ನಾನು ಗೀತೆಯ ಬರೆದು ಹಾಡಿದೆ
ಭಾವ ಭಾರದೆದೆಯ ತಣಿಸಲು
ಎಲ್ಲ ಮರೆತೊಮ್ಮನದಿ ನಲಿದು
ನಿಮ್ಮ ಪ್ರೀತಿಗೆ ನಮಿಸಲು |
ಸೋಲು-ಗೆಲುವೋ, ಗೆಲುವೊ ಸೋಲೋ
ಉಯ್ಯಾಲೆಯಲ್ಲಿ ಝೀಕುತ,
ಕವಿದಮಾವಾಸ್ಯಯ ಇರುಳಿನಲೆಯಲೂ
ಪೂರ್ಣ ಚಂದ್ರಮನೆಡೆಗೆ ನೋಡುತ
ಬದುಕೆ ಯಕ್ಷ ಪ್ರಶ್ನೆಯಾದರೂ
ರಕ್ಷೆಗಾಣಲು ಬಯಸುತ |
ಯಾವ ಸಂಚಿತ ಸಂಚಿನ ಕಾಲ್ಗಳು
ದೀಕ್ಷೆ ತೊಟ್ಟು ತುಳಿ ತುಳಿದರೂ
ಆತ್ಮ ಬಲದತಿಬಲದ ಪ್ರಭೆಯಲಿ
ಛಲದಿ ಸಾಗಿದೆ ಜೀವದುಸಿರು
ನಿತ್ಯ ಸತ್ಯದ ಹೊಳಪಿನಲ್ಲಿ
ಸೋತು ಗೆದ್ದ ಸೊಗಸನು ಸ್ಮರಿಸುತ |
ದಿಕ್ಕೂ ದಿಕ್ಕಿಗೂ ದಿಕ್ಕು ಗಾಣದೆ
ಕವಿದಂಧಕಾರದಿ ಅರಸುತ
ಸೂರ್ಯ ರಶ್ಮಿಯ ಜ್ಞಾನ ನಿಧಿಯಲಿ
ಬಾಳ ಬಂಡಿಯ ನಡೆಸುತ
ಅರಿವಿನರಿವಿನ ನೇಹದಲ್ಲಿ
ಕನಸ ಬಿತ್ತಿ ಬೆಳೆಯುತ |
ನಿಜದ ಗುರಿಯೇ ಇರದಿಹ
ಗುರುನಾಥರಿಲ್ಲಿ ಶವದಲಂಕಾರಕೆ
ಸ್ವಾರ್ಥ ನೀಚ ತಂತ್ರ ದೀಕ್ಷೆ,
ತೊಟ್ಟು ಕಟ್ಟುವ ತಂತ್ರಕೆ,
ಬಾಗದರಿವಿನ ಭಾಗ್ಯದಲ್ಲಿ
ಜೀವ ಧನ್ಯ ಧ್ವನ್ಯವ ಸ್ಮರಿಸುತ |
*****