ನಡು ಸಮುದ್ರದ ನೆತ್ತಿಯ ಮೇಲೆ
ನಡು ಸೂರ್ಯನ ಉರಿಬಿಸಿಲ ಕೆಳಗೆ
ಸುಮ್ಮನೆ ನಿಂತು ಬಿಟ್ಟಂತಿದೆ ಈ ವಿಮಾನ
ಕಿಡಕಿಯಾಚೆ ಕೆಳಗೆ ಇಣುಕಿದರೆ
ಇಡೀ ಬ್ರಹ್ಮಾಂಡವೇ ಆವರ್ತಿಸಿದಂತೆ
ಎಲ್ಲೆಲ್ಲೂ ಕಪ್ಪು ನೀಲಿ ನೀರೇ ನೀರು
ಅರಬ್ಬಿ ಸಾಗರದ ದೈತ್ಯ.
ಅಲ್ಲಲ್ಲಿ ತೊನೆದಾಡುವ ನೊರೆ ತೆರೆ
ಮತ್ತೆ ಮತ್ತೆ ಕಣ್ಣು ಕೋರೈಸಿ
ಸಮುದ್ರ ರಾಜನ ಅಪ್ಪುಗೆಯ ಹಿಡಿತ ಬಿಡಿಸಿ
ಮಿಂಚಿ ಮಾಯವಾಗುತ ಓಡುವ
ಬಿಂಕ ಬಿನ್ನಾಣದ ಹುಡುಗಿಯರು.
ಕಾಣಲು ಏಕಾಂಗಿ ಸಂಚಾರಿಯೆಂಬಂತೆ
ಹೊರಟ ಹಡಗದ ಹೊಟ್ಟೆ ಬಲ್ಲೆ
ಒಳಗೆ ನೂರಾರು ಜೀವಿಗಳ ಜಗತ್ತು
ನೋಡುತಿರಬೇಕವರು
ನನ್ನಂತೆಯೇ ಕಿಡಿಕಿಯಾಚೆ
ಕೈ ಬೀಸುವೆವು ಸಹಪಯಣಿಗರು
ಸುಖದಿ ದಡ ಸೇರಲು
ಸಮುದ್ರ ರಾಜನ ರಾಜ ಸೂರ್ಯ ಎನ್ನಲೇಬೇಕಿಲ್ಲ
ಅವನ ಗತ್ತು ಗಮ್ಮತ್ತು ಧಿಮಾಕುಗಳಿಗೆ
ಕಾಲನ ಚಕ್ರದ ಹಿಡಿತ
ಅವನಿಗಲ್ಲದೆ ಇನ್ನಾರಿಗೆ
ಅಜ್ಜ ಮುತ್ತಜ್ಜರ ನೂರಾರು ತಲೆಮಾರು ನೋಡಿದಾತ
ಅವರ ಸಾಕ್ಷಿಗೆ ನೀನೆನ್ನುತ್ತಾನೆ
ನಮಸ್ಕರಿಸುವುದಷ್ಟೇ ನನ್ನ ಕೆಲಸ
ಸಾಕ್ಷಾತ್ ದೇವರು
ಮೇಲೆ ಸೂರ್ಯ ಕೆಳಗೆ ಸಮುದ್ರ
ನಡುವೆ ನನ್ನ ಪಯಣ
ಎಲ್ಲವೂ ನಿಂತಂತೆಯೇ
ಒಂದಕ್ಕೊಂದು ಮಾತುಕತೆಯಲ್ಲಿ ತೊಡಗಿದಂತೆ
ಹೀಗೆ….. ಕಣ್ಣಕೀಲಿಸಿ ಸಡಗರಿಸುವಾಪರಿ
ನಿಧಾನಕೆ ಹಡಗು ಸರಿದು
ಸೂರ್ಯ ಇಳಿದು…..
ವಿಮಾನ ವೇಗದ ಮೋಡಿಗೆ
ಬೆಪ್ಪು ಬೆರಗಾಗುವ ರೀತಿ.
*****