ದಾರಿಯು ಇನಿತಾದರು ಕಳೆದಿಲ್ಲ,
ದೂರದ ಊರಿನ ಸುಳಿವೇ ಇಲ್ಲ,
ಹಸುರು ಬಯಲುಗಳೊ ಬಾಳಿನೊಳಿಲ್ಲ,
ಇರುಳಾಗಲೆ ಕವಿದಿದೆ, ಗೆಳತಿ!
ರವಿ ಮುಳುಗಿದನದೋ ದುಗುಡದ ಕಡಲಲಿ,
ಮೋಡದ ದಿಬ್ಬಣ ಆಗಸದೊಡಲಲಿ
ಅಬ್ಬರಿಸಿದೆ, ಭಯ ತುಂಬುತ ಸಿಡಿಲಲಿ
ಇರುಳಾಗಲೆ ಕವಿದಿದೆ, ಗೆಳತಿ!
ಇರುಳಿತ್ತಿದೆ ಮರುಳಿನ ಆಹ್ವಾನ,
ದೂರದಿ ಒರಲಿದೆ ಯಾವುದೋ ಶ್ವಾನ,
ಮರಮರ ಮರುಗಿದೆ ತರಗೆಲೆ ತಾನ,
ಇರುಳಾಗಲೆ ಕವಿದಿದೆ, ಗೆಳತಿ!
ಕಾಲು ತೊಡರುತಿದೆ, ಮುನ್ನಡೆಯುವ ದೆಸೆ
ದಿಕ್ಕುಗಾಣದೆಯೆ ನಾಳಿನ ಭರವಸೆ
ಬಿಕ್ಕಿ ಅಳುತಲಿರೆ, ಚಿರದುಃಖದ ಹಸೆ
ಇರುಳಾಗಲೆ ಕವಿದಿದೆ, ಗೆಳತಿ!
ದಾರಿ ತಪ್ಪಿಹುದು, ನೀನೆಲ್ಲಿ ನಡೆದೆ.
ಹಾಳು ಅಪ್ಪಿಹುದು, ನಾನಿಲ್ಲಿಯೆ ಉಳಿದೆ.
ಗೋಳು ಒಪ್ಪಿಹುದು, ಬಾಳು ನನ್ನದಿದೆ.
ಇರುಳಾಗಲೆ ಕವಿದಿದೆ, ಗೆಳತಿ!
*****