ಕಣ್ಣು ಸುತ್ತಲಿನ ಕಪ್ಪುಛಾಯೆಗೆ
ಅದೆಷ್ಟು ಮೇಕಪ್ ಗಲ್ಲಕೆ ಅತಿಯಾದ ಬ್ಲಶ್
ಅದವಳಿಗೆ ಹೊಂದುವದೇ ಇಲ್ಲ
ನಗು ಎಲ್ಲಿಯೋ ಕಾಲು ಕಿತ್ತಂತೆ
ಮಾತುಗಳಿಲ್ಲ ಗುಮ್ಮಿ
ಅಂತರಾಷ್ಟ್ರೀಯ ಗಗನಸಖಿ ಇವಳೆ?–
ಯಾಕೋ ಅವಳನ್ನು ಮತ್ತೆ ಮತ್ತೆ
ನೋಡಬೇಕೆನಿಸಿ ಏನೇನೋ ನೆಪ ಮಾಡಿ
ಹಸಿರುದೀಪ ಒತ್ತುತ್ತಲೇ ಇದ್ದೆ-
“ಬೀದಿಕಾಮಿಗೆ ಹುಟ್ಟಿ
ಹಾದಿಬದೆ ಬೆಳೆದು ಓದಿ
ತುತ್ತಿನ ಚೀಲದ ತೊತ್ತೆಯಾಗಿರಬೇಕಾದರೆ
ಕಣ್ಣಲ್ಲಿ ಬೆಳಕು ಕಂಡೀತು ಹೇಗೆ?
ಎದೆತುಂಬ ಕೆಂಡದುಂಡೆ
ಮನಸ್ಸು ಸುಟ್ಟು ಮಹಾ ಸ್ಫೋಟ.
ಪ್ರೀತಿಯೆಂದರೆ-ತೋರಿಕೆಯೇ,
ಕಾಮವೇ, ತ್ಯಾಗವೇ, ಶೋಷಣೆಯೇ
ಅರ್ಥಗರ್ಭದ ಕೊರಳಿಗೆ ಹತ್ತಾರು ಮಾತುಗಳು
ನಿಗೂಢತೆ- ಗಂಟಲು ತುಂಬಿತ್ತು.”
ಆಲ್ಪ್ಸ್‌ದ ಹಿಮ, ಶುಭ್ರತೆ ನೋಡೆಂದೆ-
ಮತ್ತೊಂದು ಸುತ್ತಿಗೆ ಬಿಸಿ ಕಾಫಿ ತಂದಾಗ
ಹುಲ್ಲುಗಾವಲು ಅದರ ಪಚ್ಚಹಸಿರು ತೋರಿಸಿದೆ-
ಬಿಕ್ಕಳಿಸಿದ ಹುಡುಗಿಯ ಕಣ್ಣೀರು
ಕೆಂಡವಾಗಿ ಉರುಳುರುಳಿ ಕೊನೆಗೆ
ಆಲ್ಪ್ಸ್‌ದಷ್ಟು ತಂಪು ಹಸಿರು ನಗು
ಮೈಮನವೆಲ್ಲಾ ತುಂಬಿ
ಚಿಗುರೊಡೆಯುವ ಸಂಭ್ರಮಕೆ
ಮಾತು ಮನಸು ಕುಸುಮಿಸಿ
ಚಿತ್ತಾರವಾದಳು.
*****