ಅಯೋಧ್ಯೆ ರಾಜ್ಯದಲಿ ಇನಕುಲದ ಖ್ಯಾತಿಯಲಿ
ಧರ್ಮಾಭಿಮಾನದಲಿ ಬಾಳಿದನು ನೋಡಾ.
ದಶರಥನೆಂದಾತನೀ ನೃಪ ಶ್ರೇಷ್ಠನೆಂಬಂತೆ
ಪಾಲಿಸುತ ದೇಶವನು ಆಳಿದನು ಕೇಳಾ.
ರಾಜಾಧಿರಾಜನೂ ಭುವನೈಕ ವಂದ್ಯನೂ
ಸಿರಿಲೋಲ ಮಾನ್ಯನೂ ರವಿಕುಲದ ಪ್ರಭುವು;
ಎಂದೆನಿಸಿ ತ್ರಿಪತ್ನಿಯಿಂದೆಸೆದ ರಾಜನಿಗೆ
ಪುತ್ರಸುಖ ಸಲಿಸದಿಹ ಕೊರತೆಯಿದು ನಿಜವು!
ಪ್ರಾರ್ಥಿಸುತ ಧೀರಸುತ ಮೊರೆಯಿಡುತಲತಿಶಯದಿ
ಪೊಂದಿದನೆ? ತೊಡಗಿದನು ಪುತ್ರಕಾಮೇಷ್ಠಿ;
ಆಚರಣೆಗೆಂದೆಂದು ಋಷಿವರರ ಕರೆಯಿಸುತ
ದಶರಥನು ಸುರಿಸಿದನು ಬೇಡಿಕೆಯ ವೃಷ್ಠಿ!
ಆನಂದ ಸಂಸಾರ, ಸತ್ಪುತ್ರ ಶುಭಹಾರ-
ದಿಂದೆಸೆವ ಭಾಗ್ಯವದು ಇಲ್ಲದಿರೆ ಏಕೆ,
ರಾಜ್ಯಸಿರಿ ಜನಗಣವು ಲೋಕಾಧಿಕಾರಗಳು?
ಈ ಜಗಕೆ ವ್ಯರ್ಥವದು ಸಂದೇಹವೇಕೆ!
ಪುತ್ರಕಾಮೇಷ್ಠಿಯಿಂ ಪ್ರಸನ್ನನಾದನದೊ
ಸಂತುಷ್ಟನಾದ ಆ ದೇವತೆಯು ಅಗ್ನಿ-
ನಗುಮುಖದೆ ಒಲಿದೊಲಿದು ಹೋಮಾಗ್ನಿಯಿಂ ಹಾಡು
ಹರಿಸಿದನು ರಾಜನನು ತಲೆಯನ್ನು ಮುಟ್ಟಿ!
ಕೊಟ್ಟನದೊ ಪಾಯಸವ ಪ್ರಸಾದ ರೂಪದಲಿ
ಕೊಟ್ಟು ಮರೆಯಾದನಾ ಮಿಂಚಿನಂತಲ್ಲಿಂ;
ಇತ್ತ ನೃಪ ಸತಿಯರಿಗೆ ತ್ರಿಭಾಗವನ್ನೆಸಗಿ
ಮೂವರೊಳು ಹಂಚಿದನು ಬಹುಪ್ರೇಮ ಮುದದಿಂ.
ಹಿರಿರಾಣಿ ಕೌಸಲ್ಯೆ ಹಿರಿದಾಗಿ ಗರ್ಭವನು
ತಳೆದಳಾ ದಿನದಿನಕೆ ಹಿಗ್ಗಿಗ್ಗಿ-ಅಂತೆ!
ಹರಿವಂಶೋದ್ದಾರಕನ ಹಡೆಯುವಾ ಲಕ್ಷಣವ
ಮುದವಾಂತು ಪೊಂದಿದಳು ಶ್ರೀದೇವಿಯಂತೆ!
*****