ಜೋಪಾನ, ಹುಷಾರು, ಮಗ ಬಹಳ ತುಂಟ
ಕೈ ಬಿಡಲೇಬೇಡ
ಬೀಳ್ಕೊಡಲು ಬಂದ ಎಲ್ಲರ ಮಾತಿಗೂ
ಹೂಂ ಗುಡುತ ಗಟ್ಟಿಯಾಗೇ ಮುಂಗೈ
ಹಿಡಿದು ನಿಲ್ದಾಣದೊಳಗಡೆ….
ಟಿಕೆಟ್ ಪಾಸ್ಪೋರ್ಟ್ ಬ್ಯಾಗೇಜ್
ಅದೂ ಇದೂ…..
ಮೂರು ತಾಸಿನ ಬಿಗಿಹಿಡತ ಬಿಡಿಸಿ
ವಿಮಾನದೊಳಹೊಕ್ಕು
ಕಿಡಕಿಯ ಕುರ್ಚಿಗೆ ಎತ್ತಿಹಾಕಿ
ಮತ್ತೆ ಬೆಲ್ಟ್ ಬಿಗಿದು ಹಗುರಾದೆ
ಮೂರು ವರ್ಷದ ಮಗನ ಕಣ್ತುಂಬ ನೀರು
ಬೆಲ್ಟ್ ಕಳಚಲು ಹರಸಾಹಸ.
ಎಷ್ಟೊಂದು ಬಿಕ್ಕಳಿಕೆ ಅದೆಷ್ಟು ಒದ್ದಾಟ
ಗಗನಸಖಿ ಕೊಟ್ಟ ಚಾಕ್ಲೆಟ್,
ನನ್ನ ಮುದ್ದು, ಪ್ರಯೋಜನಗೆ ಬರದೇ
ಒಂದೇ ಸಮನೆ ‘ಮನೆಗೆ ಹೋಗುವ’ ಪ್ರಲಾಪ;
ವಿಮಾನದ ಬೆಲ್ಟ್ ಲೈಟ್ ಆರಿ
ಸಮ ಪಾತಳಿಗೆ ಪಯಣ
ಮಗನ ಬೆಲ್ಟ್ ಬಿಚ್ಚಿದ್ದೆ ಸಾಕು
ಚಂಗನೆ ಸೀಟಿನಿಂದ ಜಿಗಿದು
ನಡು ಹಾದಿಯಲಿ ಓಡಾಡಿದ್ದೆ ಓಡಾಡಿದ್ದು.
ಹಿಡಿಯಲು ಹೋದಷ್ಟು ತಪ್ಪಿಸಿಕೊಳ್ಳುವಿಕೆ
ಉಳಿದ ಮಕ್ಕಳೂ ಒಂದೊಂದೇ
ವಿಮಾನದಂಗಳಕಿಳಿಯತೊಡಗಿದವು-
ನಿದ್ದೆ, ಮೋಡದೊಳಗೆ ಮಾಯ
ಮಗನ ಮುಖತುಂಬ ಚಂದ್ರ
ಕಣ್ತುಂಬ ಚುಕ್ಕೆಗಳ ಸಂಭ್ರಮ
ಕಾಲಿಗೆ ಚಕ್ರ-
*****