ಅಮ್ಮ ಪ್ರತಿದಿವಸ ಒಲೆಸಾರಿಸಿ
ರಂಗೋಲಿ ಇಡುತ್ತಿದ್ದಳು ಎದೆಯ
ಒಲೆಯ ಉರಿ ಎಂದೂ ಆಗಲೇ ಇಲ್ಲ.
ಅವರಿವರ ದೊಡ್ಡವರು ಮಾತುಗಳು
ಅವಳ ಒಲೆಯ ಗೂಡು ಕಣ್ಣುಗಳು
ಯಾವಾಗಲೂ ಊದಿಕೊಂಡಂತೆ
ಉಸಿರುಗಳು ಗಾಳಿಯಲಿ ತೇಲಿ
ಅವಳು ಮತ್ತೆ ಒಲೆ ಊದುತ್ತಿದ್ದಾಳೆ.
ಸತ್ತ ಕ್ಷಣಗಳು ಮತ್ತೆ ಪುಟ ವಿರಿಸಿ
ಒಲೆ ಹೊತ್ತಿಸುವ ಕಾಯಕ ಅವಳಿಗಲ್ಲದೇ
ಇನ್ನಾರಿಗೆ ಗೊತ್ತು | ಸಂತೆಯಲಿ
ಎಲ್ಲಾ ವಸ್ತುಗಳ ಮಾರಾಟ, ಅವಳ ಕನಸು
ಬಿಕರಿಗೆ, ರಾತ್ರಿಯ ಪಹರಿಗೆ ಯಾವ ಮಜಲು?
ನಡೇದೇ ನಡೆದಳು ಕಾಲಸಪ್ಪಳ ಯಾರಿಗೂ ಕೇಳಲಿಲ್ಲ.
ಅತ್ತ ಕಂದಮ್ಮಗಳ ತಲೆತೊಡೆಗೇರಿಸಿಕೊಂಡು,
ಬಡಿಯುತ್ತಿದ್ದಾಳೆ ಭೂಮಿಯ ಗುಂಡಗಿನ ರೊಟ್ಟಿ
ಒಲೆಯೊಂದು ಮಾತ್ರ ಅವಳ ಬೆಚ್ಚಗಿರಿಸಿದೆ
ಕಿಚ್ಚು ಅರಳಿಸಿ ಬೇಯಿಸುತ್ತಾಳೆ ಬಿಳಿ
ಘಮ ಘಮಿಸುವ ಅನ್ನ ಎಲ್ಲಾ
ಪಾಡುಗಳು ಅವಳು ಕಟ್ಟುವ ಬುತ್ತೀಗಂಟು.
ಊದಿದ ಒಲೆಯ ಬೆಂಕಿ ಅಮ್ಮ
ಅವಳುಸಿರು ಒಲೆಯ ಬೆಂಕಿ
ಅವರ ಹೆಗಲಮೇಲೆ ಎಲ್ಲರ ಜಾಗ
ಎಲ್ಲವೂ ಮೇಳೈಸಿದ ಹಿತದ ರಾಗ
ಅಮ್ಮ ಬೆಂಕಿ ಶ್ರೇಷ್ಠ ದೈನಂದಿಕ ಚಟುವಟಿಕೆ.
*****