“ಇವರು ಯಾರು” ಎಂದು ಗಾಂಧಿಯವರ ಕುರಿತು ಬಗೆವರೆ
ಅವರು ಒಬ್ಬರಲ್ಲ, ಹಲವು ರೂಪಿನವರು ಕಾಣರೇ ?
ರಾಟಿಕಾಮಧೇನುವಿರುವ ತವಸಿ ವರವಸಿಷ್ಠನು
ಕೋಟಿ ವಿಘ್ನಗಳಲಿ ಸತ್ಯಬಿಡದ ಹರಿಶ್ಚಂದ್ರನು ||
ಘೋರಸಾಸದಿಂದ ಸೃಷ್ಟಿ ಗೈದ ವಿಶ್ವಾಮಿತ್ರನು
ಘೋರಹಿಂಸೆ ಕರುಣೆಯಿಂದ ಮುರಿಯನಿಂತ ಬುದ್ಧನು ||
ದನುಜಬಲವ ದೈವಶಕ್ತಿಯಿಂದ ಮುರಿದಕೃಷ್ಣನು
ಮನುಜಕುಲವ ಪ್ರೇಮದಿಂದ ಗೆಲಲುನಿಂತ ಕ್ರಿಸ್ತನು ||
ತಂದೆಯಾಜ್ಞೆಯಂತೆ ಮನಸಿನೊಲವ ತೊರೆದ ರಾಮನು
ಒಂದುಘೋರ ಆಣೆಯಿಟ್ಟು ಕೊಂಡು ನಡೆದ ಭೀಷ್ಮನು ||
ದಿವ್ಯ ನೆರವಿನಿಂದ ಗುರಿಯ ಹೊಡೆವ ಇಂದ್ರತನುಜನು
ಭವ್ಯ ಕರ್ಮಯೋಗನಿರತ ದಿವ್ಯ ತೇಜ ಸೂರ್ಯನು ||
ಮರಣಹಿಂಸೆಯಲ್ಲು ಭಕ್ತಿ ಬಿಡದ ಪ್ರಹ್ಲಾದನು
ಪರಮಸೇವೆಗಸ್ಥಿ ಬಿಡುವ ಆ ದಧೀಚಿವರ್ಯನು ||
ನಲ್ಲೆಯಲ್ಲಿ ದೈವರೂಪಕಂಡ ರಾಮಕೃಷ್ಣನು
ಹೊಲೆಯರನ್ನು ಹರಿಯಜನರಗೈದ ಪುಣ್ಯವಂಶನು ||
ಬಗೆದರಷ್ಟು ಬಗೆಯಭಾವ ಬೆಳಗುವಾ ಮಹಾತ್ಮನು
ಜಗದಜನ್ಮ ಸುಟ್ಟ ಯುಗದ ಜೀವನಾ ದ್ವಿಜಾತ್ಮನು ||
*****