ತಿಳಿ ನೀಲಿಯಾಗಸದಿ
ಕರಿಮುಗಿಲ ಹಿಂಡು
‘ಜೋಕುಮಾರನೆ ಚಂದಿರ’ ಮರೆತೆಯಲ್ಲೋ
ಬೆಳ್ಳಂಬೆಳಕಿನ ನಗುವ
ಉಂಡು ಮಲಗುವ ಮಂಚ
ಅವ್ವನ ಹರಿದ ಸೀರೆಯ ಕೌದಿ
ನಿನ್ನ ಅಪ್ಪುಗೆಯಿರದೆ ಚಂದಿರ
ಮೌನ ತಾಳಿವೆಯಲ್ಲೋ ತಣ್ಣಗೆ
ಹೆಬ್ಬಾವಿನೊಲು ಹೊರಳುವ
ಹಾದಿಗೆ ಸಾಲು ದೀಪಗಳು
ಕತ್ತಲೆಯೊಂದಿಗೆ ಕುಸ್ತಿ ಗೆದ್ದವನಾರು?
ಚಂದಿರ ನಿನ್ನ ಬೆಳದಿಂಗಳು ಕಿಲುಬು ಕಾಸೋ
‘ಬಣ್ಣದ ಡಬ್ಬಿಗಳು’ ಕತೆ
ಹೇಳುವ ಗುಡಿಸಲಿನಲ್ಲಿ ಮಿಣುಕು
ನಕ್ಷತ್ರಗಳು ಇಣುಕಿ ನೋಡುವುದಿಲ್ಲ
ಬೆಳ್ಳಿಬೆಟ್ಟದ ಚಂದಿರ ಬೆಳ್ಳಗಾದೆಯಲ್ಲೋ
ಕನಸುಗಳಿಲ್ಲದ ಇರುಳ ಹೆಣ್ಣಿಗೆ
ಹಗಲ ನಾಚಿಸುವ ಬೆಳಕಿನ ಸಿಂಗಾರ
‘ಚಂದಿರ’ ಎಲ್ಲೋ ಕೇಳಿದ ಹೆಸರು
ಯಾರ ಮನೆಯ ಮಗನಿವನು?
ಕಂಕುಳ ಕಂದನಿಗೆ ಉಣ್ಣಿಸಬೇಕು
ತೂಕಡಿಸುವ ಕಣ್ಣಿಗೆ ಕತೆ ಹೇಳಬೇಕು
ಎಲ್ಲಿ ಹೋದೆಯೋ ಬೆಳಕಿನ ತುಂಡೇ,
ಮಹಡಿ ಮನೆಗಳ ನಡುವೆ ‘ಚಂದಮಾಮ’???
*****