ನಾನು ಹೆಣ್ಣು ಯುಗದ ಕಣ್ಣು
ದಾತ ದಾತನ ದಾತೆಯು,
ಮುಗಿಲಿನೆದೆಗೂ ಮಿಗಿಲು ನಾನು
ವಿಶ್ವ ಸೃಷ್ಟಿಯ ತಾಯಿಯು,
ಕಡಲ ಒಡಲಿನಾಳದಾಳ ನಾನು
ಜಗದ ಜೋಗುಳ ಗೀತೆಯು |
ಉರಿಯು ತಂಪು ತಾರಾ ಮಿಣುಪು
ಸಗ್ಗ ಋತುವಿನ ಸೋನೆಯು,
ಶೃಂಗ ಶೃಂಗದ ಶೃಂಗ ನಂದನ
ಭೃಂಗದೆದೆಯ ಮಿಡಿತವು,
ದಟ್ಟ ಝರಿ ವನ ಬನ ರಾಜಿ ನಾನು
ಧಮನಿ ಧಮನಿಗೂ ರುಧಿರವು |
ಇರದ ದೇವರನಿರವ ರೂಪಿನ
ತ್ಯಾಗ ಭೋಗ ಭಾಗ್ಯದ ಭರಣಿಯು,
ಬಿತ್ತು ಬಿತ್ತಿಗೆ ರೂಪ ರೂಹನು
ತಿದ್ದಿ ತೀಡೋ ಭ್ರೂಣ ಲತಿಕೆಯು,
ಪುರುಷ ನಿನಗೆ ಪ್ರಕೃತಿ ನಾನು
ಉಳಿವು ಬೆಳೆವಿನ ನಿಯತಿಯು |
ಅಂದು ಇಂದು ಹಿಂದೆಂದಿನಿಂದೋ
ಬಂಧ ಬಂಧದ ದಿಗ್ಭಂಧನ
ಸೃಷ್ಟಿ ದಿಟ್ಟಿಯ ಪುರುಷ ನಿನ್ನಯ
ಕೈಯಲುಗಿನೆದೆಯ ಚಂದನ
ಪಡೆದ ಕೊಸರೊಲವ ಋಣಿಯು ನಾನು
ತೆರುವ ವಡ್ಡಿ ಚಕ್ರದ ದಾಳವು |
ಆವ ಮನುವಿನ ಸ್ಮೃತಿ ವಿಸ್ಮೃತಿಯೋ
ಸೆಲೆಯ ಬಲೆಯ ಜಾಲವೊ
ಆವಕ್ಕರದಕ್ಕರಕೂ ನನ್ನ ನೆತ್ತರೆ ಶಾಯಿಯು
ವ್ಯಕ್ತಾವ್ಯಕ್ತ ಭೀತಿಯ ಛಾಯೆಯು
ಬರೆದ ಬರಹದ ಹೊಗೆಯ ಹಗೆಯ ನೀನು
ನನ್ನ ಬಸಿರ ಪ್ರಸೂತನು |
ಸುರತಿ ಸುಖದಾ ಬಯಲ ಬತ್ತಲೋ
ಹುತ್ತ ಹೊಕ್ಕ ಶುಕ್ರನ ಧಾರಿಣಿ
ವಿರತಿ ಶೃತಿಗೂ ರಾಗರತಿಯನುರಾಗಿಯು
ಒಲವ ಹೂಮಳೆ ಶೃಂಗಾರಿಣಿ
ಹುಟ್ಟು ಬೆಳೆವು ಮುಳುಗಟ್ಟು ಕಟ್ಟ ಬಟ್ಟೆ ನಾನು
ಭಾವ ಶೂನ್ಯ ಜನದೆದೆ ಜಗದಲಿ |
ಯಶದ ಯಶದಾಧಾರ ಧಾರ ತೊರೆಯು
ಯಶವಂತನಾ ಬೆನ್ನ ನೆರಳಲಿ
ಶೂದ್ರಸ್ಪುಶ್ಯ ಮೋಹ ಕಾಮಿ ಮಾಯೆಯು
ಕ್ರೂರ ಪುರುಷ ಕಲ್ಪದ ಸರಳಲಿ
ರಸದ ಜನನಕೆ ವಿರಸ ಮರಣಕೆ
ಸಮರಸದ ಬದುಕಿನ ದೀಪ ಕನ್ನಿಕೆ |
*****