ಭೂಮಿಯ ಒಡೆತನ
ಒಬ್ಬನಿಗಾಗಲು
ಬಾಳಿನ ಬೇಗುದಿ ಒಬ್ಬನಿಗೆ
ಐಸಿರಿಯೊಬ್ಬಗೆ
ಶರಣಾಗಲು ಇಹ
ಲೋಕವೆ ಅಸಮತೆ ಬೀಡಹುದು.
ರಾಜನ ಸಂಪದ
ಸಿರಿವಂತನ ಗೆಲು
ನೋಡುತ ಸಾಸಿರ ಜನವೃಂದ
ಬೆರಗಲಿ ಕುಳಿತೂ
ತಮ್ಮಯ ಪಾಡನು
ನುಂಗುತ ಕರಗುತ ಕಳೆಯುತ್ತ.
ಸಾಹಸ ಬಾಳಿಗೆ
ದೈವಿಕ ಸುಖಕೆ
ಪಾತ್ರರು ಅಲ್ಲವೆ ಜನಕೋಟಿ?
ಕಲ್ಪಿತ ವ್ಯಸನಕೆ
ಮಾಡಿದ ಕರ್ಮಕೆ
ಅಂತ್ಯವು ಇಲ್ಲವೆ ಈ ಜಗದಿ?
ಋತುಗಳು, ಕಾಲವು
ಸೂರ್ಯನು, ಚಂದ್ರನು,
ಪ್ರಕೃತಿಯೆಲ್ಲವು ಸಮವಾಗಿ
ಕ್ರಿಮಿಯಿಂದೊಡಗಿದ
ವಿಶ್ವ ಸರ್‍ವಸ್ವಕೆ
ಒದಗಿದ ಸುಖವನು ಕ್ರಮವಾಗಿ-
ಈಯಲು ಮಾನವ-
ಗಣದಲಿ ಬಹುವಿಧ
ಏತಕೊ ಬಂದಿತು-ಎಲ್ಲಿಂದ?
ಅಸಮಾಧಾನದ
ಮನಸನು ಕೊರೆಯುವ
ಕೀಟವೆ ಇಂದಿನ ಈ ಭೇದ.
ಜನ ಸಮಾಜದಿ
ರಾಜನು ಋಷಿಗಳು
ರಕ್ಕಸ ಬಲ್ಲಿದ ಬಡವನೆಂದು
ರೂಪಿಗೆ ವರ್ಣಕೆ
ಹೋಲುವ ಸ್ಥಿತಿಯಲಿ
ಕೋಟ್ಯಾದಿ ವಿಧ ಜೀವನವು.
ರಷ್ಯಾದೇಶದ
ಭೀಕರ ಕ್ರಾಂತಿಯು
ಫ್ರಾನ್ಸಿನ ವಿಪ್ಲವದಾ ಪರಿಯ
ಹೆಬ್ಬುಲಿ ತನ್ನಯ
ಪ್ರಾಣಕೆ ಹಾರುವ
ತೆರವಿದೊ ಜೀವನದತೃಪ್ತಿ.
ದೇಶದ ಋಣವನು
ರಾಜನ ಹೊಟ್ಟೆಲಿ;
ಕಾಡದು ಬೇಡನ ಬಲೆಯಲ್ಲಿ.
ಬಡವನ ಕೈಗಳು
ಧನಿಕನ ಜೇಬಲಿ
ಕಾಳ್ಗಳು ಹೆಗ್ಗಣ ಬಿಲದಲ್ಲಿ.
ಸುಭಿಕ್ಷಾವಾದವ-
ದಿಲ್ಲದೆ ಲೋಕವು
ಅನ್ನದ ಸಮರವೆ-ಅನ್ಯಾಯ!
ಮಣ್ಣಿನ ಪಾಪವು
ಬ್ರಹ್ಮನ ನೀತಿಯು
ಸುಟ್ಟಂತಾಯಿತು ಈ ಇರವು.
ಹೇಳುವ ನೀತಿಗೆ
ಬಾಯಲಿ ಸ್ಥಾನವು
ಮಿನುಗುವ ಒಡವೆಗೆ ಬೆಲೆಯಿಲ್ಲ!
ಹೊನ್ನು ಹಣಗಳ
ಮೋಹಿಸಿ ನರಳದಿ-
ರೆನ್ನುವ ಹಾಡಿಗೆ ತಾಳವಿಲ್ಲ.
ಸಮತಾವಾದದ
ಕ್ರಾಂತಿಗೆ ಶರಣಾ-
ಗುವೆನಿದೊ ಮನ್ನಿಸಿ ಧರ್ಮವನು.
ಸಮತಾ ಭಾವವು
ಸಮಗುಣ ಐಕ್ಯವು
ಸರ್ವಜನ ಸುಖ ಬೆಳಗಲಿದೊ.
*****