ಮೊದಮೊದಲು ಎಲ್ಲವೂ ಹೀಗಿರಲಿಲ್ಲ
ಹೌದು ಎಲ್ಲವೂ ಹೀಗಿರಲಿಲ್ಲ!
ಭಾವುಕ ಕವಿಯ ಭಾವಗೀತೆಗಳಂತೆ
ಮೊಗ್ಗೊಂದು ತನ್ನಷ್ಟಕ್ಕೇ ಬಿರಿದರಳಿದಂತೆ
ಥೇಟ್ ಮಗುವಿನ ನಗುವಂತೆ
ಉತ್ಸಾಹದಿ ನಳನಳಿಸುತ್ತಿದ್ದ ಹುಡುಗಿ
ಇದ್ದಕ್ಕಿದ್ದಂತೆ ಹೀಗೆ,
ಪ್ರೌಢ ಹೆಣ್ಣಾಗಿದ್ದು ಹೇಗೆ?
ಈರುಳ್ಳಿ ಹೆಚ್ಚುತ್ತಾ
ಈರುಳ್ಳಿಯೇ ಆಗಿ
ಘಾಟಾಗಿ ಕಣ್ಣೀರಾಗಿ
ಪಕಳೆ, ಪಕಳೆಗಳ
ಎಳೆ ಎಳೆ ಬಡಿಸಿಟ್ಟಂತೆಲ್ಲಾ
ಸರ್ವವ್ಯಾಪಿಯಾಗಿ.
ಕೆಂಪು ಮೆಣಸಿನಕಾಯಿ ಹುರಿಯುತ್ತಲೇ
ಕಪ್ಪಾಗಿ ಖಾರವಾಗಿ
ಭಾವಗಳ ಸುಟ್ಟುಕೊಳ್ಳುತ್ತಾ
ಬಾಯ್ಗೆ ಸಿಕ್ಕಾಗೊಮ್ಮೆ
ಹಾ! ಎಂದು ಚುರುಗುಟ್ಟಿಸಿ
ತನ್ನದಲ್ಲದ ತನ್ನದರ ಬಗೆಗೇ
ಬೆಚ್ಚುತ್ತಾ ಭ್ರಮೆಗೊಳ್ಳುತ್ತಾ
ಅಮೂರ್ತದ ಚಿಪ್ಪೊಳಗೆ
ಮೆಲ್ಲಗೆ ಮೂರ್ತಗೊಳ್ಳುತ್ತಾ
ತನ್ನದೇ ಕ್ರೂರ ಮೌನಗಳಿಗೆ ಹೆದರಿ
ಅರ್ಥವಿಲ್ಲದ ಮಾತಾಗುತ್ತ
ನೆನ್ನೆಗಳ ನೆನೆಸುತ್ತಾ
ನಾಳೆಗಳ ಕನಸುತ್ತಾ
ಇಂದಿನಲ್ಲಿ ಕಳೆದುಹೋದ ಹುಡುಗಿ
ಈಗ ಯಾರ ಕ್ಷಮಿಸಬೇಕು?
*****