ರೂಪಮಹಲಿನ ರಾಣಿ!
ತಂದಿರುವೆನಿದೊ ನೂಲೇಣಿ
ಬಿಡಿಸಲೆಂದೆ ನಿನ್ನ ಸೆರೆ
ಬಂದಿರುವೆ ಕಿಟಕಿ ತೆರೆ
ಇಳಿದು ಬಾ ಒಂದೊಂದೆ
ಮೆಟ್ಪಲನು ನನ್ನ ಹಿಂದೆ
ಹಿಡಿ ನನ್ನ ಕೈಯ
ಇದು ಕೋಳಿ ಕೂಗುವ ಸಮಯ
ತಲ್ಲಣಿಸದಿರಲಿ ಮನ
ಉಳಿದುದೆಲ್ಲವು ಮೌನ
ಬಿದ್ದು ದಾರಿಯುದ್ದಕು
ತಿಂಗಳಿನ ತಿಳಿಬೆಳಕು
ತೊಳೆಯುವುದು ಕಾಲು
ದಾಟಿದರದೊ ಕೋಟೆಬಾಗಿಲು
ಕಾಯುತಿದೆ ನಮಗೆಂದು
ನದಿಯಲಿ ದೋಣಿಯೊಂದು
ಹೊತ್ತು ಮೂಡಲು ನಾವು
ಗಡಿಯ ತಲಪುವೆವು
ನೋಡದಿರು ಹಿಂದಕ್ಕೆ
ಬಾ ನನ್ನ ಸನಿಯಕ್ಕೆ
ಮರೆತುಬಿಡು ಆ ನಿನ್ನ
ಚಿನ್ನದ ಪಂಜರವನ್ನ
ಸ್ವಾತಂತ್ರ್ಯದ ಸ್ವರ್ಗ
ಇನ್ನು ಮುಂದಿನ ಸರ್ಗ
ಆಹ! ಏನು ಏನಂದಿ?
ಕಾಣಿಸುವ ದೊಂದಿ?
ಕಾವಲಿನ ಭಟರೆದ್ದು
ಬರುತಿರುವ ಸದ್ದು!
ಹೇಗೆ ಎದುರಿಸಲಿ
ಈ ಅನಿರೀಕ್ಷಿತ ಧಾಳಿ
ರೂಪಮಹಲಿನ ರಾಣಿ
ಮರೆತಿರುವೆ ನನ್ನ ಗುರಾಣಿ!
*****