ಅಧ್ಯಾಯ ೭
ಮರೀನಾ ತೆಳ್ಳಗೆ ಬೆಳ್ಳಗೆ ಇದ್ದಳು. ಸೊಂಪಾಗಿ ಬೆಳೆದ ತಲೆಗೂದಲು. ಆಯಾಸಗೊಂಡ ಕಣ್ಣುಗಳು. ಮಧ್ಯಾಹ್ನ ಬಸ್ಸಿನಲ್ಲಿ ಬಂದು ಸ್ನಾನ ಊಟ ಮುಗಿಸಿ ಚಿಕ್ಕ ನಿದ್ದೆ ಮಾಡಿ ಎದ್ದಿದ್ದಳು. ಮೆಸ್ಕರೆನ್ನಾ ಒಮ್ಮೆ ಅರವಿಂದನಿಗೆ ತಮ್ಮ ಫ್ಯಾಮಿಲಿ ಆಲ್ಬಮ್ ತೋರಿಸಿದ್ದರು. ಅದರಲ್ಲಿ ಅವನು ಮರೀನಾಳ ಚಿತ್ರ ನೋಡಿದ್ದ. ಆದರೆ ಅದು ಬಹಳ ಹಿಂದೆ ತೆಗೆಸಿದ ಚಿತ್ರ. ಆ ಚಿತ್ರದಿಂದ ಅವನ ಮನಸ್ಸಿನಲ್ಲಿ ಮೂಡಿದ್ದ ರೂಪವೇ ಬೇರೆ. ಕಾನ್ವೆಂಟ್‌ನಲ್ಲಿ ಓದಿ ಪೇಟೆಯಲ್ಲಿ ಬೆಳೆದ ಹುಡುಗಿಯ ರೂಪ, ಆದರೆ ವಾಸ್ತವದ ಮರೀನಾ ಬಹಳ ಸರಳವಾಗಿದ್ದಳು.
ಅವನ ಕಡೆ ನೋಡಿ ಮುಗುಳುನಗುತ್ತ “ನಿಮ್ಮ ಬಗ್ಗೆ ಅಪ್ಪ ಈಗಾಗಲೇ ಹೇಳಿದ್ದಾರೆ” ಎಂದಳು.
“ಏನು ಹೇಳಿದ್ದಾರೆ?”
“ನೀವು ಮೈಸೂರಿನಲ್ಲಿ ಓದಿದ್ದು, ಈಗ ಇಲ್ಲಿನ ಹೈಸ್ಕೂಲಿನಲ್ಲಿ ಕಲಿಸುತ್ತಿರುವುದು… ಎಲ್ಲವನ್ನೂ”
ಅರವಿಂದ ಮುಂದಿನ ಪ್ರಶ್ನೆಯನ್ನು ನಿರೀಕ್ಷಿಸಿದ-ಎಂ. ಎ. ಓದಿ ಈ ಹಳ್ಳಿಯ ಶಾಲೆಗೆ ಯಾಕೆ ಬಂದಿರಿ? ಕಾಲೇಜಿನಲ್ಲಿ ಲೆಕ್ಚರರ್ ಆಗಬಹುದಿತ್ತಲ್ಲ? ಮುಂತಾಗಿ. ಆದರೆ ಮರೀನಾ ಆ ಬಗ್ಗೆ ಆಸಕ್ತಿ ತಳೆದಂತೆ ಕಾಣಿಸಲಿಲ್ಲ. ನಿಜ, ಮೆಸ್ಕರೆನಾ ಹೇಳಿದ್ದರಲ್ಲವೇ ಅವಳು ಕಾಲೇಜಿನ ಓದಿನಲ್ಲಿ ಹೆಚ್ಚಿನ ಆಸಕ್ತಿಯನ್ನೆಂದೂ ತೋರಿರಲಿಲ್ಲ ಎಂದು.
ಅಡಿಗೆಯವನು ಎಲ್ಲರಿಗೂ ಕಾಫಿ ತಂದಿತ್ತ.
ಮರೀನಾ ಬಹಳ ಅನಿರೀಕ್ಷಿತವಾಗಿ ಬಂದಿಳಿದಿದ್ದಳು. ಬೆಂಗಳೂರಿನಿಂದ ರಾತ್ರಿ ಬಸ್ಸಿನಲ್ಲಿ ಮಂಗಳೂರಿಗೆ ಬಂದು ಅಲ್ಲಿಂದ ನಾಗೂರು ತಲುಪುವಷ್ಟರಲ್ಲಿ ಸುಸ್ತು ಹೊಡೆದಿದ್ದಳು. ಮಸ್ಕರೆನ್ನಾ ಒಂದು ಕ್ಷಣ ತನ್ನ ಕಣ್ಣುಗಳನ್ನು ತಾನೇ ನಂಬದಂತಾಗಿತ್ತು. ಮರೀನಾಳನ್ನು ನೋಡದೆ ಎಷ್ಟು ವರ್ಷಗಳಾದುವು? ಮೂರೋ ನಾಲ್ಕೋ! ಮುಂಬಯಿಯಲ್ಲಿ ಕೆಲಸಕ್ಕೆ ಸೇರಿದ ಮೇಲೆ ಒಮ್ಮೆ ಬಂದಿದ್ದಳು. ಆಗ ಅವರು ಮಂಗಳೂರಲ್ಲಿ ಮನೆಮಾಡಿಕೊಂಡಿದ್ದರು. ನಾಗೂರಿಗೆ ಬಂದ ಮೇಲೆ ಅವಳ ಭೇಟಿ ಆಗಿಯೇ ಇರಲಿಲ್ಲ. ಇಷ್ಟು ದೂರದ ಹಳ್ಳಿಗೆ ತನ್ನನ್ನು ಹುಡುಕಿಕೊಂಡು ಅವಳು ಬರುತ್ತಾಳೆಂಬ ನಂಬಿಕೆಯೂ ಅವರಿಗಿರಲಿಲ್ಲ. ಕಳೆದ ಬಾರಿ ಅವಳು ಬಂದಿದ್ದಾಗ ಆಸ್ಟ್ರೇಲಿಯಾಕ್ಕೆ ಹೋಗುವ ತಮ್ಮ ಯೋಚನೆಯನ್ನು ತಿಳಿಸಿದ್ದರು. ಮರೀನಾ ತಾನೆಲ್ಲ ಬರಲೊಲ್ಲೆ ಎಂದಿದ್ದಳು. ನಂತರ ಅವಳ ಮನ ವೊಲಿಸುವ ಪ್ರಯತ್ನಗಳೆಲ್ಲ ವಿಫಲವಾಗಿದ್ದುವು. ಈಗ ಇನ್ನೊಮ್ಮೆ ಈ ಪ್ರಸ್ತಾಪ ಬಂದೇ ಬರುತ್ತದೆ, ಮರೀನಾ ಮನಸ್ಸು ಬದಲಿಸಿರಬಹುದೇ ಎಂದುಕೊಂಡರು.
ಕಾಫಿ ಸವಿಯುತ್ತ ಅವಳು ತನ್ನ ಸುದ್ದಿಯನ್ನು ಹೇಳುತ್ತಿದ್ದಳು. ಬೆಂಗಳೂರಿಗೆ ಬಂದ ಮೇಲೆ ಹಲವು ಬಾರಿ ಕೆಲಸ ಬದಲಿತ್ತು. ಮೊದಲು ಒಂದು ಜಾಹೀರಾತು ಕಂಪೆನಿಯಲ್ಲಿ ಕೆಲಸದಲ್ಲಿದ್ದಳು. ನಂತರ ಕೆಲವು ಪತ್ರಿಕೆಗಳಲ್ಲಿ, ಫಿಲ್ಮುಗಳಲ್ಲಿ ಆರ್ಟಿಸ್ಟ್ ಆಗಿ ದುಡಿದಿದ್ದಳು. ಈ ಮಧ್ಯೆ ಆರೋಗ್ಯ ಹದಗೆಡತ್ತ ಹೋಗುತಿತ್ತು. ಡಾಕ್ಟರರನ್ನು ಕೇಳಿದಾಗ ಹವಾ ಬದಲಾವಣೆಯನ್ನು ಸೂಚಿಸಿದರು.
ಮಾತಿನ ಮಧ್ಯೆ ಮರೀನಾ ಕೆಮ್ಮಿದಳು.
ಮೆಸ್ಕರೆನ್ನಾರ ಮುಖದಲ್ಲಿ ಗಾಬರಿಯಿತ್ತು.
“ಈ ಊರು ಇಷ್ಟು ಸುಂದರವಾಗಿರಬಹುದು ಅಂದುಕೊಂಡಿರಲಿಲ್ಲ ನಾನು. ಬಸ್ಸಿನಲ್ಲಿ ಬರುತ್ತ ಹಸಿರು ಬಯಲುಗಳನ್ನು ಗುಡ್ಡಗಳನ್ನು ನೋಡಿ ನನಗಾದ ಸಂತೋಷ ಅಷ್ಟಿಷ್ಟಲ್ಲ. ನನಗೆ ಈ ಊರೆಲ್ಲಾ ಸುತ್ತಬೇಕೆಂದಿದೆ. ನಿಮಗೆ ಸಮಯ ವಿರುತ್ತದೆಯೇ?” ಎಂದು ಕೇಳಿದಳು ಅರವಿಂದನ ಕಡೆ ನೋಡಿ.
“ಇರುತ್ತದೆ,” ಎಂದ ಅರವಿಂದ.
“ಊರು ಸುತ್ತುವಿರಂತೆ. ಮೊದಲು ಸರಿಯಾದ ಡಾಕ್ಟರರಲ್ಲಿಗೆ ಹೋಗಿ ನಿನ್ನ ಆರೋಗ್ಯ ಚೆಕ್ ಅಪ್ ಮಾಡಿಸೋಣ, ಮಂಗಳೂರಲ್ಲಿ ನನಗೆ ಪರಿಚಯದ
ಡಾಕ್ಷರರಿದ್ದಾರೆ,” ಎಂದರು ಮಸ್ಕರೆನ್ನಾ.
“ಅಗತ್ಯವಿಲ್ಲ ಡ್ಯಾಡಿ, ಬೆಂಗಳೂರಲ್ಲಿ ಸ್ಪೆಶಲಿಸ್ಟರ ಬಳಿಯೇ ಚೆಕ್ ಅಪ್ ಮಾಡಿಸಿಕೊಂಡದ್ದು. ಈ ಸಿನೋಫಿಲಿಯಾ. ಏನೂ ಗಾಬರಿಯಿಲ್ಲ. ಬೇಕಾದ ಔಷಧಿ ಮಾತ್ರೆಗಳನ್ನು ತಂದಿದ್ದೇನೆ.”
“ಆದರೂ ಇನ್ನೊಮ್ಮೆ ಡಾಕ್ಟರರನ್ನು ನೋಡಿದರೇನು ತಪ್ಪು?”
“ಆಗಲಿ, ಇನ್ನೊಂದು ವಾರದಲ್ಲಿ ನಾನು ಹುಶಾರಾಗದಿದ್ದರೆ ಖಂಡಿತಾ ಮಂಗಳೂರಿಗೆ ಹೋಗಿ ಡಾಕ್ಟರರನ್ನು ನೋಡುತ್ತೇನೆ. ಮತ್ತೇನಿಲ್ಲ ಡ್ಯಾಡಿ, ಓವರ್‌ವರ್ಕ್, ತಿರುಗಾಟ, ನಿದ್ದೆಯಿಲ್ಲದಿರುವುದು….”
“ಯಾಕೆ?”
“ಯಾಕೆಂದರೆ?”
“ಈ ಓವರ್‌ವರ್ಕ್, ತಿರುಗಾಟ, ನೆದ್ದಿಯಿಲ್ಲದಿರುವುದು?”
“ಫಿಲ್ಮ್ ಕೆಲಸ ಅಂದರೇ ಹಾಗೆ. ಸ್ಟುಡಿಯೋ ಲೊಕೇಶನ್ ಲೆಬೊರೆಟರಿ ಎಂದು ಅಲೆದಾಟ. ಹೊತ್ತಿಗೆ ಊಟವಿಲ್ಲ ನಿದ್ದೆಯಿಲ್ಲ….”
“ಇದೇ ಕೆಲಸ ಯಾಕೆ ಮಾಡಬೇಕು? ಬೇರೆನಾದರೂ ಕೆಲಸ ಸಿಗೊಲ್ಲವೇ? ಆ ಮುಂಬಯಿ ಜಾಬ್ ಯಾಕೆ ಬಿಟ್ಟೆ?”
“ಮುಂಬಯಿ ಜಾಬ್ ಏನೋ ಚೆನ್ನಾಗಿತ್ತು, ಆದರೆ ಮುಂಬಯಿ,”
“ಆ ಜಾಹೀರಾತು ಕಂಪೆನಿಯಲ್ಲಿ ಏನಾಯಿತು?”
“ಓ ಡ್ಯಾಡಿ ! ಯೂ ಆರ್ ಬಿಯಿಂಗ್ ರಿಯಲಿ ಡಿಫಿಕಲ್ಟ್ !” ಎಂದು ನಗತೊಡಗಿದಳು, ನಗುತ್ತಲೇ ಕೆಮ್ಮಿದಳು.
“ಓಕೆ ಓಕೇ. ಮುಂದೇನು ಮಾಡಬೇಕೆಂದಿರುವೆ?”
“ಇಲ್ಲೇ ಇರುತ್ತೇನೆ !”
“ಹೌದೆ?”
“ಅರವಿಂದ್ ಶಾಲೆಯಲ್ಲಿ ಕೆಲಸಕ್ಕೆ ಸೇರುತ್ತೇನೆ.”
“ಏನು ಕಲಿಸುತ್ತೀ ಅಲ್ಲಿ?”
“ಪೈಂಟಿಂಗ್.”
“ನೀವು ಬಂದರೆ ತುಂಬಾ ಚೆನ್ನಾಗಿರುತ್ತದೆ,” ಎಂದ ಅರವಿಂದ.
“ನಿಮ್ಮ ಸಬ್ಜೆಕ್ಟು ಯಾವುದು?”
“ಹಿಸ್ಟರಿ, ಆದರೆ ಶಾಲೆಯಲ್ಲಿ ಜಾಗ್ರಫಿ, ಇಂಗ್ಲೀಷು ಕೂಡ ಕಲಿಸ್ತೇನೆ.”
“ಉಳಿದ ಸಮಯದಲ್ಲೇನು ಮಾಡುತ್ತೀರಿ?”
“ಓದುತ್ತಾರೆ. ಮುಂದೆ ರಿಸರ್ಚ್ ಮಾಡುವ ಐಡಿಯಾ ಅವರದು,” ಎಂದರು ಮಸ್ಕರೆನ್ನಾ.
“ಹಾಗದರೆ ನಿಮ್ಮ ಪಾದದಲ್ಲೂ ಚಕ್ರವಿದೆ!”
“ಅಂದರೆ?”
“ಪಾದದಲ್ಲಿ ಚಕ್ರವಿರುವವರು ನಿಂತಲ್ಲಿ ನಿಂತಿರೋದಿಲ್ಲ.”
“ಯಾರು ಹಾಗಂದವರು?”
“ಒಬ್ಬ ಜ್ಯೋತಿಷಿ ಹೇಳಿದ ನನಗೆ”
“ನಿಮಗದರಲ್ಲೆಲ್ಲ ನಂಬಿಕೆಯಿದೆಯೇ?”
“ಅವನಿಗಿತ್ತು. !”
“ನೀವು ಕೆಲಸ ಮಾಡಿದ ಫಿಲ್ಮು ಯಾವುದು”
“ಪ್ರೊಡಕ್ಷನ್ ನಂಬರ್ ಒಂದು. ಇನ್ನೂ ಹೆಸರಿಟ್ಟಿಲ್ಲ.”
“ಯಾವಾಗ ರಿಲೀಸಾಗುತ್ತದೆ?”
“ಅದು ರಿಲೀಸಾಗುವುದಿಲ್ಲ.”
“ಯಾಕೆ!”
ಅಂದೊಂದು ಪೊಲಿಟಿಕಲ್ ಸೆಟೆಯರ್, ಸೆನ್ಸಾರ್ ಬೋರ್ಡು ದಾಟಿ ಬರೋದೇ ಇಲ್ಲ.”
“ಮತ್ತೇಕೆ ಅದನ್ನು ಮಾಡಬೇಕು?” ಎಂದರು ಮಸ್ಕರೆನ್ನಾ
“ವರ್ಕ್ ಸ್ಯಾಟಿಸ್ ಫ್ಯಾಕ್ಷನ್ !” ಎಂದಳು ಅರ್ಧಹಾಸ್ಯ ಅರ್ಧ ಸತ್ಯ ಬೆರೆಸಿ.
ಮಸ್ಕರೆನ್ನಾ ತಲೆಕೊಡವಿಕೊಂಡರು.
ಅರವಿಂದ ಕತ್ತಲಾಗುತ್ತಿದೆಯೆಂದು ಹೊರಡಲು ಎದ್ದು ನಿಂತ.
ಮೆಸ್ಕರೆನ್ನಾ ಅವನನ್ನು ತಡೆದು, “ಈ ದಿನ ನಮ್ಮಲ್ಲೇ ಊಟಕ್ಕೇಳಿ, ವಿ. ವಿಲ್ ಹ್ಯಾವ್ ಎನ್ ಅರ್ಲಿ ಡಿನ್ನರ್!” ಎಂದು ಒತ್ತಾಯಿಸಿದರು. ಅವರಿಗೆ ಮಗಳು ಬಂದ ಸಡಗರ. ಮನೆಯಲ್ಲೆಲ್ಲ ಓಡಾಡುತ್ತಿದ್ದರು. ಅಡಿಗೆಯವನಿಗೆ ಆಗಾಗ ಸೂಚನೆಯಿತ್ತು ಬರುತ್ತಿದ್ದರು.
“ನಾನು ಅಡುಗೆ ಮಾಡುತ್ತೇನೆಂದರೆ ಡ್ಯಾಡಿ ಬಿಡುತ್ತಿಲ್ಲ,” ಎಂದು ಹಲುಬಿದಳು ಮರೀನಾ.
“ಅಡುಗೆ ಮಾಡೋದಕ್ಕೆ ಬರುತ್ತದೆಯೇ ನಿನಗೆ!” ಎಂದು ಮೆಸ್ಕರೆನ್ನಾ ಹಾಸ್ಯವಾಡಿದರು.
“ಮುಂಬಯಿನಲ್ಲಿದ್ದಾಗ ನಾನು ರ್ಪಾಟ್‌ಟೈಮ್ ಅಡುಗೆ ಕೆಲಸ ಮಾಡುತ್ತಿದೆ.”
“ಹೌದೆ?”
ಸಂಬಳ ಸಾಲುತ್ತಿರಲಿಲ್ಲ. ಪಾರ್ಟ್‌ಟೈಮ್ ಅಡುಗೆ ಕೆಲಸ ಮಾಡುತ್ತೇನೆ ಎಂದೆ. ನಾನಿದ್ದ ಹಾಸ್ಟೆಲಿನವರು ಹೂಂ ಅಂದರು. ಹಾಸ್ಟೆಲ್ ಮೆಸ್‌ನಲ್ಲಿ ಬ್ರೇಕ್ ಫಾಸ್ಟ್, ರಜದಲ್ಲಿ ಲಂಚ್ ನಾನೇ ತಯಾರಿಸುತ್ತಿದ್ದೆ,” ಎಂದಳು.
“ಓಕೇ. ನಾಳೆಯಿಂದ ನೀನೇ ಅಡುಗೆಯ ವಿಚಾರ ನೋಡಿ ನೋಡಿಕೊಳ್ಳುವೆಯಂತೆ,” ಎಂದರು ಮಸ್ಕರೆನ್ನಾ.
ಸ್ವಲ್ಪ ಹೊತ್ತಿನಲೇ ಊಟ ಸಿದ್ಧವಾಯಿತು, ರುಚಿಕರವಾದ ಊಟ. ಊಟ ಮಾಡುತ್ತ ಮರೀನಾ ಕೇಳಿದಳು
“ಜಾನಿ ಹೇಗಿದ್ದಾನೆ?”
“ಚೆನ್ನಾಗಿದ್ದಾನೆ. ಈ ವರ್ಷಕ್ಕೆ ಅವನ ಕೋರ್ಸು ಮುಗಿಯುತ್ತದೆ. ಮುಂದಿನ ವರ್ಷ ಇಂಗ್ಲೆಂಡಿಗೆ ಹೋಗುತ್ತಾನೆ.”
“ಹೌದೆ”
“ಯಾವುದೋ ಸ್ಕಾಲರ್ ಶಿಪ್ ಸಿಗುತ್ತದಂತೆ”
“ಜೋರ್ಜ್?”
“ಹೊಸ ಮನೆ ಕಟ್ಟಿಸಿದ್ದಾನೆ. ಒಂದು ತಿಂಗಳ ಹಿಂದೆ ತಾನೆ ಪತ್ರ ಬಂದಿತ್ತು.”
“ಇನ್ನೇನು ಬರೆದಿದ್ದ?”
“ಯಾವಾಗ ಬರುತ್ತೀರಿ ಎಂದು ಕೇಳಿದ್ದಾನೆ.”
“…..”
“ನಿನ್ನ ಬಗ್ಗೆ ಕೇಳಿದ್ದಾನೆ.”
“ನಾನೆಲ್ಲೂ ಹೋಗೋದಿಲ್ಲ ಎಂದು ಬರೆಯಿರಿ.”
ಅರವಿಂದನ ಎದುರಿಗೇ ಕುಳಿತಿದ್ದಳು ಅವಳು, ತಿದ್ದಿ ತೀಡಿದಂಥ ಎಸಳು ಮೂಗು, ಮಾಟವಾದ ಗಲ್ಲ. ಈ ಹುಡುಗಿಯಲ್ಲಿ ಇಂಥ ತನ್ನತನ ಇದೆಯೆಂದು ಯಾರೂ ಊಹಿಸಲಾರದಂತಿದ್ದಳು. ಮಸ್ಕರೆನ್ನಾರಿಗೆ ತಟ್ಟನೆ ಏನೋ ನೆನಪಾಯಿತು–ವಿಸ್ಕಿ ! ಅದು ಮರೆತು ಹೋದುದಾದರೂ ಹೇಗೆ ಅಡುಗೆಯವನನ್ನು ಕರೆದು ವಿಸ್ಕಿ ಬಾಟಲು ತರುವಂತೆ ಹೇಳಿದರು.
ಮರೀನಾ ತಂದೆಯನ್ನು ನೋಡಿದಳು.
“ಅಪ್ಪ ತುಂಬಾ ಕುಡಿಯುತ್ತಾರೇನು?” ಎಂದು ಕೇಳಿದಳು ಅರವಿಂದನ ಕಡೆ ತಿರುಗಿ,
“ಹಾಗೇನಿಲ್ಲ,” ಎಂದ ಅರವಿಂದ ಸ್ವಲ್ಪ ತಬ್ಬಿಬ್ಬಾಗಿ, “ಅರವಿಂದ್‌ನನ್ನು ಕೇಳಿ ಉಪಯೋಗವಿಲ್ಲ. ಯಾಕೆ ಗೊತ್ತೆ?”
“ಯಾಕೆ?”
“ಇಬ್ಬರೂ ಸೇರಿ ಎಷ್ಟೋ ಬಾಟಲಿಗಳನ್ನು ಖಾಲಿಮಾಡಿದ್ದೇವೆ. ಐ ಹ್ಯಾವ್. ಕರಪ್ಟೆಡ್ ಹಿಮ್ ಟು ದ ಡ್ರಗ್ಸ್!”
“ನೀವು ದಾಡಿ ಬೆಳೆಸಬೇಕಿತ್ತು!”
“ಯಾಕೆ?”
“ಸಾಕ್ರೆಟಿಸ್‌ಗೆ ದಾಡಿಯಿತು.”
“ಮೆಸ್ಕರೆನ್ನಾ ಕೆನ್ನೆ ಒರೆಸಿಕೊಂಡು ಕೇಳಿದರು:
“ನಿನಗೆ ಯಾರು ಹೇಳಿದರು?”
“ಸ್ಕೂಲ್ ಪುಸ್ತಕಗಳಲ್ಲಿ ಅವನ ಚಿತ್ರ ಇರುತ್ತದೆ.”
“ಹಿಸ್ಟೋರಿಯನ್ ಏನನ್ನುತ್ತಾರೆ?”
“ನಾನು ಆ ಬಗ್ಗೆ ಓದಿಲ್ಲ” ಎಂದ ಅರವಿಂದ.
“ಚಿತ್ರದಲ್ಲಿ ನೋಡಿಲ್ಲವೆ” ಮರೀನಾ ಕೇಳಿದಳು.
“ಯಾಕೆ ಚರ್ಚೆ? ಅರವಿಂದ್‌ಗೆ ಇದೆಯಲ್ಲ ಸಾಕು, ಅಲ್ಲದೆ ನನಗೆ ಅರವಿಂದ್ ಅಲ್ಲದೆ ಬೇರೆ ಅನುಯಾಯಿಗಳೂ ಇದ್ದಂತಿಲ್ಲ.”
“ಹಾಗಿದ್ದರೆ ಅವರನ್ನು ತೆಗೆದುಕೊಂಡು ಹೋಗುತ್ತಾರೆ!”
“ನನ್ನನ್ನಾದರೆ ತೆಗೆದುಕೊಂಡು ಹೋಗಲಿ ಎಂದೆ?”
“ಎಷ್ಟೋ ಮಂದಿಯನ್ನು ಜೈಲಿಗೆ ಕಳಿಸಿದವರು ನೀವು!”
“ನಿಜ.”
ಮಸ್ಕರೆನ್ನಾರ ಮುಖ ಪೆಚ್ಚಾಯಿತು.
“ಐ ಆಮ್ ಸಾರಿ ಡ್ಯಾಡಿ!” ಎಂದಳು ಮರೀನಾ.
*****
ಅಧ್ಯಾಯ ೮
ಮಾರನೆ ದಿನ ಸಂಜೆ ಮರೀನಾ ಅರವಿಂದನನ್ನು ಹುಡುಕಿಕೊಂಡು ಅವನ ಕೋಣೆಗೆ ಬಂದಳು. ಎರಡು ಬಾರಿ ಬಂದು ನೋಡಿದೆ ಅಂದಳು. ಅಂದು ಶಾಲೆಯಿಂದ ಬರುವಾಗ ತಡವಾಗಿತ್ತು. ಮರುದಿನ ಯಾವುದೊ ಒಂದು ಟೆಸ್ಸು ಕೊಡಬೇಕಾಗಿದ್ದುದರಿಂದ ಪ್ರಶ್ನೆಗಳನ್ನು ತಯಾರಿಸುತ್ತ ಕುಳಿತಿದ್ದ. ಮರೀನಾ ಬಂದಾಗ ಅರವಿಂದ ಕಾಫಿಗೆ ನೀರಿಟ್ಟಿದ್ದ, ಕಾಫಿ ತಾನೇ ಮಾಡುತ್ತೇನೆಂದು ಮುಂದೆ ಬಂದಳು.
“ಇಲ್ಲಾ. ನೀವು ಕೂತುಕೊಳ್ಳಿ ನನಗೆ ಕಾಫಿ ತಯಾರಿಸಲು ಬರುತ್ತದೆ,” ಎಂದರೂ ಕೇಳಿಲಿಲ್ಲ. ಐದು ನಿಮಿಷಗಳಲ್ಲಿ ಎರಡು ಕಪ್ಪು ಕಾಫಿ ತಯಾರಿಸಿದಳು.
“ಚೆನ್ನಾಗಿ ಆಯಿತೆ?”
“ಆಯಿತು.”
“ದಾಕ್ಷಿಣ್ಯಕ್ಕೆ ಹೇಳಬೇಡಿ!”
“ದಾಕ್ಷಿಣ್ಯವೇನೂ ಇಲ್ಲ,” ಎಂದ. ಅವಳು ಕುರ್ಚಿಯಲ್ಲಿ ಕುಳಿತಳು. ಅವನು ಮಂಚದಲ್ಲಿ ಕುಳಿತುಕೊಂಡ.
“ಶಾಲೆಯಲ್ಲಿ ಬಹಳ ಕೆಲಸವೆ?” ಎಂದು ಕೇಳಿದಳು.
“ಬಹಳವೇನಿಲ್ಲ. ಆದರೆ ಬೋರು.”
“ಬೋರೆ ! ಯಾಕೆ?”
“ನಮ್ಮ ಶಾಲೆಗೆ ಸೇರಿ ನೋಡಿ.”
“ನನಗೆ ಬೋರಾದೀತು ಅನಿಸೋದಿಲ್ಲ.”
“ಜಾಹೀರಾತು ಕಂಪೆನಿಯ ಕೆಲಸ ಯಾಕೆ ಬಿಟ್ಟಿರಿ?”
“ಯಾವ ಜಾಹೀರಾತು ಕಂಪೆನಿಯ ಕೆಲಸ?”
“ನಿನ್ನೆ ಹೇಳಿದಿರಲ್ಲ.”
“ನೀವು ಬುದ್ದಿ ಜೀವಿಗಳೇ?”
ಅವನ ಪ್ರಶ್ನೆಗೆ ಉತ್ತರಿಸದೆ ಕೇಳಿದಳು.
“ಏನು ಹಾಗಂದರೆ?”
“ಯಾವಾಗಲೂ ಓದುತ್ತ, ಚಿಂತಿಸುತ್ತ ಇರುವವರು.”
“ಯಾಕೆ ಕೇಳಿದಿರಿ?”
“ಈ ಪುಸ್ತಕಗಳ ರಾಸಿಯನ್ನು ನೋಡಿ.”
“ಓ ! ಅವನ್ನೆಲ್ಲ ನಾನು ಯಾವಾಗಲೂ ಓದುತ್ತ ಕುಳಿತಿರುವುದಿಲ್ಲ!”
“ನೀವು ಹಿಸ್ಟರಿ ಯಾಕೆ ತೆಗೆದುಕೊಂಡಿರಿ?”
ಅರವಿಂದ ಗಂಭೀರವಾದ ಉತ್ತರ ಯೋಚಿಸತೊಡಗಿದ.
“ನನಗೆ ಘಟನೆಗಳಲ್ಲಿ, ಘಟನೆಗಳನ್ನು ಇಂಟರ್‌ಪ್ರಿಟ್ ಮಾಡುವುದರಲ್ಲಿ ಆಸಕ್ತಿ…”
“ಸಿಗರೇಟಿದೆಯೆ?” ತಟ್ಟನೆ ಕೇಳಿದಳು,
“ಸೇದುತ್ತೀರಾ?”
“ಡಾಕ್ಟರರು ಸೇದಬಾರದು ಅಂದಿದ್ದಾರೆ.”
“ಈಸಿ ನೋಫಿಲಿಯಾ”
“ಡ್ಯಾಮಿಟ್!”
ಮಳೆಗಾಲ ಮುಗಿದು ಈಗ ಎಲ್ಲೆಡೆ ಹಸಿರೊಡೆದಿತ್ತು. ಚಿಗುರಿದ ಮರ ಗಿಡಗಳು, ಅರಳಿನಿಂತ ಕಾಡು ಹೂಗಳು, ಗಾಳಿ ತುಂಬ ಹಸಿರು ಹುಲ್ಲಿನ ಹಿತವಾದ ವಾಸನೆ, ಸಂಜೆಯೆಲ್ಲ ಅವರು ತಿರುಗಾಡಲು ಆರಂಭಿಸಿದರು. ಗುಡ್ಡಗಳನ್ನು ಹತ್ತಿ ಇಳಿಯುವಾಗ ಮರೀನಾ ಏದುರಿಸಿಬಿಡುತ್ತಿದ್ದಳು. ಆದರೆ ಕ್ರಮೇಣ ಅವಳ ಆರೋಗ್ಯ ಸುಧಾರಿಸತೊಡಗಿತು. ಕೆಮ್ಮೂ ಕಡಿಮೆಯಾಯಿತು. ಸ್ಪೆಶಲಿಸ್ಟರನ್ನು ಕಾಣುವಂತೆ ಮಸ್ಕರೆನ್ನಾ ಮತ್ತೆ ಒತ್ತಾಯಿಸಲಿಲ್ಲ.
“ನಿಮಗೆ ಚಿತ್ರಕಲೆಯಲ್ಲಿ ಹೇಗೆ ಆಸಕ್ತಿ ಬೆಳೆಯಿತು?” ಎಂದು ಅರವಿಂದ ಒಮ್ಮೆ ಮರೀನಾಳನ್ನು ಕೇಳಿದ.
“ನನಗೊಬ್ಬ ಕಲಾವಿದ ಫ್ರೆಂಡ್ ಇದ್ದ. ವಿಚಿತ್ರವಾದ ಮನುಷ್ಯ, ವಿಚಿತ್ರವಾದ ಚಿತ್ರಗಳನ್ನು ನೋಡುತ್ತಿದ್ದ. ಅವನು ಟೇಬಲಿನ ಚಿತ್ರ ಬಿಡಿಸಿದರೆ ಅದಕ್ಕೆ ಟೇಬಲಿನ ಹೋಲಿಕೆಯಿದ್ದರೂ ನಿಜವಾದ ಟೇಬಲಿಗಿಂತ ಭಿನ್ನವಾಗಿರುತ್ತಿತ್ತು. ತಾನು ಹಾಗಂದರೆ ಅದಕ್ಕೆ ಆತ ಕೇಳುತ್ತಿದ್ದ : ನಿಜವಾದ ಟೇಬಲು ಯಾವುದು? ಎಂದು ಒಮ್ಮೆ ನನ್ನ ಚಿತ್ರ ಬಿಡಿಸಿದ. ನಾನು ಹೀಗಿದ್ದೇನೆಯೇ ಎಂದು ನನಗೆ ಆಶ್ಚರ್ಯವಾಯಿತು. ನೀನು ಇದ್ದ ಹಾಗೆಯೇ ಬಿಡಿಸುವುದಾದರೆ ಯಾಕೆ ಬಿಡಿಸಬೇಕು ಎಂದು ಕೇಳಿದ. ನಾನು ಗೊಂದಲದಲ್ಲಿ ಬಿದ್ದೆ. ನಾನು ವಸ್ತುಗಳ, ಮನುಷ್ಯರ ಚಿತ್ರಗಳನ್ನು ಬಿಡಿಸಿದರೆ ಹೇಗಿರುತ್ತದೆ ನೋಡೋಣ ಅನಿಸಿತು.”
“ಹೇಗಿರುತ್ತದೆ?”
“ನಾನು ಮನುಷ್ಯರ ಚಿತ್ರ ಬಿಡಿಸುವಾಗ ಅವರನ್ನು ಹೆಚ್ಚು ಅರ್ಥಮಾಡಲು ಸಾದ್ಯವಾದಂತೆ ಅನಿಸುತ್ತದೆ. ಜಗತ್ತು, ಹತ್ತಿರವಾಗುತ್ತದೆ. ಕೆಲವು ಸತ್ಯಗಳ ದರ್ಶನವಾಗುವಂತೆ ತೋರುತ್ತದೆ. ಇದನ್ನು ಹೀಗೆಯೇ ಎಂದು ಹೇಳುವುದು ಕಷ್ಟ. ಬಹುಶಃ ಬೌದ್ಧಿಕ ವಿವೇಚನೆಗೆ ಎಟಕುವುದಿಲ್ಲ ಇದು. ನನ್ನ ತಂದೆಗೆ ಇದೆಲ್ಲ ಸಿಲ್ಲಿ ಅನಿಸೋದಕ್ಕೆ ಅದೇ ಕಾರಣವಿರಬೇಕು,”” ಎಂದಳು.
ಮೆಸ್ಕರೆನ್ನಾ ಬಹುಶಃ ಮೊದಲಿನಂತೆ ಈಗಿಲ್ಲ ಎಂದು ಹೇಳಬೇಕೆನಿಸಿತು ಅರವಿಂದನಿಗೆ. ಅವರೇ ಹೇಳಿದಂತೆ ಮೊದಲು ಅವರೆಂದೂ ಮದ್ಯ ಮುಟ್ಟುತ್ತಿರಲಿಲ್ಲ. ಯಾವ ಕ್ಲಬ್ಬಿನ ಸದಸ್ಯತ್ವ ಕೂಡ ಇರಲಿಲ್ಲ. ಪಾರ್ಟಿಗಳಿಗೆ, ಸಭೆಗಳಿಗೆ, ಸಮಾರಂಭಗಳಿಗೆ ಎಂದೂ ತಲೆಹಾಕಿದವರಲ್ಲ. ಒಬ್ಬ ನ್ಯಾಯಾಧೀಶ ಅಂದರೆ ಹೀಗೆಯೇ ಇರಬೇಕೆಂಬ ಕಲ್ಪನೆಯನ್ನು ಇಟ್ಟುಕೊಂಡಿದ್ದವರು ಅವರು. ಅದರೆ ಅದೆಲ್ಲ ಹಿಂದಿನ ಮಾತು ಈಗ ಅವರು ಕತ್ತಲೆಯೊಂದಿಗೆ ಮಾತಾಡುತ್ತಾರೆ. ಮನ ಸುಪ್ತವಲಯಗಳನ್ನು ಕೆದುಕುತ್ತಾರೆ. ಬಹುಶಃ ನೆನಪುಗಳಿಂದ ದೂರವಿರಲೆಂದೇ ದೂರ ದೇಶಕ್ಕೆ ಹೋಗಲು ಬಯಸುತ್ತಾರೆ.
“ಎಲ್ಲ ಸಮಸ್ಯೆಗಳಿಗೂ ಬೌದ್ಧಿಕ ಉತ್ತರಗಳನ್ನು ಹುಡುಕುವುದು ತಪ್ಪಲ್ಲವೆ? ಅದೊಂದೇ ಅಲ್ಲ. ಅಂಥ ವಿವೇಚನೆ ತುಂಬಾ ಬೋರು ಕೂಡ, ನಿಮಗೇನನಿಸುತ್ತದೆ?”
“ನಿಜ,” ಎಂದ.
ಅವರು ಸ್ಕೂಲಿನ ಬಳಿ ತಲುಪಿದ್ದರು.
“ಇದೇ ನೀವು ಕಲಿಸುವ ಸ್ಕೂಲು?”
“ಹೌದು” ಸ್ಕೂಲಿನ ವಠಾರದಲ್ಲಿ ಮಾವು, ಚಿಕ್ಕಿನ ಗಿಡಗಳಿದ್ದುವು, ಚಿಕ್ಕು ತುಂಬಾ ಹೂ ಬಿಟ್ಟಿತ್ತು. ಒಂದೆರಡು ಹೂಗಳನ್ನು ಕೊಯ್ದು ಆಘ್ರಾಣಿಸಿದಳು. ರಜಾದಿನ ಯಾರೂ ಇರಲಿಲ್ಲ. ಸುಣ್ಣಬಣ್ಣ ಮಾಡಿದ ಶಾಲಾಕಟ್ಟಡದ ಗೋಡೆಗಳನ್ನು ಮರೀನಾ ನೋಡಿದಳು. “ಆಹಾ ! ಎಷ್ಟು ಬೋಳಾಗಿ ಕಾಣಿಸುತ್ತಿದೆ !” ಎಂದು ಮಸಿಯ ತುಂಡುಗಳನ್ನು ಹುಡುಕಿದಳು. ಬಣ್ಣದ ಚಾಕ್ ತುಂಡುಗಳು ಸಿಕ್ಕಿದುವು. ಅವುಗಳಿಂದ “ಪರೀಕ್ಷೆಗೆ ಧಿಕ್ಕಾರ!” “ಪ್ರಾರ್ಥನೆಗೆ ಧಿಕ್ಕಾರ!” ಎಂದು ಎದುರು ಗೋಡೆಯ ಮೇಲೆ ದೊಡ್ಡದಾಗಿ ಬರೆದು, “ಪ್ರಾರ್ಥನೆಯಿದೆಯೆ?” ಎಂದು ಕೇಳಿದಳು.
“ಇದೆ,”
“ಸರಿ ಹಾಗಿದ್ದರೆ, ಈಗ ನೋಡಿ ಎಷ್ಟು ಲಕ್ಷಣವಾಗಿ ಕಾಣಿಸುತ್ತದೆ!” “ಏನು?”
“ಶಾಲೆ,” ಎಂದಳು ಮರೀನಾ-ಸ್ಲೋಗನ್ನುಗಳನ್ನು ನೋಡುತ್ತ. ಬಹುಶಃ ಆ ಕ್ಷಣದಿಂದ ಇರಬೇಕು-ಅವನು ಅವಳನ್ನು ಪ್ರೀತಿಸತೊಡಗಿದ್ದು. ಅದನ್ನವಳಿಗೆ ತಿಳಿಸುವುದು ಹೇಗೆಂದು ತಿಳಿಯದೆ ಹಲವು ದಿನ ಗೊಂದಲದಲ್ಲಿ ಬಿದ್ದ. ಕೊನೆಗೊಂದು ದಿನ ಹೇಳುವವನಿದ್ದ. ಹೇಳಲು ಬಾಯಿ ತೆರೆದಿದ್ದ. ಆದರೆ ಮರೀನಾ ಕೆಮ್ಮಲು ತೊಡಗಿದವಳು ಬಹಳ ಹೊತ್ತಿನ ತನಕ ಕಮ್ಮುತ್ತಲೇ ಇದ್ದಳು.
*****