ಬೆಲ್ಟ್ ಕಟ್ಟಿಕೊಂಡೇ ಗಡದ್ದಾಗಿ ಕುಳಿತದ್ದು
ಹೀಗೇ ಮಂಪರಕ್ಕೆ ಸ್ವಲ್ಪ ಒರಗಿರಬೇಕಷ್ಟೆ
ಎಲ್ಲೋ ಬುಲ್‌ಡೋಜರ್‌ದ ಸದ್ದು
ಜಾಲಾಡಿಸಿದ ಅನುಭವ
ಬಿಟ್ಟೂಬಿಡದೆ ಏನೇನೋ ಪೈಲಟ್‌ನ ಮಾತುಗಳು
ಗಗನಸಖಿಯ ಒಂದೇ ಸಮನದ ಉಲಿತ
“ನಿಮ್ಮ ಖುರ್ಚಿಯ ಪಟ್ಟಿ ಕಟ್ಟಿಕೊಳ್ಳಿ”
ಕಣ್ಣು ಬಿಟ್ಟದ್ದಷ್ಟೇ, ಉಸಿರು ನೆತ್ತಿಗೆ ಏರಿ
ಸಾವಿನಂಚಿಗೆ ಕರೆಯುವ ಎದೆ ಬಡಿತ
ಕಿಡಕಿಯಾಚೆ ಆನೆ ಐರಾವತ ಕರಿಮೋಡಗಳ
ಘರ್ಜನೆ ದಟೈಸಿದ ಕಪ್ಪು ಛಾಯೆ
ಉಸಿರುಗಟ್ಟಿ ಕಿತ್ತೋಡುವ
ನೊರೆನೊರೆಯ ಬಿಳಿಮೋಡ ಮೊಲಗಳು
ಬಿಟ್ಟೂಬಿಡದೆ ಎಗ್ಗರಿಸಿ
ಹೆದರಿಸುವ ಡೈನಾಸೋರುಗಳು
ಸಾವಿರಾರು ಮೈಲು ಹಿಂದೆ ಬಿಟ್ಟು ಬಂದ
ಮಕ್ಕಳ ಮುಗ್ಧ ಮುಖ; ಮುಂದೆ
ಸಾವಿರಾರು ಮೈಲಿನಲಿ ಕಾತರಿಸಿ ಕಾಯುತಿರುವ
ಜೀವದ ಜೀವ
ಒಬ್ಬೊಂಟಿ ಪಯಣಿಗಳು ಕಣ್ತುಂಬ ನೀರು.
ಮತ್ತೆ ಮತ್ತೆ ಅದೇ ಉಲಿತ
(ಏಳದಿರಿ ಸೀಟುಬಿಟ್ಟು, ನಡೆದಾಡದಿರಿ,
ಹೊರಗಡೆ ಭಾರಿ ಮೋಡಗಳು, ಗುಡುಗುಮಿಂಚು
ಬಿಗಿಯಾಗಿರಲಿ ಸೊಂಟಪಟ್ಟಿ ಎದೆಗುಂದದಿರಿ)
ಅಜ್ಜಿಯ ಪ್ರೀತಿ ಅಮ್ಮ ಅಪ್ಪನ ಬಾಳದೋಣಿ
ಸಾಧನೆಯ ಕನಸಿಗೆ ಕಾಲುಹಾದಿಯಲಿ
ಓಡಾಡಿ ದಕ್ಕಿಸಿಕೊಂಡ ಹೆಮ್ಮೆ
ಈತ ಒಮ್ಮೊಮ್ಮೆ ಸೂರ್ಯ ಚಂದ್ರ
ಎಲ್ಲರ ಮುಖಗಳು ಕಣ್ಣಿಗೆ ಕಟ್ಟುತ್ತವೆ
ದುಗುಡಿನ ಸವಾರಿಗರು
ಕಾಣದ ದೇವರಿಗೆ ಹರಕೆ ಹೊರುವ ಸಮಯ
ಬೇಕಾಗಿತ್ತೆ ಈ ದೂರದ ಹಾದಿ,
ಹಣದ ಬೆನ್ನೇರಿಕೆಗೇನಾದರು ಒಳಸಂಚೆ…..
ಕನವರಿಕೆ ಕಳವಳ ತಳಮಳ
ಬಿಕ್ಕಳಿಕೆ ಅಸಹಾಯಕತೆ
ಕಿಡಕಿಯಾಚೆ ಆನೆಗಳ ಗುದ್ದಾಟ
ಸೀಳಿ ಹೊರಟಿರುವ ಈ ಜಂಬೋಸವಾರಿ…..
ಸಾವಿಗೆ ಕ್ಷಣ ಗಣನೆ ಇದ್ದೀತೆ?
ಅಯ್ಯೋ ದೇವರೆ ಬೇಕಾಗಿತ್ತೆ…..
*****