ಬಿಳಿಯ ಗೋಡೆಯಲಿ ಬರೆದ ಅಕ್ಷರಗಳು
ಮಾಯುವುದಿಲ್ಲ ಬೇಗನೆ
ದಾರಿಯಲಿ ನಡೆವವರನ್ನು ನೋಡುತ್ತ
ಕುಳಿತುಕೊಳ್ಳುತ್ತವೆ ಸುಮ್ಮನೆ
ಒಬ್ಬೊಬ್ಬರಿಗೆ ಒಂದೊಂದು ರೀತಿ
ಅರ್ಥವಾಗುತ್ತ ಹೊಗುತ್ತವೆ
ಅರ್ಥವಾಗದಿದ್ದಾಗ ಪ್ರಶ್ನೆಗಳ ರೂಪದಲಿ
ಬಹುಕಾಲ ಕಾಡುತ್ತವೆ
ಕಾಲ ಸರಿದಂತೆ ಮಹಾಪ್ರಾಣಗಳು
ಪ್ರಾಣವನ್ನೆ ಕಳೆದುಕೊಳ್ಳುತ್ತವೆ
ಎಲ್ಲ ಅಕ್ಷರಗಳೂ ಕಾಗುಣಿತ ತಪ್ಪಿ
ಮಾಯವಾಗುತ್ತವೆ
ಎಲ್ಲಿ ಹೋದುವು ಅವು? ಗೋಡೆಯೊಳಗೆ
ಸೇರಿದುವೆ? ಮಳೆಗೆ ಕೊಚ್ಚಿದುವೆ ?
ನೋಡಿದವರ ಮನವ ಹೊಕ್ಕು ಹೊರ
ಬರದೆ ಉಳಿದುವೆ? ಕವಿಯೊಬ್ಬನು
ಈ ದಾರಿ ಬಂದವನು ಹೆಕ್ಕಿಕೊಂಡನೆ
ಒಂದೊಂದಾಗಿ ಬಿದ್ದ ಹೂವುಗಳನ್ನು
ಹೆಕ್ಕಿಕೊಳ್ಳುವಂತೆ? ಯಾತಕ್ಕೆ?
ಏನ ಮಾಡಿದನು? ಏನ ಕೇಳಿದನು?
ಚೈನಾದ ಗೋಡೆಯೆ ಬೆಬಿಲೋನದ
ಗೋಡೆಯೆ ಕೆಂಪುಕೋಟೆಯ ಗೋಡೆಯೆ
ಪ್ಯಾಲೆಸ್ತಿನದ ಅಳುವ ಗೋಡೆಯೆ
ಅತ್ತರೆಷ್ಟು ಜನ ಇಲ್ಲಿ ಬ೦ದು
ಸತ್ತರಿನ್ನೆಷ್ಟು? ಕವಿಯೆ ಎಚ್ಚರಿಸು ಎಲ್ಲರನು
ಎಚ್ಚರಿಸು ಅವರ ಭಾಷೆಯನು
*****