ಹೇ ತಾಯಿ,
ನೀ ಬರಿಯ ನೀರಲ್ಲ
ನೀರೆಂಬ ಮಾಯೆ!
ಹನಿಹನಿಯ
ಬೊಗಸೆ ಬೊಗಸೆ
ಹೀರಿದರೂ ಹಿಂಗಿತೇ ದಾಹ?
ಮತ್ತೆ ಮತ್ತೆ ಬೇಕೆನಿಸುವ
ತೀರದಾ ಮೋಹ!
ಬರಿಯ ನೀರೆಂದು
ಬೋಗುಣಿಯಲಿ ತುಂಬಿಸಿಡುವಾಗ
ಥಟ್ಟನೆ ಘನೀಬವಿಸಿ
ಮಂಜುಗಡ್ಡಯಾಗಿಬಿಡುವ
ಮಾಯೆಯ ಚಮತ್ಕಾರ!
ವಿವಿಧ ರೂಪದಲಿ, ಆಕಾರದಲಿ
ನಿನ್ನ ಭವ್ಯಚಿತ್ರ
ಸನ್ನಿವೇಶಕೆ ತಕ್ಕಂತೆ
ವೇಷ ಬದಲಿಸುವ ಪಾತ್ರ!
ಕಡಲೆಂದು ಕೈಮುಗಿವ ಗಳಿಗೆ
ನದಿಗಳೆಲ್ಲವ ನುಂಗಿ
ಅಟ್ಟಹಾಸದಿ ಧುಮ್ಮಿಕ್ಕಿ ಬೋರ್ಗರೆದು
ದಂಡೆಗಪ್ಪಳಿಸಿ ಮೆರೆವ
ರುದ್ರತಾಂಡವ
ಬಿಸಿಯೇರಿ ಆವಿಯಾಗುತ
ರೂಪ ಬದಲಿಸುವ ಸೋಜಿಗಕೆ
ಸೃಷ್ಟಿಯೇ ಬೆರಗು
ನಿನ್ನೆದುರಿಗೆ ನಾನೊಂದು ಮಗು!
ಎಲ್ಲ ಎಲ್ಲವೂ ನೀನೇ ಮಾಯಿ
ಎಲ್ಲವೂ ನಿನ್ನಿಂದಲೇ ತಾಯಿ
ಹಾಲೂ ನೀನೇ
ಹಾಲಾಹಲವೂ ನೀನೇ!
ನಿನ್ನಿಂದಲೇ
ಸೃಷ್ಟಿ, ಸ್ಥಿತಿ, ಲಯ!
ನೀನೇ ಜೀವನಾಧಾರ
ನೀನೇ ಮಹಾಪ್ರಳಯ!
ಹೇ ತಾಯೆ
ನೀ ಬರಿಯ ನೀರಲ್ಲ
ನೀರೆಂಬ ಮಾಯೆ
ನನ್ನ ಮಿತಿಗಳಲಿ
ನಿನ್ನ ಕಲ್ಪಿಸುತ
ತುಂಬಿಸಿಡುವ ನನ್ನ
ಹುಂಬತನವ
ಅನವರತ ಮನ್ನಿಸಿ ಕಾಯೆ!
*****