಾರೂ ಕವಿತೆಗೆ
ಕವಿಯೊಬ್ಬನಲ್ಲದೆ
ಹಿಂದೆ ಕಾದಿದ್ದನಂತೆ ಮೈಖೆಲೇಂಜೆಲೊ
ಕರಾರಾದಲ್ಲೆಷ್ಟೊ ತಿಂಗಳು !
ಕಾಣುವತನಕ (ಹಾಗೆಂದು ಕೇಳಿರುವೆ)
ತಾಜಾ ಸಂಗಮರವರಿ ಕಲ್ಲು
*****