ಕಾಮ ನೀನು ಧೂಮವಾದಿ
ಸೋಮನಾಥನ ಕಣ್ಣಿಗೆ
ಪ್ರೇಮದಾ ನುಡಿ ಏನು ಹೇಳಿದಿ
ಕಾಮಿನಿ ರತಿ ದೇವಿಗೆ
ನಿನ್ನ ಪೋಲುವೆ ಪುರುಷರು
ಜಗದೊಳಿನ್ನೂ
ಹುಟ್ಯಾರೆಂದಿಗೆ?
ನನ್ನ ಮುತ್ತೈದೆ ತನಕೆ
ಭಂಗ ತಂದ್ಯಾ ಇಂದಿಗೆ ||೧||
ಮಾರ ನಿನ್ನ ರೂಪ ನೋಡಿ
ಸೈರಿಸದೀ ಅಮರ್‍ಯಾರೋ
ದೂರಿ ಎಲ್ಲರೂ
ಶಿವನ ಕಣ್ಣಿಗೆ ಮಾರುಗೊಟ್ಟ
ಪಾಪತ್ಮರೂ ||೨||
ಸ್ಮರನೆ ನಿನ್ನಯ ಮನಕೆ
ತಾರಕನುಪದ್ರವ ಕೊಟ್ಟನೆ
ಹರಿವಿರಂಚಿಯೂ
ಗುರುಬೃಹಸ್ಪತಿ
ಕರೆದು ಪೇಳಿದರ್‍ಯೋಚನೆ ||೩||
ಮೋಸದಿಂದಲಿ
ಭಾಷೆಗೊಂಡರು
ಈಸನಗ್ನಿಗಣ್ಣಿಗೆ ನಾಶಗೈದನು
ಗುರುವರನು ಬಹು
ದೊರೆಯಾದನು ಭೂಮಿಗೆ ||೪||
ಕಡು ಚೆಲುವ ಕಂದರ್ಪ
ನಿನ್ನಯ ಮಡದಿ ರತಿಯಳ ದುಃಖವಾ
ಬಿಡುವಳೋ ಸೈ
ಗಡಗಡ ನೇ ತಾ
ಹುಡಿಯೊಳಗೆ ಹೊರಳಾಡುತಾ ||೫||
ಮಾರ ಬಾಣಕೆ ಮನು – ಮುನ್ಯಾದಿಯ
ದಾರಿ ತಪ್ಪಿಸಿ ಮುತ್ತಿದೆ|
ಮೂರು ಲೋಕದಿ ನಿನ್ನ
ಮಿಕ್ಕುವರಾರು
ಕದನದೊಳಿಂದಿಗೆ ||೬||
ಭೂಮಿಯೊಳುತ್ಪತ್ಯವೆಂಬುದು
ಕಾಮ ನಿನ್ನಿಂದಲ್ಲದೇ!
ನೀ ಮರಣ ಹೊಂದಿದರೆ
ಜಗತ್ರಯ ತಾ
ಮುಳಿಗಿ ಹೋಯಿತಲ್ಲದೆ ||೭||
ಕ್ಷಿತಿಯೊಳಗೆ ಪತಿವ್ರತಾ
ಶಿರೋಮಣಿಯಾ|
ರತಿ ಎಂಬ ಚೆಲುವೆಯಾ
ಪತಿವಳಿದ ರಂಡೆತನವ ವಹಿಸಿ
ಕ್ಷಿತಿಗೆಯಾದಳು ಪಾಪಿಯಾ ||೮||
ಕಾಲಕಾಲಾಂತರದಿ ರತಿಯಾ
ತಾಳಿಕರಿಮಣಿಯ ತೆಗೆಯದೆ
ಪಾಲನೇತ್ರನ ದಯದಿ
ಬಾಲೆ ನಿನ್ನನು ನೆನೆಲದೆ ||೯||
ನೆನಪಿದಾಕ್ಷಣ ಮನಸಿಜನು ಎಂದೆನೆಸಿ
ರತಿಯಳ ಪಾಲಿಸೋ|
ತನು ಕಳೆದರೂ ಮನದಿಗೂಡಿ
ಜೀವ ಜಗತ್ರಯವನು ಪಾಲಿಸೋ ||೧೦||
ಕ್ಷಿತಿಗೆ ರತಿ ಮನ್ಮಥರಿಬ್ಬರೂ
ಪತಿ ಸೋಮೇಶನ ಕರುಣದಿ |
ಸಕಲನುಚರಾಚರೆಗೆವುಪ
ಸಮ ರತಿಯ ಗೂಡುತಾ ಸೌಖ್ಯದಿ ||೧೧||
*****