ಕೇರಳದ ಹುಡುಗಿಯರು ಸದಾ ಶೋಡಶಿಯರು
ಎಂದರೆ ಅತಿಶಯೋಕ್ತಿ ಹೌದು ಅಲ್ಲ
ಕಾರಣ ಇದ್ದೀತು ಹೀಗೆ-
ಕೇರಳದ ಮಣ್ಣು
ಉತ್ತರೂ ಬಿತ್ತರೂ ಬೆಳೆದರೂ ಕೊಯ್ದರೂ ಸದಾ
ಛಲೋ ಹೊಸ ಹೆಣ್ಣು-ಎಂದರೆ ಈ
ಸಮುದ್ರದ ಉದ್ದ ಗಾಳಿಗೆ ಮಳೆಗೆ ಬಿಸಿಲಿಗೆ
ಜೀವಂತ ಒಡ್ಡಿದ ಬೆತ್ತಲೆ ದೇಹ-
ಇಲ್ಲಿ ಈ ಬಯಲಿನ ಸೊಬಗಿನ
ತೆಂಗಿನ ನಾರಿನ ನೀರಿನ ಕೊಂಪೆಯ ಕೇರಿಯ
ಕಳ್ಳಿನ ಕಾಮದ ಜಗಳದ ಕೇಕೆಯ ಫೇರಿಯ
ಎದ್ದ ನಗರಗಳ ಬಿದ್ದ ಬೀದಿಗಳ ಜನಗಳ ಸಂಘರ್ಷದ ಸೆಕೆಗೆ
ಈ ಭೂಮಿಯಲ್ಲಿ ಅವತರಿಸಿದ ಶಾಪಗ್ರಸ್ತೆಯರು
ಈ ಭೂಮಿಯ ಸೆಳವಿಗೆ ತುಯ್ಯುತ್ತಾರೆ ಈ ಕಡಲಿನ ತೆರೆಗಳ
ಏರಿಳಿತದ ಕರೆಗೆ ಓಗೊಡುತ್ತಾರೆ
ಪ್ರಮೋದೆ ಪ್ರಮೀಳೆಯ ಸುಕುಮಾರ ಕತೆಯ ಪರಿಷೆಯಲ್ಲಿ
ದುರಂತ ಕಾಣದಿರಬಹುದು ಕಣ್ಣುಗಳ ಹಿಂದೆ
ನಿರಾಸೆ ಮಾಯ್ದಿರಬಹುದು ಕಾಡಿಗೆಯ ಹಿಂದೆ
ನಿಟ್ಟುಸಿರು ಕೇಳದಿರಬಹುದು ಚೆಲ್ಲಾಟದ ಹಿಂದೆ
ಕತೆಗೂ ವಾಸ್ತವತೆಗೂ ಅಂತರವಾಗಿ ನಿಂತ ಇವರಲ್ಲಿ
“ಆ!” ಎಂದು ಆಶ್ಚರ್ಯ ಚಿಮ್ಮಿದಾಗಲೂ ಕಣ್ಣುಗಳಲ್ಲಿ
ಅಥವಾ ವೇದನೆ ಹರಿದಾಗಲೂ ಕೆನ್ನೆಗಳಲ್ಲಿ
ಅಥವಾ ರೋಮಾಂಚ ಮೂಡಿದಾಗಲೂ ಮೈಯಲ್ಲಿ
ಬದುಕು ಒಂದಲ್ಲ ಒಂದು ವಿಧ ಮೂರ್ತಗೊಂಡಾಗಲೂ ಇವರಲ್ಲಿ
ತುರುಬಿನ ಈ ಎಣ್ಣೆಯ ಕಣ್ಣಿನ ಈ ಸೆಳಕಿನ
ಕಂಕುಳ ಈ ಬೆವರಿನ ಸುವಾಸದ ಆಕರ್ಷದ ಹಿಂದೆ
ಬದುಕಿನ ಉದಯಾಸ್ತಮದ ವ್ಯಂಗ್ಯದಲ್ಲೂ
ಇದರ ನಿಷ್ಠುರ ಕ್ರೌರ್ಯದಲ್ಲೂ
ಎಲ್ಲರನ್ನೂ ಎಚ್ಚರಿಸಿ ಹಂಗಿಸಿ ನಗುವ ಭಂಗಿ
ಹೆಜ್ಜೆಯಲ್ಲಿ ಗೆಜ್ಜೆಯಲ್ಲಿ ಇವರ ಉದಾಸೀನದ ಒಜ್ಜೆಯಲ್ಲಿ
*****