ಯಾರೋ ಒದ್ದು
ಚೆಲ್ಲಾಪಿಲ್ಲಿ ಹರಡಿದ ತನ್ನ
ಕನಸುಗಳನೆಲ್ಲಾ ಬಾಚಿ
ಗುಡ್ಡೆ ಹಾಕಿ ಗಂಟು ಕಟ್ಟಿ
ಬೆನ್ನಿಗೇರಿಸಿ
ಹೊರಟುಬಿಡುತ್ತಾಳೆ ಎಲ್ಲಾ ಧಿಕ್ಕರಿಸಿ!
ಕಾಡು, ಕಂದರ, ಪರ್ವತ
ಸಮುದ್ರ, ನದೀ ತಟ
ಬಿಚ್ಚಿದ ಆಕಾಶ
ಮುಚ್ಚಿದ ಭೂತಟ
ಎಲ್ಲ ಎಲ್ಲವ ದಾಟಿ
ನಡೆಯುತ್ತಾಳೆ ನಿರಂತರ!
ಆಣೆಗಳ ಇಟ್ಟಿದ್ದು
ಮಾತುಗಳ ಕೊಟ್ಟಿದ್ದು
ಎಲ್ಲೋ ಕಳೆದು ಹೋಗಿದ್ದು
ಎತ್ತರಗಳ ಬಗೆಗೆ ಭಯ ಪಟ್ಟಿದ್ದು
ಕಂದರದಲಿ ಬಿದ್ದಾಗ ಅತ್ತಿದ್ದು
ಎಲ್ಲಾ ಮರೆತು
ನಾಳೆಗಳಲ್ಲಿ ಕಣ್ಣು ಹೂತು,
ಹಿಂದೆಂದೋ ಒಮ್ಮೆ
ರಾಜಕುಮಾರನದಾಗಿದ್ದ
ಹಾರುವ ಕುದುರೆಯನೇರಿ
ಹೊರಡುತ್ತಾಳೆ ಶಿಕಾರಿಗೆ!
ಬೆನ್ನಿನ ಮೇಲೆ ಇವಳದೇ
ಮುರಿದ ಕನಸುಗಳು
ನಾಳೆಗೆ ಸರಿಪಡಿಸಲು!
ಹಿಂದೆ ಕುದುರೆ ಯಾರದೋ
ಆಗಿದ್ದರೇನು?
ಈಗ ಅವಳೇ ನಿರ್ಮಿಸಿದ
ದಾರಿಗಳು!
*****