ಕಾಯ್ದಿದ್ದೇನೆ

ಬೇಸಿಗೆಯ ಬಿಸಿಲಿನಂಥ ಅವಳ ನೆನಪಿನಲ್ಲಿ ಹೃದಯದ ತಂತುಗಳೆಲ್ಲಾ ಸುಟ್ಟೂ ಸುಟ್ಟೂ ಕ್ಷಣ ಕ್ಷಣಕೂ ಸಾಯುತಿವೆ ಆದರೂ ಅವಳು ಚಂದ್ರನ ಶೀತಲದಂತಾದರೆ ಎಂದು ಈಗಲೂ ಕಾಯ್ದಿದ್ದೇನೆ. *****

ಶಾರ್ಕ್

ಕೊರೆವ ನೆನಪುಗಳೆಲ್ಲಾ ನುಗ್ಗಿ ಕ್ಯಾಸಂಡ್ರಾಳಂತೆ ಅಪ್ಪುತ್ತವೆ ನರ್ತಿಸುತ್ತವೆ, ಬೇಸರುಸಿರು ಓಡಿಸಿ ಅಪ್ಪುಗೆಯ ಹಿತ ನೀಡುವ ಕನಸು ತೋರಿಸಿ, ನಗಿಸಿ ಕೊನೆಗೊಮ್ಮೆ ಸೋಲಿಸಿ ದೂರ ಸರಿಯುತ್ತಾಳೆ ಶಾರ್ಕ್ ಮೀನಿನಂತೆ. *****

ವಿಚಿತ್ರಸತ್ಯ

ಜಗದ ಪರಿಗೆ ಬೇಸತ್ತ ಬುದ್ಧ ನಡುರಾತ್ರಿ ಚಕ್ಕನೆ ಹೊರಬಿದ್ದು ಭೋದಿವೃಕ್ಷದ ಕೆಳಗೆ ಕುಳಿತು ಮಹಾನ್ ಭಗವಾನ್ ಬುದ್ಧನಾದ ಯಶೋಧೆ ಹಗಲಿನಲ್ಲಿಯೇ ಹೊರಬಿದ್ದಿದ್ದರೂ ಅಗ್ನಿ ಪರೀಕ್ಷೆಯ ರಾಮಾಣವಾಗಿ ಅಡವಿ ಸೇರಿಬಿಡುತ್ತಿದ್ದ ರಾಮನ ತಮ್ಮ ಬುದ್ಧ. *****

ಪ್ರೇಮೋನ್ಮಾದ

ಚಟಪಟಿಸುವ ಎಲಬುಗಳನು ಕಿತ್ತು ಕುದಿಯುವ ರಕ್ತದಲಿ ಎದ್ದಿ ಸುಡುವ ಚರ್ಮದ ಮೇಲೆ ಬರೆದು ನಿನ್ನೆದೆಯ ಪೋಸ್ಟಬಾಕ್ಸಿಗೆ ಹಾಕಿದ್ದೇನೆ - ಬೇಕಾದರೆ ಓದು ಬೇಡವಾದರೆ ಅಲ್ಲಿಂದಲೇ ಅದಕೆ ಬೆಂಕಿ ಹಚ್ಚಿಬಿಡು. *****