ಒಂದು ಕ್ಷಣ ಮೌನ ಭರಿಸಿ
ಮಾತು ಸರಿಯಿತು ನೀಲಿ
ಆಕಾಶದ ನಕ್ಷತ್ರಗಳು ಮಿನುಗಿದವು.
ಒಂದು ಕ್ಷಣ ಪಕ್ಷಿ ಇರುವದೆಲ್ಲವ
ಮರೆತ ಹಾಡು ಉಲಿಯಿತು
ಬಾನ ತುಂಬ ಪೂರ್ಣ ಬೆಳದಿಂಗಳು.
ಒಂದು ಕ್ಷಣ ಕಡಲ ಒಡಲ
ತಡಿಗೆ ಉಕ್ಕಿದ ತೆರೆ ಸರಿಯಿತು.
ಮರಳ ತುಂಬ ತುಂತುರ ಹನಿ ಫಳಪಳಿಸಿತು.
ಒಂದು ಕ್ಷಣ ಕಣ್ಣರೆಪ್ಪೆ ಮುಚ್ಚಿ
ಕತ್ತಲೆ ಆವರಿಸಿದ ಏಕಾಂತ
ಸಂಧಾನವಾಯ್ತು ನನ್ನ ನಿನ್ನ ತುಮುಲಗಳು.
ಒಂದು ಕ್ಷಣ ಮಳೆ ನಿಂತು
ಬರೀ ಹನಿಗಳು ಹುಯಿದು
ಧ್ಯಾನದ ಕಡಲು ಉಕ್ಕಿತು ಎದೆಯೊಳಗೆ
ಒಂದು ಕ್ಷಣ ಚಿಟ್ಟೆ ಹಾರಿ
ಹೂವಿನ ಮಕರಂದ ಹೀರಿತು
ನವನವೀನ ಉಲ್ಲಾಸ ಮನಸ್ಸಿನಲಿ ಅರಳಿತು.
ಒಂದು ಕ್ಷಣ ಹೀಗೆ ಒಳಗೆ
ಹೊರಗೆ ಹೋಗುವ ಉಸಿರು ನಿಂತು
ಮರುಗಳಿಗೆ ಜೀವ ಲೀನವಾಯ್ತು ಪರಮಾತ್ಮನಲಿ.
*****