ಇರಿಯಲೆಂದೆ ಕಟ್ಟಿದ ಚಾಕು
ಇರಿಯದಿರುವುದೆ ಎದುರಾಳಿಯ ಎದೆಹೊಕ್ಕು
ಇರಿದು ತಣಿಯಬೇಕು
ರಕ್ತದ ಮಡುವಿನಲ್ಲಿ
ಮನುಕುಲದ ರೋಷ ಕಾಯಿಸಿದ ಉಕ್ಕು
ಹತ್ತು ಹೇಂಟೆಗಳರಸ
ಇನ್ನೆಷ್ಟೋ ಮರಿಗಳ ಮೂಲಪುರುಷ
ಇಡಿಯ ಬಯಲನ್ನೆ ಅವಲೋಕಿಸಿ
ನಿಂತಿದೆ ಹೇಗೆ ಕತ್ತೆತ್ತಿ ಕಣ್ಣ ಹೊರಳಿಸಿ
ತನ್ನ ಎತ್ತರಕ್ಕಿಂತಲು ಉತ್ತರ ನಟಿಸಿ
ಕಾಲ ಕೆರೆಯುತ್ತ ಕೂಗಿ ಕರೆಯುತ್ತ
ಅದೆಂಥ ಹಸಿವೊ ಕಾಮವೊ
ಮರಣದ ಛಲವೊ!
ಕಲ್ಲಿಸಂಕದ ಪೂಂಜರೇನು ಮಾಡುತ್ತಿದ್ದಾರೆ ಇಲ್ಲಿ?
ತಮ್ಮ ಹುಂಜದ ಘಾಯ ಹೊಲಿಯುತ್ತಿದ್ದಾರೆ
ತುಂಬುತ್ತಿದ್ದಾರೆ ಅದಕ್ಕೆ ಪ್ರಾಣವಾಯು
ಕಿವಿಯಲೇನೋ ಹೇಳುತ್ತಿದ್ದಾರೆ
ಕೆರಳಿಸುತ್ತಿದ್ದಾರೆ ಇತಿಹಾಸಪೂರ್ವದ ನೆನಪುಗಳ
ಕೊನೆಗೂ ಧರೆಯಲ್ಲಿ ಮಲಗುವ ತನಕ
ಪ್ರತಿಯೊಂದು ಘಳಿಗೆಯೂ ಪುಳಕ
ಕೆರೆಯೇರಿಯಲ್ಲಿ ಹಾದು ಗುಡ್ಡಗಳ ದಾಟಿ
ಬಯಲುಗಳ ನಡೆದು ಬಂದವರು ಇವರು
ಸಂಜೆ ಮರಳುವರು
ಬಂದ ಹಾದಿಯಲಿ
ಬಟ್ಟೆಬರೆ ರಕ್ತಮಯ
ಪ್ರತಿಯೊಂದು ಸಂಕ್ರಾಂತಿಯೂ ದಿಗ್ವಿಜಯ
ತುಂಡಾದ ರೆಕ್ಕೆಪುಕ್ಕ ಯಾವ ಲೆಕ್ಕ?
ಒಂದೊಂದು ಕಂಕುಳಲ್ಲೂ
ಒಂದೊಂದು ಹಿಟ್ಟಿನ ಹುಂಜ
ಆಹ! ಕೂಗಿತೆ ಮೂರು ಬಾರಿ?
ಇಲ್ಲ, ಇದು ಕತ್ತಲೆಯ ದಾರಿ
*****