ಮಡಿಕೇರೀ ಮಲೆ ಸೃಷ್ಠಿಯ ಕೋಮಲೆ
ಸುತ್ತಲು ಗಿರಿಸಾಲು.
ಬಯಲಿನ ತಪ್ಪಲು ನಿರ್ಝರ ದರಿಗಳು
ನಿಡು ಮರ ಗಿಡ ಸಾಲು,
ಸೃಷ್ಠಿಯ ರಮ್ಯ ಸೌಂದರ್ಯಗಳು
ದೃಷ್ಠಿಯೆ ಬೀಳದ ಆಳದೊಳೆಲ್ಲಿಯು
ಹಚ್ಚನೆ ಹೊಲಸಾಲು
ಸುತ್ತು ದಿಗಂತವ ಅಪ್ಪುತ ನಿಂತಿಹ
ನುಣ್ಣನೆ ಬೆಟ್ಟಗಳು,
ಸುತ್ತಲು ಹಬ್ಬಿದ ಬನಹಸುರು.
ತಪ್ಪಲ ಸಾನುವಲಾಯ್ವವು ದನಗಳು
ಅಂಬಾ-ಅನ್ನುತಲಿ-
ಇನಿವಣ್ ಮೆಲುತಲಿ ಮಿಗಮರಿ ಗಿರಿಯಿಂ
ಪೊದರೊಳು ಸೇರಿದವು
ಸಂಜೆ ವಿಶ್ರಾಂತಿಯ ಹೊಂದುವವು.
ಪಡುವಣ ಮಾರುತದೊಂದಿಗೆ ಹಾರುವ
ಚಿಲಿಪಿಲಿ ಹಕ್ಕಿಗಳು
ಕಣಿವೆಯಿಂದೊಯ್ಯನೆ ಬೆಳೆದಾ ಮರಗಳ
ಗೂಡಿನಲೊರಗುವವು
ಪೀಂ ಪೀಂ ಹಾಡಿನ ತಾಳಗಳು.
ತಪ್ಪಲ ನಿರ್ಝರ ಸುಂದರ ಸುಮಕರ
ದೃಶ್ಯದ ರೂಪವದೊ-
ಕಾಳಾಹಿಯ ತೆರ ಬಳಸೋಡುವ ಹಲ
ರಸ್ತೆಗಳದೊ-ಓಟ
ಬತ್ತದ ತೆನೆಗಳ ಗೆಲು ನೋಟ!
ಪಶ್ಚಿಮ ವಾರಿಧಿ ಸ್ನಾನವನೆಸಗಲು
ರವಿಯದೊ ಇಳಿಯುವನು,
ಕೆಂಗದಿರುಗಳನು ಬಾನ್ ಬಯಲೆಲ್ಲ
ಪಸರಿಸಿ ಇಳಿಯುವನು
ಸಂಜೆಯ ಸೂರ್ಯನು ಮುಳುಗುವನು
ರಾಜಾಸನದಾ ಕಟ್ಟೆಯ ಮೇಗಲಿ-
ಕೇರಿಯ ತರುಣಿಯರು
ರಮ ರಮ ಝಿಮ ಜಿಮ ಸಂವಾದಗಳಾ
ಲೀಲೆಯೊಳ್ ಮುಳುಗಿದರು
ಮರೆತರು ಸುತ್ತಲ ಲೋಕವನು.
ಹಕ್ಕಿಗಳಾಡೂ ಚಂದಿರನುದಯವು
ಗುಂಯ್ ಗುಂಯ್ ತುಂಬಿಗಳಾ
ಚಂಚಲ ಕರೆಯಲಿ, ಕೇಳಿಯ ಮರುಳಲಿ,
ಮನೋಲ್ಲಾಸದಲಿ-
ಕಾಮನ ವಾರ್ತಾವಿಷಯದಲಿ.
ತೆಂಬೆಲರೊಯ್ಯನೆ ತಣ್ಣನೆ ಬೀಸಲು
ಕುಣಿದವು ಕುರುಳುಗಳು-
ಮೊಲೆಕಟ್ಟುಡುಪೂ ಹಿನ್ನಿರಿ ಕುಚ್ಚೂ
ಜರಿ ವಸ್ತ್ರ ತೊಟ್ಟು-
ಮಿನುಗಿತು ಕುಂಕುಮದಾ ಬೊಟ್ಟು.
ಚೆಣಿಕಣಿ ಬಳೆಗಳು ಝಲ್‌ಜಲ್ ನೂಪುರ
ರತ್ನದ ಒಂಟಿಸರ
ತೂಗುವ ಜುಂಕಿಗಳೋಲೆಯನಾಡಿಸಿ
ಕುಲುಕುವರಾ ತಲೆಯ-
ಎದೆ ಮೇಲಿರಿಸುವರಾ ಜಡೆಯ!
ಆಚಿಂದೀಚೆಗೆ ಸರಸದಲಾಡುತ
ಘಮಘಮ ಹೂಗಳನು-
ಕೋಲಿಂ ಬೀಳಿಸಿ ‘ತೇರೆ ಶಿವಾ’ಡುತ-
ಪೋಣಿಸಿದರು ಮಾಲೆ-
ಸಂಪಿಗೆ ಜಾಜಿಗಳೂಮಾಲೆ!
ಕೆಂಪದೊ ಬಾನೂ ಮುಗಿಲೋಳಿಗಳೂ
ವರಿಸುವೆನವನೆನುತ-
ತಂತಮ್ಮ ಕೊರಳೊಳು ಹಾಕುತಮಾಲೆಯ
ಕೈಪರೆಯಾಟದಲಿ-
ನಾಚುವರವರೇ ಗೇಲಿಯಲಿ.
ಸೂರ್ಯನ ಕಾಂತಿಯು ನೀಲಾಕಾಶದಿಂ-
ದೆಲ್ಲಿಯೊ ಹರಿದೋಯ್ತು!
ನಿರ್ಜನ ಭೂಮಿಯದಾಯಿತು-ಸರಿದರು
ಉಳೀಸುತ ಕತ್ತಲನು
ಅನುಭವಿಸುತಲೀ ಹರುಷವನು!
*****