ಇಳಾ ಪ್ರಾಸ್ಪೆಕ್ಟ್ ತಗೊಂಡು ಮೀಟಿಂಗ್ ಮುಗಿಸಿ ಮನೆಗೆ ಬರುವಷ್ಟರಲ್ಲಿ ಸಂಜೆಯೇ ಆಗಿಬಿಟ್ಟಿತ್ತು. ಹೊಟೆಲಿನಲ್ಲಿ ನಿವಾಸ್ ಊಟ ಕೊಡಿಸಿದ್ದರಿಂದ ಹಸಿವಿರಲಿಲ್ಲ. ಮುಂದೆ ಓದಲು ಅಮ್ಮನನ್ನು ಹೇಗೆ ಒಪ್ಪಿಸುವುದು- ಎಂಬುದೇ ದೊಡ್ಡ ಚಿಂತೆಯಾಗಿತ್ತು. ಆದರೆ ಅಮ್ಮ ಶಾಲೆಯಲ್ಲಿಯೇ ಮುಂದುವರೆಯುತ್ತೇನೆ ಎಂದರೆ ಓದಲೇಬೇಕಿತ್ತು. ಅದೇ ಯೋಚನೆಯಲ್ಲಿ ಮನೆ ಸೇರಿದ್ದೇ ತಿಳಿಯಲಿಲ್ಲ.
ನೀಲಾ ಆಗಲೇ ಮನೆಗೆ ಬಂದಿದ್ದಳು. ಇವಳಿಗಾಗಿಯೇ ಕಾಯುತ್ತಿದ್ದರು. ಹೊರ ಹೋಗಿರುವ ಹರೆಯದ ಮಗಳು ಮನೆಗೆ ಬರುವ ತನಕ ಆತಂಕ ತಾಯಂದಿರಿಗೆ ಸಹಜವೇ. ಹಾಗೆಯೇ ಆತಂಕದಿಂದ ಕಾಯುತ್ತಿದ್ದಳು. ಅವಳು ಬಂದಿದ್ದನ್ನು ನೋಡಿ ‘ಸಧ್ಯ ಬಂದ್ಯಲ್ಲ…’ ಅನ್ನುತ್ತ ಕಾಫಿ ಕುಡೀತೀಯಾ? ದೊಡ್ಡಮ್ಮ ಬಿಸಿ ಬಿಸಿ ಪಕೋಡ ಮಾಡಿದ್ದಾರೆ. ಊಟ ಮಾಡ್ತೀಯೋ, ಕಾಫಿ ಕುಡಿತೀಯೋ…’ ಅಂತ ನೀಲಾ ಮಗಳನ್ನು ಕೇಳಿದಳು.
‘ಊಟ ಮಧ್ಯಾಹ್ನ ಮಾಡಿದೆ ಅಮ್ಮ. ಈಗ ಕಾಫಿ ಕೊಡು. ಏನು ಅಜ್ಜಿ ದಿನಾ ಹೀಗೆ ಬೋಂಡಾ, ಪಕೋಡ ಅಂತ ಮಾಡ್ತಾ ಇದ್ರೆ ನಾನು ಚೆನ್ನಾಗಿ ಬೆಲೂನ್ ಥರ ಊದ್ತೀನಿ ಅಷ್ಟೆ; ಮಧ್ಯಾಹ್ನದ ಊಟವೇ ಜಾಸ್ತಿಯಾಗಿದ್ದು, ಅದು ಅರಗಿರಲೇ ಇಲ್ಲ. ಇನ್ನು ಈ ಪಕೋಡ ಹೇಗಪ್ಪ ತಿನ್ನುವುದು? ತಿನ್ನದೆ ಇದ್ದರೆ ಅಜ್ಜಿಗೆ ಬೇಸರ. ತಿಂದ್ರೆ ನನಗೆ ಸಂಕಟ ಅಂದುಕೊಂಡು ನೀಲಾ ತಂದಿಟ್ಟಿದ್ದ ತಟ್ಟೆಯಿಂದ ಒಂಚೂರು ಪಕೋಡ ಮುರಿದುಕೊಂಡು ‘ಅಮ್ಮ ಮಧ್ಯಾಹ್ನ ಹೋಟೆಲಿನಲ್ಲಿ ಊಟ ಮಾಡ್ದೆ. ನನ್ನ ಫ್ರೆಂಡ್ ಕರ್ಕೊಂಡು ಹೋಗಿದ್ದರು. ಈಗ ಕಾಫಿ ಸಾಕು, ರಾತ್ರಿಗೆ ತಿಂತೀನಿ. ಅಜ್ಜಿಗೆ ಹೇಳಬೇಡ ನೀನೇ ತಿಂದುಬಿಡು’ ಎಂದು ಹೇಳಿ ಕಾಫಿ ಕುಡಿಯುತ್ತ ತಾನು ತಂದಿದ್ದ ಪ್ರಾಸ್ಪಕ್ಟ್ ಅನ್ನು ನೀಲಾಳ ಕೈಗೆ ಇರಿಸಿದಳು.
‘ಇದ್ಯಾಕೆ ಎರಡು ತಂದಿದ್ದೀಯಾ, ಒಂದೇ ಸಾಕಾಗಿರಲಿಲ್ಲವೇ… ಇನ್ನೊಂದು ಯಾರಿಗೆ’ ಅರ್ಥವಾಗದೆ ನೀಲಾ ಪ್ರಶ್ನಿಸಿದಳು.
‘ಒಂದು ನನಗೆ, ಇನ್ನೊಂದು ನಿನಗೆ.’
‘ನನಗಾ?’ ಆಶ್ಚರ್ಯ’ದಿಂದ ಅವಳನ್ನು ನೋಡುತ್ತ ‘ನಿಂಗೇನು ತಲೆ ಸರಿ ಇದೆಯಾ, ನನಗೆ ತಂದಿದ್ದೀಯಾ, ಏನಾಯ್ತು ನಿಂಗೆ…’ ರೇಗಿದಳು.
‘ಅಮ್ಮ ನಂಗೆ ತಲೆ ಸರಿ ಇದೆ, ನಾನು ಹೇಳೋದನ್ನ ಸುಮ್ನೆ ಗಮನವಿಟ್ಟು ಕೇಳು. ಈಗ ನೀನು ಸ್ಕೂಲಿನ ಕೆಲ್ಸಕ್ಕೆ ಸೇರಿದ್ದೀಯಾ, ಪಾಪ ವಿಸ್ಮಯ್ ಅವರು ಜಾಗಕೊಟ್ಟರೋ ಓನರ್ ಅಂತ ನಿಂಗೆ ಎಚ್‌ಎಂ ಸ್ಥಾನ ಕೊಟ್ಟುಬಿಟ್ಟಿದ್ದಾರೆ. ಆದರೆ ಅಲ್ಲಿ ಕೂರೋಕೆ ನಿಂಗೆ ಅರ್ಹತೆ ಬೇಡ್ವಾ? ಅಲ್ಲಿರುವವರು ಯಾರೂ ಇದುವರೆಗೂ ನಿನ್ನ ವಿದ್ಯಾಭ್ಯಾಸ ಕೇಳಿಲ್ಲ. ಆದ್ರೆ ಮುಂದೆ ಸಂಸ್ಥೆ ಬೆಳೆದ ಮೇಲೆ ನಿನ್ನ ಕ್ವಾಲಿಫಿಕೇಶನ್ಸ್‌ಗೆ ನಿನ್ನ ಇಟ್ಕೊಳ್ಳೋದಿಕ್ಕೆ ಸಾಧ್ಯಾನಾ… ಈಗೇನು ಯಾರು ಸಿಕ್ಕಿಲ್ಲ ಅಂತ ನಿನ್ನ ಇಟ್ಕೊಂಡಿದ್ದಾರೆ. ಮುಂದೆ ಕೆಲ್ಸ ಬಿಡ್ತೀಯಾ? ಮನೆಯಲ್ಲಿರ್ತೀಯಾ? ನೋಡು ಅದಕ್ಕೆ ಸಿದ್ದವಾಗಿದ್ರೆ ನಾನೇನು ಮತ್ತೆ ಮಾತಾಡಲ್ಲ’ ನಿಷ್ಟೂರ ದನಿಯಲ್ಲಿ ಹೇಳಿದಳು.
ಶಾಲೆ ಬದುಕಿನ ಒಂದು ಅಂಗ ಎನಿಸಿಬಿಟ್ಟಿತ್ತು. ತಾನಿದ್ದ ಪರಿಸ್ಥಿತಿಯಲ್ಲಿ ಹುಚ್ಚಿಯಾಗಬೇಕಾಗಿತ್ತು. ಈ ಶಾಲೆಯಿಂದ ತನ್ನ ಬದುಕಿನ ಗತಿಯೇ ಬದಲಾಗಿದೆ. ಇಂತಹ ಒಂದು ಬದುಕು ಇರಬಹುದೇ ಅಂಬ ಊಹೆಯೂ ಮಾಡದಿದ್ದ ತನಗೆ ಶಾಲೆ ಸಂಜೀವಿನಿಯಾಗಿದೆ. ಎಲ್ಲವನ್ನು ಮರೆತು ತಾನೂ ಒಂದು ಜೀವಿ ಎನಿಸಲು ಕಾರಣವಾಗಿರುವುದೇ ತನ್ನ ಶಾಲೆಯ ಕೆಲಸದಿಂದ. ಅದನ್ನು ಬಿಟ್ಟು ಒಂಟಿಯಾಗಿ ಈ ಮನೆಯಲ್ಲಿ ಕೂರಲು ಸಾಧ್ಯವೇ. ಇಳಾ ಎಷ್ಟು ದಿನ ನನ್ನೊಂದಿಗಿರಬಹುದು. ದೊಡ್ಡಮ್ಮ ಎಷ್ಟು ದಿನ ಇರಬಹುದು, ಮುಂದೆ… ಭವಿಷ್ಯ ನೆನೆದು ವಿವ್ಹಲಳಾದಳು ನೀಲಾ.
ಮುಂದಿನ ದಿನಗಳು ಕತ್ತಲು ಬರೀ ಕತ್ತಲು ಎನಿಸಿ ಕುರ್ಚಿಯ ಮೇಲೆ ದಪ್ಪೆಂದು ಕುಸಿದಳು. ತಾನು ಈ ವಯಸ್ಸಿನಲ್ಲಿ ಓದಬಹುದೇ? ಅದು ತನ್ನಿಂದ ಸಾಧ್ಯವೇ… ನೋಡಿದವರು, ಕೇಳಿದವರು ಏನೆಂದುಕೊಂಡಾರು. ಭಾವ, ಓರಗಿತ್ತಿ ಊರಿನ ಜನ ನಗುವುದಿಲ್ಲವೇ? ಇಲ್ಲಾ.. ಇಲ್ಲಾ.. ನನ್ನಿಂದ ಇದು ಸಾಧ್ಯವಿಲ್ಲ. ಆದರೆ ಅವರಾರು ನನಗೆ ಬದುಕನ್ನು ಕಟ್ಟಿಕೊಡಲು ಸಾಧ್ಯವೇ? ನಾಳೆ ಶಾಲೆಯಿಂದ ಹೊರಹೋಗಿ ಅಂದುಬಿಟ್ಟರೆ ತಾನೆಲ್ಲಿ ಹೋಗಲಿ… ಮೋಹನನಿಲ್ಲದ ಈ ಮನೆಯಲ್ಲಿ ನೆಮ್ಮದಿಯಾಗಿ ಇರಲು ಸಾಧ್ಯವೇ. ಇಂತಹ ಸ್ಥಿತಿ ತನಗೆ ಬರಬೇಕಿತ್ತೇ, ಮಗಳೊಂದಿಗೆ ನಾನು ಓದುವುದೇ. ಓದಿ ಪಾಸು ಮಾಡುವುದೇ, ಸಾಧ್ಯವೇ, ಇದು ಸಾಧ್ಯವೇ? ಮನದೊಳಗೆ ದೊಡ್ಡ ಹೋರಾಟವೇ ನಡೆಯಿತು. ಮಗಳ ಕಡೆ ನೋಡಿದರೆ ಇಳಾ ಸಮಸ್ಯೆ ತನ್ನದಲ್ಲ ಎನ್ನುವ ಹಾಗೆ ಪ್ರಾಸ್ಪೆಕ್ಟ್ ಓದುತ್ತಿದ್ದಾಳೆ.
‘ಇಳಾ ಈ ವಯಸ್ಸಿನಲ್ಲಿ ನಾನು ಓದಲು ಸಾಧ್ಯವೇ… ಓದಿ ಪಾಸು ಮಾಡಲು ಸಾಧ್ಯವೇ…’ ಮೆಲ್ಲನೆ ನುಡಿದಳು.
ಸಡಗರದಿಂದ ಎದ್ದು ಬಂದ ಇಳಾ ‘ಅಮ್ಮ ಮನಸ್ಸು ಮಾಡಿದರೆ ಏನೆಲ್ಲ ಸಾಧಿಸಬಹುದು. ಇದು ಕೇವಲ ಒಂದು ಪರೀಕ್ಷೆ ಅಷ್ಟೆ. ಇಂತಹ ದಿನ ಬರಬಹುದೇ ಅನ್ನೋ ಆಲೋಚನೆಯೂ ಇರದಿದ್ದ ದಿನಗಳು ಅಂದಿದ್ದವು. ಆದರೆ ಪರಿಸ್ಥಿತಿ ಹೇಗೇಗೋ ಬದಲಾಯಿಸಿಬಿಡುತ್ತಮ್ಮ. ಅವಶ್ಯಕತೆ ಸಾಧಿಸುವಂತೆ ಮಾಡುತ್ತದೆ. ನೀನು ಓದ್ತೀಯಾ, ಪಾಸು ಆಗಿಯೇ ಆಗುತ್ತೆ, ನಿನ್ನ ಶಾಲೆಯಿಂದ ಯಾರೂ ಕಳಿಸುವ ಹಾಗಿರುವುದಿಲ್ಲ. ನಿನ್ನ ಬದುಕು ನಿನ್ನದೇ ಆಗಿರುತ್ತೆ. ಒಂದು ದಾರಿ ಮುಚ್ಚಿಕೊಂಡರೆ ಹಲವು ದಾರಿ ನಮಗೆ ಗೋಚರಿಸುತ್ತೆ. ಹೆದರಬೇಡ, ಯಾರಿಗೂ ನೀನು ಅಂಜಬೇಕಿಲ್ಲ, ನಿನ್ನ ಬದುಕು, ನಿನ್ನದೇ ನಿರ್ಧಾರ, ಗಟ್ಟಿಯಾಗಿ ನಿಲ್ಲಮ್ಮ’ ಹುರಿದುಂಬಿಸಿದಳು. ಮಗಳ ಕೈ ಹಿಡಿದು ನೀಲಾ ಬಿಕ್ಕಳಿಸಿದಳು.
‘ಇನ್ನು ಅಳೋದು ಬೇಡಮ್ಮಾ, ಅಳು, ದುಃಖ, ನೋವು, ಅಪಮಾನ, ವೇದನೆ… ಎಲ್ಲಾ ಇವತ್ತಿಗೆ ಕೊನೆ ಆಗಲಿ. ಮುಂದೆ ಗೆಲುವು ಮಾತ್ರ ನಮ್ಮ ಗುರಿಯಾಗಿರಲಿ. ಸಾಧಿಸಿ ತೋರಿಸೋಣ’ ಅಮ್ಮನ ಕಣ್ಣೀರು ಒರೆಸಿದಳು.
ಒಳಗಿನಿಂದಲೇ ಎಲ್ಲವನ್ನು ಕೇಳಿಸಿಕೊಂಡಿದ್ದ ಅಂಬುಜಮ್ಮ ‘ನೀಲಾ, ನೀನು ಎಂಥ ಪುಣ್ಯವಂತೆಯೇ, ಎಂತ ಮಗಳನ್ನು ಪಡೆದಿದ್ದೀಯಾ… ನೀನು ಅವಳ ಬದುಕನ್ನು ರೂಪಿಸಬೇಕಾಗಿತ್ತು. ಆದರೆ ಅವಳೆ ನಿನ್ನ ಬದುಕಿನ ಗುರಿ ತೋರಿಸುತ್ತಾ ಇದ್ದಾಳೆ. ಅವಳಿಗಾಗಿ ನೀನು ಓದಬೇಕು ನೀಲಾ. ಮುತ್ತಿನಂಥ ಮಗಳ ಮುತ್ತಿನಂಥ ಆಸೆ. ದೇವರು ಒಂದು ಕಿತ್ಕೊಂಡು ಮತ್ತೊಂದು ಕೊಡುತ್ತಾನಂತೆ. ರತ್ನದಂತ ಮಗಳ್ನ ದೇವರು ಕೊಟ್ಟುಬಿಟ್ಟಿದ್ದಾನೆ. ಎಂತಹ ಮುಂದಾಲೋಚನೆ ಅವಳದು. ನೀಲಾ ನಿಂಗೂ ಆ ಆಲೋಚನೆ ಬಂದಿತ್ತಾ ಹೇಳು… ಯಾರಿಗೂ ಬರದಿರೋ ಆಲೋಚನೆ ಬಂದಿದೆ. ಮುಂದಿನ ನಿನ್ನ ಒಳ್ಳೆ ಭವಿಷ್ಯಕ್ಕೆ ಮುನ್ನುಡಿ ಬರೆಯುತ್ತಿದ್ದಾಳೆ ನಿನ್ನ ಮಗಳು’ ಇಳಾಳನ್ನು ಕೊಂಡಾಡಿಬಿಟ್ಟರು.
ನೀಲಾ ಪರೀಕ್ಷೆ ತೆಗೆದುಕೊಳ್ಳಲು ಒಪ್ಪಿದರೂ ಈ ವಿಚಾರವನ್ನು ಯಾರಿಗೂ ಹೇಳಬಾರದು, ತಮ್ಮ ಮೂವರ ನಡುವೆ ಮಾತ್ರ ಇದು ಇರಬೇಕು ಎಂದು ವಾಗ್ದಾನ ತೆಗೆದುಕೊಂಡಳು. ಸಧ್ಯ ಒಪ್ಪಿದ್ದೆ ದೊಡ್ಡದಾಗಿದ್ದುದರಿಂದ ನೀಲಾಳ ಮಾತಿಗೆ ಒಪ್ಪಿಕೊಂಡುಬಿಟ್ಟಳು.
ಹಾಸನದಲ್ಲಿಯೇ ಪರೀಕ್ಷೆ ಬರೆಯಬಹುದು, ಯಾರಿಗೂ ಗೊತ್ತಾಗುವುದಿಲ್ಲ. ಪರೀಕ್ಷೆಯ ಸಮಯದಲ್ಲಿ ಶಾಲೆಗೆ ರಜೆ ಇರುತ್ತದೆ. ಹಾಗಾಗಿ ಶಾಲೆಯಲ್ಲಿಯೂ ಯಾರಿಗೂ ತಿಳಿಯುವಂತಿಲ್ಲ. ಹಿಂದೆ ಓದುವ ಮನಸ್ಸಿತ್ತು. ಆದರೆ ಓದುವ ವಯಸ್ಸಿನಲ್ಲಿ ಮದುವೆ ಆಗಿ ಸಂಸಾರ ಮಾಡಿದ್ದಾಯಿತು. ಈಗ ಸಂಸಾರ ನಡೆಸಬೇಕಾಗಿದ್ದ ಸಮಯದಲ್ಲಿ ಓದುವಂತಾಗಿದೆ. ತನ್ನ ಹಣೆಯಲ್ಲಿ ಹೀಗೆ ಅಂತ ಬರೆದಿರುವಾಗ ತಾನು ಅಂದುಕೊಂಡಂತೆ ಆಗುತ್ತಿದೆಯೇ? ಹೇಗೊ ನಡೆದು ಹೋಗಲಿ… ತನಗೊಂದು ಆಸರೆಯಾಗಿ ಶಾಲೆ ಇದೆ. ಅದು ಕೈಜಾರದಂತೆ ನೋಡಿಕೊಳ್ಳಬೇಕಷ್ಟೆ. ವೈರಾಗ್ಯಭಾವ ಮೂಡಿದರೂ, ಓದುವ ಹುಮ್ಮಸ್ಸು ಹುಟ್ಟಿಕೊಂಡಿತು.
ಅರ್ಜಿ ಭರ್ತಿ ಮಾಡಿ ಸಕಲೇಶಪುರದಿಂದಲೇ ಯುನಿವರ್ಸಿಟಿಗೆ ಕಳುಹಿಸಿಕೊಟ್ಟಳು. ಇನ್ನು ಓದುವ ಕೆಲಸವೂ ಸಾಗಬೇಕು. ಅಮ್ಮನೂ ಓದುವಂತೆ ಉತ್ತೇಜಿಸಬೇಕು. ಎಲ್ಲಾ ಕೆಲಸಗಳ ಒತ್ತಡದ ನಡುವೆಯೂ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ನೀಡಬೇಕು ಎಂದುಕೊಂಡಳು. ಊಟ ಮುಗಿಸಿ ನಿದ್ದೆ ಬರುವ ತನಕ ಏನಾದರೂ ಓದೋಣವೆಂದು ಪುಸ್ತಕಗಳನ್ನು ಜೋಡಿಸಿದ್ದ ಕೊಠಡಿಗೆ ಬಂದಳು. ಮೋಹನ್‌ಗೆ ಓದುವ ಆಸಕ್ತಿ ಜೊತೆಗೆ ಪುಸ್ತಕಗಳ ಸಂಗ್ರಹ ಕೂಡ ಮಾಡಿದ್ದ. ‘ಓದುವ ಕೊಠಡಿ’ ಎಂದೇ ಒಂದು ಕೊಠಡಿ ಮೀಸಲಿಟ್ಟುಕೊಂಡು ತಂದಿದ್ದ ಪುಸ್ತಕಗಳನ್ನೆಲ್ಲ ಜೋಡಿಸಿದ್ದ. ಯಾವ ಪುಸ್ತಕಗಳಿವೆಯೆಂದೇ ಇಳಾ ಗಮನಿಸಿರಲಿಲ್ಲ.
ಗಾಜಿನ ಬೀರು ತುಂಬ ಪುಸ್ತಕಗಳಿದ್ದವು. ಎಷ್ಟೊಂದು ಪುಸ್ತಕಗಳು… ಅಪ್ಪಾ ಅದ್ಯಾವಾಗ ಇವುಗಳನ್ನೆಲ್ಲ ಓದುತ್ತಿದ್ದರೊ, ಓದುವ ಆಸಕ್ತಿ ಅಪ್ಪನಿಂದ ಬಂದಿದ್ದರೂ, ಕಾಲೇಜಿನ ಪುಸ್ತಕ ಓದುವುದರಲ್ಲಿಯೇ ಸಮಯ ಸಾಕಾಗದ ತಾನು ಅವುಗಳನ್ನೆಲ್ಲ ಓದಲು ಸಮಯ ಎಲ್ಲಿತ್ತು. ಈಗ ಓದೋಣವೆಂದು ನೋಡಿದರೆ, ಯಾವುದು ಓದುವುದು… ಯಾವುದು ಬಿಡುವುದು… ಯಾವ ಪುಸ್ತಕಗಳಿವೆ ಎಂದು ಕಣ್ಣಾಡಿಸಿದಳು. ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’, ‘ಕಾನೂರು ಹೆಗ್ಗಡತಿ’; ಬೈರಪ್ಪನವರ ‘ದಾಟು’, ‘ವಂಶವೃಕ್ಷ’, ‘ತಬ್ಬಲಿ ನೀನಾದೆ ಮಗನೆ’; ರಾವ್ ಬಹದ್ದೂರರ ‘ಗ್ರಾಮಾಯಣ’; ಮಿರ್ಜಿ ಅಣ್ಣಾರಾಯರ ‘ನಿಸರ್ಗ’, ‘ಅಶೋಕ ಚಕ್ರ’; ದು. ನಿಂ. ಬೆಳಗಲಿಯವರ ‘ದೇವದಾಸಿ’, ‘ಹಡೆದವರು’, ‘ಮೌನಕ್ರಾಂತಿ; ಶಾಂತರಸರ ‘ನಾಯಿ ಮತ್ತು ಪಿಂಚಣಿ’: ಬಸವರಾಜ ಕಟ್ಟೀಮನಿಯವರ ‘ಮಾಡಿ ಮಡಿದವರು’; ತ್ರಿವೇಣಿ, ವೈದೇಹಿಯ ಕಥೆಗಳು, ಅನುಪಮಾರ ‘ಮಾಧವಿ’, ‘ನೆನಪು ಸಿಹಿ-ಕಹಿ’, ಜಾವೇದ್ ಅಕ್ತರ್‌ರ ‘ಬತ್ತಳಿಕೆ’, ಜಗದಾನಂದರ ‘ಬದುಕು ಕಲಿಯಿರಿ’- ಒಂದೇ ಎರಡೇ… ಸಾವಿರಾರು ಪುಸ್ತಕಗಳು. ಇಷ್ಟೆಲ್ಲ ಓದಿಯೂ ಅಪ್ಪ ಎಂತಹ ವಿಚಾರವಂತರಾಗಿದ್ದರು, ಅವರೇಕೆ ದುರ್ಬಲರಾಗಿ ಬಿಟ್ಟರು. ಬದುಕಿ ಸಾಧಿಸಿ ತೋರಿಸುವ ಛಲ ತೋರಿಸದೆ ಮಣ್ಣಲ್ಲಿ ಮಣ್ಣಾಗಿ ಹೋದರಲ್ಲ. ವಿಷಾದ ಒತ್ತಿಕೊಂಡು ಬಂತು. ಪೂರ್ಣಚಂದ್ರ ತೇಜಸ್ವಿಯಮ ‘ಕೃಷಿಋಷಿ’ ಗಮನ ಸೆಳೆಯಿತು. ಕೃಷಿ ಅಂತ ಇದೆಯಲ್ಲ ಓದೋಣವೆಂದು ತೆಗೆದುಕೊಂಡು ಕುರ್ಚಿಯ ಮೇಲೆ ಕುಳಿತು ಓದತೊಡಗಿದಳು. ಸಹಜ ಕೃಷಿ ಮತ್ತು ಪುರೋಕಾ ಬಗ್ಗೆ ಬರೆದ ಲೇಖನ ಗಮನ ಸೆಳೆಯಿತು.
ಕೃಷಿ ಸಮಸ್ಯೆ ಬಗ್ಗೆ ನಮ್ಮ ವಿಜ್ಞಾನಿಗಳು ಏನೂ ಮಾಡಲಿಲ್ಲ. ಎಲ್ಲಾ ಕೃಷಿಕರು ಒಂದಲ್ಲ ಒಂದು ಸಮಸ್ಯೆಯಲ್ಲಿದ್ದಾರೆ. ದೊರಕದ ರಸಗೊಬ್ಬರ, ಸಿಗದ ಬೆಂಬಲ ಬೆಲೆ, ಕೃಷಿ ಎಂಬುದು ಉದ್ಯಮವಾಗದ ಸ್ಥಿತಿ, ಕಾರ್ಮಿಕರಿಗೂ ಬೆಳೆಗಾರರಿಗೂ ಅಂಥ ವ್ಯತ್ಯಾಸವೇನೂ ಇಲ್ಲದಂತೆ ಸನ್ನಿವೇಶದಲ್ಲಿ ಸಹಜ ಕೃಷಿ ಪ್ರತಿಪಾದಕ ಮುಸನೊಬು, ಪುಕಾವೋಕಾ ಕಣ್ಮರೆಯಾಗಿದ್ದಾರೆ. ಅವರ ಸಂಶೋಧನೆ, ನಂಬಿಕೆ, ಛಲ ಮತ್ತು ಅಹಂಕಾರವನ್ನು ಬದಿಗಿಟ್ಟು, ಪ್ರಕೃತಿಯೊಂದಿಗೆ ಒಂದಾಗುವ ವ್ಯಕ್ತಿತ್ವದ ಕುರಿತು ಬರೆದ ಕೃತಿ ಎಂದು ಮುನ್ನುಡಿಯಲ್ಲಿತ್ತು.
ಪುಟಗಳನ್ನು ತಿರುವಿ ಹಾಕುತ್ತ ಹೋದಳು. ಕುತೂಹಲ ಕೆರಳಿತು. ಪುಕೊವೋಕಾರ ಒಂದು ಹುಲ್ಲಿನ ಕ್ರಾಂತಿ- ನಾಲ್ಕೆ ಮಾತಿನಲ್ಲಿ ಹೇಳಿ ಮುಗಿಸುವಷ್ಟು ಸರಳ. ಆದರೆ ಅದಕ್ಕೆ ಬೇಕಾದ ಮನಃಸಿದ್ದತೆ ಇಲ್ಲಿ ಅತ್ಯಂತ ಮುಖ್ಯ. ಪುಕೊವೋಕಾರು ಬೇಸಾಯ ಪದ್ಧತಿಗೆ ಬೇಕಾದ ನಾಲ್ಕು ಮೂಲ ತತ್ತ್ವವನ್ನು ಮಂಡಿಸಿದ್ದಾರೆ. ಮೊದಲನೆಯದಾಗಿ ಭೂಮಿ ತನ್ನನ್ನು ತಾನೇ ಉಳುಮೆ ಮಾಡಿಕೊಳ್ಳುತ್ತದೆ. ಗಿಡಗಳ ಕಳೆಗಳ ಲಕ್ಷಾಂತರ ಬೇರುಗಳು ಭೂಮಿಯೊಳಗೆ ನುಸುಳಿ ಭೂಮಿಯನ್ನು ಉಳುಮೆಗಿಂತ ಚೆನ್ನಾಗಿ ಮೆದು ಮಾಡುತ್ತದೆ. ಭೂಮಿಯೊಳಗೆ ಜೀವಿಸುವ ಎರೆಹುಳು, ಒಡುಹುಳು, ಗೊಬ್ಬರದ ಹುಳುಗಳು ಭೂಮಿಯೊಳಗೆಲ್ಲ ಸುರಂಗ ಕೊರೆದು ಉಳುಮೆ ಮಾಡಿ, ಸಾಯುವ ಗಿಡಗಳ ಬೇರುಗಳನ್ನು ತಿಂದು ಲಡ್ಡು ಹಿಡಿಸಿ ಕೋಟ್ಯಾಂತರ ಸೂಕ್ಷ್ಮಾಣುಗಳು ಭೂಮಿಯನ್ನು ನಿರಂತರವಾಗಿ ಫಲವತ್ತು ಮಾಡುತ್ತದೆ. ನಾವು ಉತ್ತಿ ಮೇಲ್ಮಣ್ಣನ್ನು ಬಿಸಿಲಿಗೆ ಒಡ್ಡುವುದರಿಂದ ಈ ಗೊಬ್ಬರವೆಲ್ಲ ಬಿಸಿಲಿನಲ್ಲಿ ಇಂಗಾಲವಾಗುತ್ತದೆ. ಕ್ರಮೇಣ ಭೂಮಿ ಗೊಡ್ಡು ಬೀಳುತ್ತ ಹೋಗುತ್ತದೆ.
ಎರಡನೆಯದಾಗಿ ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸದಿರುವುದು. ಈ ರಾಸಾಯನಿಕ ಗೊಬ್ಬರ ಭೂಮಿಗೆ ಹಾನಿಕರ. ಈ ಗೊಬ್ಬರ ಪೊಷಕಾಂಶಗಳನ್ನು ನಿರಂತರವಾಗಿ ಸರಬರಾಜು ಮಾಡುತ್ತಿರುವ ಸೂಕ್ಷ್ಮಾಣುಗಳನ್ನು ನಾಶ ಮಾಡುತ್ತದೆ. ಗಿಡಗಳಿಗೆ ಬೇಕಾದ ರಾಸಾಯನಿಕಗಳನ್ನು ಇವೇ ಉತ್ಪತ್ತಿ ಮಾಡುವುದರಿಂದ ರಾಸಾಯನಿಕ ಗಿಡಗಳ ಬೀರುಗಳೆಡೆಯಲ್ಲಿ ಇರುವ ಮಣ್ಣಿನ ಫಲವತ್ತತೆಗೆ ಮೂಲ ಅಗತ್ಯವಾದ ಸೂಕ್ಷ್ಮಾಣು ಜೀವಿಗಳು ಈ ರಾಸಾಯನಿಕದಿಂದ ಸಾಯುತ್ತವೆ. ಹಾಗಾಗಿ ತನ್ನಿಂದ ತಾನೇ ರಾಸಾಯನಿಕ ಕ್ರಿಯೆ ನಿಂತುಹೋಗಿ ಭೂಮಿ ನಿರಂತರವಾಗಿ ಮಾನವ ನೀಡುವ ಕೃತಕ ಗೊಬ್ಬರವನ್ನು ಅವಲಂಬಿಸಬೇಕಾಗುತ್ತದೆ.
ಮೂರನೆಯದಾಗಿ ಉಳುಮೆಯಿಂದಾಗಲಿ, ರಾಸಾಯನಿಕಗಳಿಂದಾಗಲಿ ಕಳೆಗಳನ್ನು ನಿರ್ಮೂಲ ಮಾಡುವುದನ್ನು ನಿಲ್ಲಿಸಬೇಕು. ಭೂಮಿಗೂ ಈ ಕಳೆಗಳು ಅತ್ಯಗತ್ಯ. ಆದರೆ ನಮ್ಮ ಬೆಳೆಗಳಿಗೆ ತೊಂದರೆ ಕೊಡದಂತೆ ಕಳೆಗಳನ್ನು ನಾವೇ ಜಮೀನಿನಲ್ಲಿ ಹಚ್ಚಿಸಬೇಕು. ಈ ಕಳೆಗಳನ್ನು ಬೆಳೆಗಳಿಗಿಂತ ಮಿಗಿಲಾಗಿ ತಲೆ ಎತ್ತದಂತೆ ಕೊಚ್ಚಿ ಕೊಚ್ಚಿ ಹಾಕುತ್ತ ಬಂದರೆ ಸಾಕು, ಭೂಮಿಯ ಫಲವತ್ತು ಹೆಚ್ಚುತ್ತ ಹೋಗುತ್ತದೆ.
ನಾಲ್ಕನೆಯದಾಗಿ ಕ್ರಿಮಿನಾಶಕ ಸಿಂಪರಣೆ ಇತ್ಯಾದಿ ಔಷಧಿಯ ಅವಲಂಬನೆ ಪೂರ್ಣವಾಗಿ ನಿಲ್ಲಬೇಕು. ಉಳುವ, ರಸಗೊಬ್ಬರಗಳನ್ನು ಉಪಯೋಗಿಸುವ ಕಳೆಗಳನ್ನು ನಾಮಾವಶೇಷ ಮಾಡಿ ಬೆಳೆ ಬೆಳೆಯುವ ವಿಧಾನದಿಂದಲೇ ರೋಗ ರುಜಿನಗಳಿಗೆ ತುತ್ತಾಗುವ ದುರ್ಬಲ ಗಿಡಗಳು ರೂಪುಗೊಳ್ಳುತ್ತವೆ. ಭೂಮಿಯ ಮೇಲೆ ನಾವು ಉಂಟು ಮಾಡುವ ಈ ಏರುಪೇರುಗಳ ದೆಸೆಯಿಂದಲೇ ಇದ್ದಕ್ಕಿದ್ದಂತೆ ಕ್ರಿಮಿಗಳು ಅಗಣಿತವಾಗಿ ಉದ್ಭವಿಸಿ ತೊಂದರೆ ಕೊಡಲಾರಂಭಿಸುತ್ತವೆ. ಆರೋಗ್ಯಕರ ವಾತಾವರಣದಲ್ಲಿ ಆರೋಗ್ಯಕರ ಗಿಡಗಳನ್ನು ಬೆಳೆದು ಕೃಷಿ ಮಾಡುವುದೇ ವಿವೇಕಯುಕ್ತವಾದುದು. ಇದಿಷ್ಟು, ಕೃಷಿಕ ಪುಕೊಕಾಕನ ಅನುಭವ ಜನ್ಮ ವಿಚಾರಗಳು. ಎಷ್ಟೊಂದು ಸೊಗಸಾಗಿ ಹೇಳಿದ್ದಾನೆ. ಯಾರೀತ ಎಂಬ ಕುತೂಹಲದಿಂದ ಆತನ ಬಗ್ಗೆ ಮಾಹಿತಿ ಪಡೆಯಲು ಪುಸ್ತಕಗಳನ್ನು ಇಳಾ ಹುಡುಕಿದಳು. ಯಾವುದೋ ಪತ್ರಿಕೆಯಲ್ಲಿ ಬಂದಿದ್ದ ಆತನ ಬಗ್ಗೆ ಮಾಹಿತಿ ಇರುವ ಕಟಿಂಗ್ ಕಣ್ಣಿಗೆ ಬಿತ್ತು. ಅಪ್ಪನಿಗೆ ಎಷ್ಟೊಂದು ಆಸಕ್ತಿ, ಹೇಗೆ ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ ಎಂದು ಮೆಚ್ಚುಗೆ ಮೂಡಿತು. ಆತನ ಭಾವಚಿತ್ರದ ಸಮೇತ ಆತನ ಪರಿಚಯ ಕೊಟ್ಟಿದ್ದರು. ಕೋಲುಮುಖದ ಬಿಳಿಗಡ್ಡದ, ದಪ್ಪ ಮೂಗಿನ, ದೊಡ್ಡ ಕನ್ನಡಕ ಧಾರಿ- ಈತ ಹುಟ್ಟಿದ್ದು ಜಪಾನಿನ ದಕ್ಷಿಣದ ಮೂಲೆಯಲ್ಲಿರುವ ಶಿಕೋಕ ದ್ವೀಪದ ಪುಟ್ಟ ಹಳ್ಳಿಯಲ್ಲಿ. ಅತ್ಯುತ್ತಮ ಕಾಲೇಜಿನಲ್ಲಿ ವಿದ್ಯಾಭ್ಯಾಸ, ವಿಜ್ಞಾನ ಕ್ಷೇತ್ರದಲ್ಲಿ ಭವಿಷ್ಯ, ಅಚ್ಚುಮೆಚ್ಚಿನ ಗೆಳೆಯರು, ಒಳ್ಳೆಯ ಉದ್ಯೋಗ ಎಲ್ಲವೂ ಇತ್ತು. ಆದರೂ ಅದೇನೋ ಅತೃಪ್ತಿ ಕಾಡುತ್ತಿತ್ತು. ಒಂದು ದಿನ ಎಲ್ಲರಿಗೂ ಅಚ್ಚರಿ ಹುಟ್ಟಿಸಿ ಕೆಲಸ ತೊರೆದು ಬಂದ. ರಾಜೀನಾಮೆಗೆ ಕಾರಣವೇ ಅವನಲ್ಲಿ ಇರಲಿಲ್ಲ. ತೋಟ ನೋಡಿಕೊಳ್ಳಲು ಹೋಗಿ ತೋಟ ಹಾಳುಮಾಡಿ ತಂದೆಯಿಂದ ಬೈಸಿಕೊಂಡ. ಒಂದು ದಿನ ಬೀಳುಬಿದ್ದಿದ್ದ ಗದ್ದೆಯಲಿ ಕಳೆಯ ನಡುವೆ ಭತ್ತದ ಗಿಡಗಳು ಹುಲುಸಾಗಿ ಬೆಳೆದು ತೆನೆ ಬಿಟ್ಟಿದ್ದು ಸೋಡಿ ಆಶ್ಚರ್ಯಪಟ್ಟ. ಇದು ಅವನ ಜೀವನದ ಗತಿಯನ್ನು ಬದಲಿಸಿತು.
ಹಳ್ಳಿಗೆ ಹಿಂತಿರುಗಿ ಕ್ರಾಂತಿಕಾರಕ ಚಟುವಟಿಕೆಗಳನ್ನು ಆರಂಭಿಸಿದ. ತನ್ನ ಪ್ರಯೋಗ ಪ್ರಾರಂಭಿಸಿದ ಪುಕೋಕಾ ಮೂವತ್ತೂ ವರ್ಷ ಕಾಲ ಹೊರ ಜಗತ್ತಿನ ಸಂಬಂಧವನ್ನೂ ಪೂರ್ತಿ ಕಡಿದುಕೊಂಡು ತನ್ನ ಬದುಕನ್ನು ಕೃಷಿಗಾಗಿ ಮೀಸಲಿಟ್ಟ. ಯಾರ ಹಂಗೂ ಇಲ್ಲದೆ, ನೆರವು ಇಲ್ಲದೆ, ಗೊಬ್ಬರ ಹಾಕುವವರಿಲ್ಲದೆ ಎತ್ತರವಾಗಿ ಬೆಳೆದ ಅರಣ್ಯದ ಮರಗಳು ಅವನಿಗೆ ಶಿಕ್ಷಣ ನೀಡಿದವು. ತಾವೇ ವರ್ಷ ವರ್ಷಕ್ಕೆ ಉತ್ತಮವಾದ ಗಟ್ಟಿಯಾದ ಬೀಜ ರೂಪಿಸಿ, ನೆಲಕ್ಕೆ ಬೀಳಿಸಿ, ಎಲೆ ಹೂವು ಕಾಯಿ ಹಕ್ಕಿಗಳ ಹಿಕ್ಕೆ ಇತ್ಯಾದಿಗಳನ್ನು ಬೀಳಿಸಿದರೆ, ಭೂಮಿ ಅವನ್ನು ಗೊಬ್ಬರವಾಗಿರಿಸಿ ಬೀಜ ಮೊಳೆತು ಮರವಾಗುತ್ತದೆ. ಅರಣ್ಯದ ನೆಲ ಸಾರವಾಗುತ್ತ ಹೋಗುತ್ತದೆ. ಇದರಿಂದ ರೈತ ಕಲಿತದ್ದು ತೀರ ಕಮ್ಮಿ ಎನ್ನುವುದು ಅವನಿಗೆ ಅರ್ಥವಾಗಿತ್ತು.
ಪುಕೋಕಾನ ಬಗ್ಗೆ ಓದಿದ್ದು ಖುಷಿಯಾಯ್ತು ಇಳಾಗೆ, ಒಬ್ಬ ಕೃಷಿ ಋಷಿಯ ಬಗ್ಗೆ ತಿಳಿದುಕೊಂಡಿದ್ದು, ಆತ ಪ್ರತಿಪಾದಿಸಿದ ತತ್ವಗಳು ನಿಜಕ್ಕೂ ನೈಜತೆಯಿಂದ ಕೂಡಿದೆ. ಪರಿಸರಕ್ಕಿಂತ ದೊಡ್ಡ ವಿಜ್ಞಾನಿ ಇಲ್ಲ ಎಂದು ಸ್ವತಃ ತೋರಿಸಿಕೊಟ್ಟ ಪುಕೋಕಾ. ಕೃಷಿ ವಿಜ್ಞಾನದ ಆಧುನಿಕ ಸೂತ್ರಗಳನ್ನೆಲ್ಲ ಗಾಳಿಗೆ ತೂರಿದವನು, ಬೆಟ್ಟದ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆ ಕಟ್ಟೆಯನ್ನು ಕಟ್ಟಿ ನೀರೆರೆದವರು ಯಾರು ಎಂಬ ಸಿದ್ದಾಂತವೇ ಅವನ ಕೃಷಿ ತಂತ್ರವಾಗಿತ್ತು. ಈ ವಿಚಾರವನ್ನ ಹಳ್ಳಗಳಲ್ಲಿ ನಡೆಯುವ ಸಭೆಯಲ್ಲಿ ತಿಳಿಸಬೇಕು- ಈ ಬಗ್ಗೆ ಒಂದಿಷ್ಟು ಟಿಪ್ಪಣಿ ಮಾಡಿಕೊಂಡರೆ ಅನುಕೂಲವೆಂದು ಮುಖ್ಯ ಅಂಶಗಳನ್ನು ಒಂದು ಹಾಳೆಯಲ್ಲಿ ಬರೆದು ಇರಿಸಿಕೊಂಡಳು. ಸಮಯ ನೋಡಿದರೆ ರಾತ್ರಿ ೧೨ ಗಂಟೆಯಾಗಿದೆ. ಎಷ್ಟು ಹೊತ್ತು ಓದುತ್ತ ಕುಳಿತುಬಿಟ್ಟೆ ಎಂದುಕೊಂಡು ನಿದ್ರೆ ಎಳೆಯಲು ಪ್ರಾರಂಭಿಸಿದಾಗ ತನ್ನ ರೂಮಿಗೆ ಹೋಗಿ ಮಲಗಿದಳು. ರಾತ್ರಿ ಕನಸಿನಲ್ಲೂ ಅದೇ ಯೋಚನೆ ಪುಕೋಕಾರನನ್ನು ನೋಡಿದಂತೆ ಅವನ ಭೇಟಿ ಮಾಡಿದಂತೆ, ಅವನ ಜೊತೆ ಮಾತನಾಡಿದಂತೆ, ಅವನು ಬೆಳೆದ ಬೆಳೆ, ಅವನು ನಂಬಿದ್ದ ಕೃಷಿ ಧರ್ಮ ಎಲ್ಲವನ್ನು ಕಣ್ಣಾರೆ ಕಂಡಿದ್ದಳು. ನಿದ್ರೆಯಿಂದ ಎದ್ದ ಮೇಲೂ ಅದೇ ಗುಂಗಿನಲ್ಲಿದ್ದಳು.
ಬೆಳಗ್ಗೆ ತಿಂಡಿ ತಿನ್ನುವಾಗ ನೀಲಾ ಬಳಿ ರಾತ್ರಿ ತಾನು ಓದಿದ್ದ ಮಾಹಿತಿ ಬಗ್ಗೆ ಹೇಳಿದಳು. ನೀಲಾಳಿಗೇನು ಆ ಬಗ್ಗೆ ಆಸಕ್ತಿ ಮೂಡಲಿಲ್ಲ.
‘ಭೂಮಿ ಉಳದೆ, ಕಳೆ ಕೀಳದೆ ಅದು ಹೇಗೆ ವ್ಯವಸಾಯ ಮಾಡೋಕೆ ಸಾಧ್ಯಹೇಳು? ಬೀಜಗಳನ್ನು ಬಿತ್ತದೆ, ಉಳುಮೆ ಮಾಡದೇ ಕಳೆ ಕೀಳದೆ ಬೇಸಾಯ ಮಾಡೋದು ನಿಜನಾ. ಏನೊ ಬರ್ಕೊಂಡಿದ್ದಾರೆ. ಹಾಗೆಲ್ಲ ನೀನು ಮಾಡೋಕೆ ಹೋಗಿ ಇರೋ ಭೂಮಿನಾ ಹಾಳು ಮಾಡಬೇಡ. ಈಗಾಗಲೇ ತೋಟಕ್ಕೆ, ಗದ್ದಗೆ ರಸಗೊಬ್ಬರ ಬೇಡ ಅಂತ ಹೇಳಿಬಿಟ್ಟದ್ದೀಯಾ, ಸಗಣಿಗೊಬ್ಬರ ತೋಟಕ್ಕಾಗುವಷ್ಟು ಎಲ್ಲಿ ಸಿಗುತ್ತೆ. ಕಾಫಿ ಪಸಲು ಕಡಿಮೆ ಬಂದರೆ ಉಳಿದಿರೊ ಸಾಲ ತೀರಿಸೋದು ಹೇಗೆ ಇಳಾ.’ ಇಳಾಳ ಪ್ರಯೋಗದ ಬಗ್ಗೆ ಅಷ್ಟೇನು ಒಲವು ತೋರದ ನೀಲಾ ಹೇಳಿದಳು.
‘ಗೊಬ್ಬರ ಸಾಕಾಗದೆ ಇದ್ರೆ ಬೇರೆ ಕಡೆ ತರಿಸೋಣ ಅಮ್ಮ. ಒಂದು ವರ್ಷ ಇಳುವರಿ ಕಡಿಮೆ ಆಗಬಹುದು. ಆದ್ರೆ ಮುಂದೆ ನೋಡ್ತ ಇರು, ಹೇಗೆ ಇಳುವರಿ ಬರುತ್ತೆ ಅಂತ- ಕಿತ್ತಲೆ ಗಿಡದ ಬಗ್ಗೆ ಹೆಚ್ಚು ಗಮನವೇ ಕೊಟ್ಟಿಲ್ಲ ಇದುವರೆಗೂ. ಆ ಗಿಡಗಳಿಗೆ ವಿಶೇಷ ಆರೈಕೆ ಮಾಡಿಸ್ತಿದಿನಿ. ಯಾವ ಕಾಲದಲ್ಲಿಯಾದರೂ ನಾವು ಕಿತ್ತಲೆ ಹಣ್ಣು ಮಾರೇ ಇಲ್ಲ ಆಲ್ವಾ. ಈ ಸಲ ನೋಡು, ಅದನ್ನು ಮಾರಾಟ ಮಾಡಿಸ್ತಿನಿ. ಹಲಸಿನಹಣ್ಣು, ಕಿತ್ತಲೆ, ಚಕ್ಕೊತ, ಮಾವಿನ ಹಣ್ಣು ಗೋಡಂಬೆ ಇವುಗಳನ್ನು ಕೂಡ ಮಾರಾಟ ಮಾಡಿದ್ರೆ ಒಳ್ಳೆ ಆದಾಯ ಇದೆ ಅಮ್ಮ, ಹಾಗೆ ಸೀಗೆನೂ ಮಾರೋಣ, ಚಿಲ್ಲರೆ ಹಣ ಅನ್ನಿಸಿದರೂ ಒಟ್ಟು ಸೇರಿಸಿದರೆ ತೋಟದ ಖರ್ಚಿಗೆ ಆಗುತ್ತೆ, ಇನ್ನು ಹಾಲಲ್ಲಿ ಬೇರೆ ಆದಾಯ ಇದೆಯಲ್ಲ- ಅದು ಮನೆ ಖರ್ಚಿಗೆ ಆಗಿ ಮಿಗುತ್ತೆ. ಅದನ್ನು ಸಾಲಕ್ಕೆ ತಿಂಗಳು ತಿಂಗಳು ಕಟ್ಟೋಣ, ತೋಟದಲ್ಲಿ ಹಳ್ಳ ಇದೆಯಲ್ಲ ಅದಕ್ಕೆ ಮೀನಿನ ಮರಿ ಬಿಡೋಣ ಅಂತ ಅಂದ್ಕೊಂಡಿದ್ದೇನೆ. ಮರಿ ಬೆಳೆದು ದೊಡ್ಡದಾದರೆ ಒಳ್ಳೆ ರೇಟು ಸಿಗುತ್ತಂತೆ, ಹಳ್ಳನ ಸ್ವಲ್ಪ ಆಳ ಅಗಲ ಜಾಸ್ತಿ ಮಾಡಿಸ್ತಿನಿ, ಹೆಚ್ಚು ಮೀನು ಮಾಡಬಹುದು. ಅಲ್ಲೊಂದು ಇಲ್ಲೊಂದು ಬಾಳೆಗಿಡ ಇದೆ. ಇಡೀ ತೋಟದ ಭರ್ತಿ ಬಾಳೆಗಿಡ ಹಾಕಿಸ್ತಿನಿ, ಬಾಳೆಗೊನೆಗೂ ರೇಟಿದೆ. ನೋಡ್ತ ಇರು, ಇನ್ನೆರಡು ವರ್ಷದಲ್ಲಿ ಎಲ್ಲಾ ಸಾಲ ತೀರಿಸಿ ಹಾಯಾಗಿರಬಹುದು’ ತನ್ನ ಯೋಜನೆಗಳನ್ನೆಲ್ಲ ಇಳಾ ನೀಲಾಳಿಗೆ ಹೇಳಿದಳು.
ಮೋಹನ್ ಅಷ್ಟು ವರ್ಷ ದುಡಿದೇ ಸಾಲ ಮಾಡಿದ್ರು! ಇನ್ನು ಇವಳು ನೆನ್ನೆ ಮೊನ್ನೆ ಕಣ್ಣುಬಿಟ್ಟವಳು, ತೋಟ ಅಂದ್ರೆ ಏನು ಅಂತ ಗೊತ್ತು ಮಾಡಿಕೊಳ್ಳುತ್ತ ಇದ್ದಾಳೆ. ಇಲ್ಲಿ ಲಾಭಗಳಿಸಲು ಸಾಧ್ಯವೇ…? ಅನುಮಾನ ಕಾಡಿದರೂ, ಮಗಳ ಉತ್ಸಾಹ ಕುಂದಿಸಬಾರದೆಂದು ಸುಮ್ಮನಾಗಿ ಬಿಟ್ಟಳು. ನೀಲಾಳ ನಿರುತ್ಸಾಹ ಇಳಾಳನ್ನು ಕೊಂಚ ಧೃತಿಗೆಡಿಸಿತು. ಆದರೂ ಇಟ್ಟ ಹೆಜ್ಜೆ ಹಿಂದಕ್ಕೆ ತೆಗೆಯಬಾರದೆಂಬ ಹಟವೂ ಅವಳಲ್ಲಿತ್ತು. ಸಾವಯವ ಕೃಷಿ ಮಾಡಿ ಉತ್ತಮ ಆದಾಯ ಪಡೆಯುತ್ತಿರುವವರ ಬಗ್ಗೆ ಇದ್ದ ಲೇಖನಗಳನ್ನು ಓದುವಾಗ ರಾಜಾರಾಮ್ ಎಂಬುವವರ ಸಾಧನೆ ಓದಿ ಖುದ್ದಾಗಿ ಅವರ ತೋಟ ನೋಡಿ ಬರಲೆಂದು ಅವರಿಗೆ ಫೋನ್ ಮಾಡಿದರೆ ತಾವು ತೋಟದಲ್ಲಿ ಇರುವುದಾಗಿ ನಾಳೆನೇ ಬನ್ನಿ ಎಂದು ಆಹ್ವಾನ ನೀಡಿದರು.
‘ಅಜ್ಜಿ, ನಾಳೆ ಒಂದು ಕಡೆ ಹೋಗಿ ಬರೋಣ ಬರ್ತೀಯಾ?’ ಎಂದು ಅಂಬುಜಮ್ಮನನ್ನು ಕೇಳಿದಳು.
‘ಎಲ್ಲಿಗೆ ಪುಟ್ಟ, ನಾನೂ ಬರಬೇಕಾ, ಬರ್ತೀನಿ ಬಿಡು. ನಾನು ಮನೆ, ಅಡುಗೆ ಅಂತ ಎಲ್ಲೂ ಹೊರಗೆ ಹೋಗಿಯೇ ಇಲ್ಲ. ಹೋಗೋಣ ಬಿಡು’ ಎಂದು ಸಮಸ್ಯೆಯನ್ನು ಬಗೆಹರಿಸಿದ್ದರು ಒಂದೇ ಸಲಕ್ಕೆ.
ಒಬ್ಬಳೆ ಹೋಗುವುದಕ್ಕಿಂತ ಅಜ್ಜಿನೂ ಕರ್ಕೊಂಡು ಹೋದ್ರೆ ಒಳ್ಳೆಯದು. ಅಲ್ಲಿ ಪ್ರತ್ಯಕ್ಷವಾಗಿ ಕಂಡಿದ್ದನ್ನು ಅಮ್ಮನ ಬಳಿ ಹೇಳಲಿ ಎಂದು ಇಳಾ ಈ ಪ್ಲಾನ್ ಮಾಡಿದ್ದಳು. ನೀಲಾ ಅಂತೂ ಎಲ್ಲಿಗೂ ಬರೊಲ್ಲ. ಹೇಳಿದ್ದನ್ನು ನಂಬುವುದಿಲ್ಲ. ಅಜ್ಜಿಯಿಂದಲಾದರೂ ವಿಚಾರ ತಿಳಿಯಲಿ ಎಂದುಕೊಂಡು ತನ್ನ ಜೊತೆ ಅಜ್ಜಿಯನ್ನು ಹೊರಡಿಸಿದ್ದಳು. ಆಲೂರಿನ ಸಮೀಪದ ತೋಟ ಅದು. ದೂರದಿಂದಲೇ ಹಸುರಿನಿಂದ ಕಂಗೊಳಿಸುತ್ತಿತ್ತು. ಬೇರೆ ತೋಟಗಳಿಗಿಂತ ಭಿನ್ನವಾಗಿತ್ತು. ಸಾವಯವ ಅಳವಡಿಸಿಕೊಂಡ ತೋಟ ಇತರೆ ತೋಟಗಳಿಗಿಂತ ಭಿನ್ನವಾಗಿರುತ್ತದೆ ಅಂತ ಕೇಳಿದ್ದಳು. ಈಗ ಪ್ರತ್ಯಕ್ಷವಾಗಿ ನೋಡುವಂತಾಯಿತು. ಸುತ್ತ ಹಸಿರಿನ ಜೀವಂತ ಬೇಲಿ, ಹತ್ತಾರು ರೀತಿಯ ಬಹು ಉಪಯೋಗಿ ಗಿಡ ಮರಗಳು. ಉಳುಮೆ ಇಲ್ಲದೆ ಪಾಳು ಬಿಟ್ಟಂತೆ ಕಾಣಿಸಿದ್ದರಿಂದ ಈ ತೋಟದ ಯಜಮಾನ ಸೋಮಾರಿ ಎನಿಸುವಂತಿತ್ತು.
ಅಂಬುಜಮ್ಮ ಅದನ್ನು ಆಡಿಯೇ ತೋರಿಸಿಬಿಟ್ಟರು. ‘ಇದೇನೇ ಪುಟ್ಟಿ ತೋಟ ಹೀಗಿದೆ. ತೋಟದ ಯಜಮಾನ ಭೂಮಿ ಮುಟ್ಟಿ ಕೆಲ್ಸ ಮಾಡ್ತನೋ ಇಲ್ಲವೋ ಹೀಗೆ ಹಾಳುಬಿದ್ದಿದೆ.’
‘ಅಜ್ಜಿ ನಿಂಗೆ ಗೊತ್ತಾಗಲ್ಲ ಬಾ, ಅವರತ್ರನೇ ಎಲ್ಲಾ ಕೇಳಿ ತಿಳಿದುಕೊಳ್ಳೋಣ. ಅವರು ಮುಂದೆ ಹೀಗೆಲ್ಲ ಮಾತಾಡಿಬಿಟ್ಟಿಯಾ ಮತ್ತೆ… ಎಚ್ಚರಿಸಿಯೇ ಅವರ ಮನೆಗೆ ಕರೆದೊಯ್ದಳು.
ಇವರನ್ನು ಬಹು ಆತ್ಮೀಯವಾಗಿ ಸ್ವಾಗತಿಸಿದರು. ‘ಬನ್ನಿ ತಾಯಿ ಬನ್ನಿ, ನೀವು ಬಂದದ್ದು ತುಂಬಾ ಸಂತೋಷವಾಯ್ತು. ಆಯಾಸ ಆಗಿರಬೇಕು. ಮೊದ್ಲು ಎಳೆನೀರು ಕುಡಿಯಿರಿ’ ಆಗಲೇ ಕೊಚ್ಚಿ ಸಿದ್ದಮಾಡಿದ್ದ ಎಳೆನೀರನ್ನು ಕೆತ್ತಿಕೊಟ್ಟರು. ಎಳೆನೀರು ಒಳ್ಳೆ ರುಚಿಯಾಗಿತ್ತು. ನಡೆದು ಬಂದ ಆಯಾಸವೆಲ್ಲ ಒಂದೇ ಗಳಿಗೆಯಲ್ಲಿ ಮರೆಯಾಗಿಬಿಟ್ಟಿತು.
‘ಇನ್ನೊಂದು ಕುಡಿಯಿರಿ, ರುಚಿಯಾಗಿದೆ’ ಅಂತ ಬಲವಂತ ಮಾಡಿ ರಾಜಾರಾಮ್ ಮತ್ತೊಂದು ಎಳನೀರು ಕುಡಿಸಿಯೇ ಬಿಟ್ಟರು. ಹೊಟ್ಟೆ ತುಂಬಿದಂತಾಗಿ ಹುಸ್ಸೆಂದು ಹುಲ್ಲು ಹಾಸಿನ ಮೇಲೆ ಕುಳಿತೇಬಿಟ್ಟರು ಅಜ್ಜಿ, ಮೊಮ್ಮಗಳು.
‘ಕುತ್ಕೊಳ್ಳಿ ಸ್ವಲ್ಪ ರೆಸ್ಟ್ ತಗೊಳ್ಳಿ, ಕುತ್ಕೊಂಡೇ ಸುತ್ತ ನೋಡಿ… ಅಲ್ಲಿ ಕಾಣಿಸ್ತಿದೆಯಲ್ಲ ತೆಂಗಿನಮರಗಳು ಅವೆಲ್ಲ ನಮ್ದೆ. ಬೇರೆಯವರ ತೋಟದ ಗಿಡದಲ್ಲಿ, ಅಕ್ಕಪಕ್ಕದ ತೋಟದ ತೆಂಗಿನ ಗಿಡದಲ್ಲಿ ಸರಾಸರಿ ೨೫-೩೦ ಕಾಯಿ ಒಂದು ಗಿಡಕ್ಕೆ ಸಿಗುತ್ತೆ. ನನ್ನ ತೋಟದಲ್ಲಿ ಒಂದು ಗಿಡಕ್ಕೆ ೫೦-೬೦ ಕಾಯಿ ಸಿಗುತ್ತೆ. ಬೇರೆ ಬೆಳೆಗಳ ಇಳುವರಿನೂ ಹೆಚ್ಚಾಗಿದೆ’ ಅಂತ ತೋಟ ತೋರಿಸುತ್ತ ಹೇಳಿದರು.
‘ಹಾಗಾದ್ರೆ ಗಿಡಗಳಿಗೆ ಅದೇನು ಗೊಬ್ಬರ ಹಾಕ್ತಿರಪ್ಪ, ಒಳ್ಳೆ ಸಕ್ಕರೆಯಷ್ಟು ಎಳನೀರು ರುಚಿಯಾಗಿದೆ’ ಅಂಬುಜಮ್ಮ ಕೇಳಿದರು.
‘ಅಜ್ಜಿ, ನಾನು ಹಾಕೋ ಗೊಬ್ಬರ ಯಾವುದು ಗೊತ್ತಾ? ಸಗಣಿ ಗಂಜಲ, ಗ್ಲಿರಿಸಿಡಿಯಾ, ಲಂಟಾನಾ, ವಿಷಮಧಾರಿ – ಹೀಗೆ ೫ ಜಾತಿ ಸೊಪ್ಪುಗಳನ್ನು ನೀರಿನಲ್ಲಿ ತೊಳೆಸಿ ಅದರ ದ್ರಾವಣವನ್ನು ಬೆಳೆಗೆ ಬಳಸುತ್ತೇವೆ. ಈ ದ್ರವವನ್ನು ಹೆಚ್ಚಾಗಿ ಅಲಂಕಾರಿಕ ಹಾಗು ಇತರೆ ಸಸ್ಯಗಳಿಗೆ, ನರ್ಸರಿ ಸಸ್ಯಗಳಿಗೆ ದ್ರವ ಗೊಬ್ಬರವಾಗಿ ಬಳಸುತ್ತೇನೆ. ಇದು ಬೆಳವಣಿಗೆಗೆ ಪ್ರಚೋದಕ. ಹಾಗೆ ತೋಟದಲ್ಲಿ ಇರುವ ಕಳೆ, ಕೃಷಿತ್ಯಾಜ್ಯ, ಕಾಂಪೊಸ್ಟ್, ಜೀವತಾರ, ಕೊಟ್ಟಿಗೆ ಗೊಬ್ಬರ ಹೊರತಾಗಿ ಬೇರೇನೂ ಬಳಸದೆ ತೋಟ ನಿರ್ವಹಿಸುತ್ತಿದ್ದೇನೆ. ಭೂಮಿನಾ ಉಳುಮೆ ಮಾಡಲ್ಲ, ಹೊರಗಿನ ಗೊಬ್ಬರ ಹಾಕಲ್ಲ’ ಎಂದರು.
‘ಹೌದಾ, ಭೂಮಿ ಉಳುಮೆನಾ ಮಾಡಲ್ವಾ, ಸೀಮೆಗೊಬ್ಬರನೂ ಹಾಕಲ್ವ’ ಆಶ್ಚರ್ಯ ವ್ಯಕ್ತಪಡಿಸಿದರು.
‘ಹೌದು, ಅಜ್ಜಿ ಈಗ ಎಲ್ಲರೂ ಹೀಗೆ ಮಾಡೋಕೆ ಹೊರಟಿದಾರೆ. ಅದಕ್ಕೆ ನಮ್ಮ ತೋಟಾನೂ ಹೀಗೆ ಸಾವಯವ ಕೃಷಿಗೆ ಪರಿವರ್ತಿಸೋಣ ಅಂತ, ಅದರೆ ಅಮ್ಮ, ದೊಡ್ಡಪ್ಪ ಎಲ್ಲಾ ನಂಗೆ ಉತ್ತೇಜನ ಕೊಡೋದೇ ಇಲ್ಲ. ನಾನೇನೋ ತಪ್ಪು ಮಾಡ್ತೀನಿ ಅಂತ ಸದಾ ಸಂಶಯವಾಗಿಯೇ ನೋಡ್ತಾ ಇರ್ತಾರೆ’ ಇಳಾ ಅಜ್ಜಿಗೆ ಹೇಳಿದರೆ.
ರಾಜಾರಾಮ್ ‘ಹೌದಮ್ಮ ಮೊದ ಮೊದಲು ಎಲ್ಲರೂ ಸಂಶಯವಾಗಿಯೇ ನೋಡೋದು. ಎಲ್ಲರೂ ಮಾಡೋ ಹಾಗೆ ಮಾಡದೆ ಬೇರೆ ಏನೋ ಮಾಡಿದ್ರೆ ಜನ ಸುಮ್ನೆ ಇರ್ತಾರಾ, ಕುಟುಕುತ್ತಾರೆ. ನಂಗೂ ಮೊದ್ಲು ಮೊದ್ಲು ಹೀಗೆ ಅನುಭವವಾಯಿತು. ಸಹಜ ಕೃಷಿ ನಾವು ಅಂದುಕೊಂಡಷ್ಟು ಸುಲಭ ಅಲ್ಲ. ಈ ಭೂಮಿ ಅಷ್ಟೇನು ಫಲವತ್ತಾಗಿರಲಿಲ್ಲ. ಉಳುಮೆ ಮಾಡದೆ, ಹೊರಗಿನಿಂದ ತಂದ ಗೊಬ್ಬರ ಹಾಕದೆ, ಕಾಂಪೋಸ್ಟ್ ಗೊಬ್ಬರ ತಯಾರಿಸಿ ಬಳಸಿದರೂ ಪ್ರಯೋಜನ ಕಾಣಲಿಲ್ಲ. ಕಳೆ ಚೆನ್ನಾಗಿ ಬೆಳೆದು ಹಾಳುಬಿದ್ದ ತೋಟವಾಯ್ತು. ಬೆಳಯ ಇಳುವರಿ ಕುಸಿದು ೨-೩ ವರ್ಷವಾದರೂ ಕಳೆ ಕರಗದೆ ಗೊಬ್ಬರವಾಗಲೇ ಇಲ್ಲ. ಆರುವರ್ಷ ಕಷ್ಟಪಟ್ಟೆ. ಆದರೆ ಆಮೇಲೆ ನೋಡಿ… ಇಡೀ ತೋಟವೇ ಬದಲಾಯಿತು. ಮೊದಲು ಹಣ್ಣಿನ, ಔಷಧಿಸಸ್ಯ ಗೊಬ್ಬರಕ್ಕಾಗಿ ಹಲವು ಜಾತಿಯ ಗಿಡ ಮರ ಬೆಳೆಸಿದೆ. ತೆಂಗು ಅಡಿಕೆ ಮದ್ಯೆ ಒಳ್ಳೆ ಗೆಣಸು ಹಾಕಿದೆ. ಅದು ತೋಟದ ತುಂಬಾ ಹರಡಿ ಕಳೆಗಳು ಬೆಳೆಯದಂತೆ ಮಾಡಿತು. ನೀರು ನಿರ್ವಹಣೆಯೂ ಸುಲಭ ಆಯ್ತು. ತೆಂಗಿನ ಕಾಯಿಯ ನೀರು ಕುಡಿಯುತ್ತಿದ್ದ ಇಲಿ ಅಳಿಲುಗಳು ಮರದಿಂದ ಕೆಳಗಿಳಿದವು. ಗೆಣಸು ಅವಕ್ಕೆ ಆಹಾರವಾಯ್ತು. ಅದನ್ನು ತಿನ್ನಲು ನೆಲ ಬಗೆದು ಗುಂಡಿ ತೋಡಿದವು. ಅದೇ ಸಹಜ ಉಳುಮೆ ಆಯಿತು. ನಂತರ ತೆಂಗು ಅಡಿಕೆಯ ಪಸಲು ಹೆಚ್ಚಾಯಿತು. ಹಣ್ಣಿನ ಗಿಡಗಳು ಚೆನ್ನಾಗಿ ಫಲಕೊಡೋಕೆ ಶುರು ಮಾಡಿದವು. ತೋಟವನ್ನೆಲ್ಲ ಸುತ್ತಿಸುತ್ತ ರಾಜಾರಾಮ್ ತಾವು ನಡೆದು ಬಂದ ಕೃಷಿಯ ಹಾದಿಯ ಬಗ್ಗೆ ಸ್ಪಷ್ಟ ಚಿತ್ರಣ ನೀಡಿದರು.
ತೋಟದ ತುಂಬ ಬೆಳೆದಿರುವ ಹುಲ್ಲು ಸೋಡಿ ‘ಅದ್ಯಾಕೆ ಹೀಗೆ ಹುಲ್ಲು ಬೆಳೆತಿದಿರಾ, ಈ ಕಳೆನೆಲ್ಲ ತೆಗೆಯಬಾರದೇ’ ಎಂದು ಅಂಬುಜಮ್ಮ ಕೇಳಿದರು.
‘ಅಜ್ಜಿ, ಅದು ಬೆಳೆದಿರೂ ಕಳೆ ಅಲ್ಲ, ಬೆಳೆಸಿರೊ ಕಳೆ, ಇದೊಂದು ಜಾತಿಯ ಹುಲ್ಲು, ಇದನ್ನ ‘ದಶಂತಿ’ ಅಂತಾರೆ. ಹೆಬ್ಬಾಳದ ಕೃಷಿ ವಿಶ್ವವಿದ್ಯಾನಿಲಯದಿಂದ ತಂದಿದ್ದು. ಮೇವಿನ ಬೀಜ ಅದು. ಲೆಗ್ಯುಮಿನಸ್ ಸಸ್ಯಯ ಅಂತಾರೆ. ಕಳೆಯಂತೆ ಬೆಳೆದರೂ ಇತರೆ ಕಳೆಗಳನ್ನು ನಿಯಂತ್ರಿಸುತ್ತದೆ. ಬೆಳೆಗೆ ಯಾವುದೇ ಹಾನಿ ಮಾಡದೆ ಐದು ಅಡಿವರೆಗೂ ಬೆಳೆಯುತ್ತದೆ. ತೋಟದ ಮೂಲೆಯಲ್ಲಿ ಹಾಕಿದ್ದು ಮೊದಲು. ಈಗ ತೋಟದ ತುಂಬಾ ಸ್ವಾಭಾವಿಕವಾಗಿ ಬೆಳೆದಿದೆ. ಆಳಬೇರಿಲ್ಲದ ಇದು ಒಂದು ತಿಂಗಳಲ್ಲಿ ನಾಲ್ಕೈದು ಅಡಿ ಎತ್ತರ ಬೆಳೆಯುತ್ತದೆ. ಕಟಾವು ಮಾಡಿದ ಹಾಗೆ ಚಿಗುರುತ್ತಲೇ ಇರುತ್ತದೆ. ಇದರ ಜೊತೆ ಯಾವ ಕಳೇನೂ ಬೆಳೆಯುವುದಿಲ್ಲ. ದನಗಳಿಗೆ ಇದು ಉತ್ತಮವಾದ ಮೇವು ಎಂದು ಹುಲ್ಲಿನ ಬಗ್ಗೆ ವಿವರಣೆ ನೀಡಿದರು.
ಇಡೀ ತೋಟ ಸುತ್ತಿದರು. ಅಲ್ಲಿದ್ದ -ಹಣ್ಣುಗಳನ್ನು ಕುಯ್ದು ಕೊಟ್ಟರು. ಹಣ್ಣು ತಿಂದು, ಮತ್ತೇ ಎಳನೀರು ಕುಡಿದು ಆಯಾಸ, ಹಸಿವು ಪರಿಹರಿಸಿಕೊಂಡರು. ತೋಟ ನೋಡಿದ ಮೇಲೆ ಇಳಾಗೆ ತನ್ನ ನಿರ್ಧಾರ ಯಾವುದೇ ರೀತಿ ತಪ್ಪಲ್ಲ. ತಾನು ಇಡುತ್ತಿರುವ ಹೆಜ್ಜೆ ಸರಿ ಎನಿಸಿತು. ಮತ್ತೊಂದಿಷ್ಟು ಹೊತ್ತು ನೆರಳಿನಲ್ಲಿ ಕುಳಿತು ಮಾತುಕತೆ ನಡೆಸಿದರು. ಅಲ್ಲೂ ಮೋಹನನ ಕಥೆ, ಇಳಾಳ ವಿಷಯ ಪ್ರಸ್ತಾಪವಾಯಿತು. ಆದರೆ ರಾಜಾರಾಮ್ ಅದನ್ನು ಕೇಳಿಕೊಂಡರೇ ವಿನಃ ಕೆದಕಲಿಲ್ಲ. ಆ ಗುಣ ಇಳಾಗೆ ತುಂಬಾ ಇಷ್ಟವಾಯಿತು. ಬಂದು ತುಂಬಾ ಹೊತ್ತಾಯಿತೆಂದು ಅಜ್ಜಿ ಮೊಮ್ಮಗಳು ಹೊರಟು ನಿಂತರು. ತೋಟದ ತುದಿಯವರೆಗೂ ಬಂದು ರಾಜಾರಾಮ್ ಅವರನ್ನು ಬೀಳ್ಕೊಟ್ಟರು. ತುಂಬಾ ಆಯಾಸವಾಗಿತ್ತಾದರೂ ತುಂಬ ದಿನದ ನಂತರ ಹೊರಬಂದಿದ್ದ ಅಂಬುಜಮ್ಮ ಉತ್ಸಾಹದಿಂದಲೇ ಹೆಜ್ಜೆ ಹಾಕುತ್ತಿದ್ದರು. ನಡೆಯುವುದೇನು ಅವರಿಗೆ ಕಷ್ಟವಾಗಿರಲಿಲ್ಲ. ಒಂದು ಒಳ್ಳೆಯ ತೋಟ ನೋಡಿ ಬಂದ ಖುಷಿ ಇಬ್ಬರಲ್ಲೂ ಇತ್ತು.
*****