ನೀತಿ ನೇಮಾ, ರಾಜಕೀಯಾ, ಧರ್ಮ, ಕುಲ
ಆಚಾರ ಇವೆಲ್ಲ ಮೈಮ್ಯಾಲಿನ ಬಟ್ಟೆಗಳಂಗೆ
ಕಾಲಕಾಲಕ್ಕೆ ಅವಶ್ಯಬಿದ್ದಂಗೆ ಹೊತ್ತು ಬಂದಂಗೆ
ಹಿಗ್ಗಿಸಿಯೋ, ಕುಗ್ಗಿಸಿಯೋ, ಕತ್ತರಿಸಿಯೋ, ಸೇರಿಸಿಯೋ
ಬದಲಾವಣೆ ಮಾಡಿಕೊಂತೀವಿ
ಬ್ಯಾರೆ ಬ್ಯಾರೆ ರೀತಿ ಹೊಂದಿಸಿ ಉಟುಗೊಂತೀವಿ
ಎಲ್ಲಕ್ಮೊದಲು ಕಳ್ಳುಬೇರು ಗಟ್ಟಿ ಇರಬೇಕು
ಡಬಗಳ್ಳಿಯಂಗೆ, ಕರಿಕಿ-ಜಾಲಿಯಂಗೆ,
ಎಳೀ ಸಿಕ್ರೆ ಹಚಡಾ ನುಂಗೋದು, ರವಷ್ಟು ಸಂದು ಸಿಕ್ರು
ಬೇರಿಳಿಸಿ ಸೀಮೇನೇ ವ್ಯಾಪಿಸೋದು,
ಈ ನೆಲದಾಗಿಂದ ಇನ್ನೊಂದು ನೆಲಕ್ಕೊಯ್ದು
ಅಂಟಿಸಿದರೂ ಗಪ್ಪನೆ ಹತಿಗೆಂಡು ಕಸಿಯಾಗಿ
ಕಸುವಾಗೋದು,
ಉಸಿರಿನೆಳೆಯಾಗೂ ನಾಡಿಕೂದಲಾಗೂ ಟುಕು ಟುಕು ಅಂತ
ಮಿಡುಕು ಇದ್ರುಸಾಕು ಬಾಳಬೇಕೆಂಬ ಹಂಬಲ
ಗುಡ್ಡದಷ್ಟಿರಾದು, ಮುಗಿಲಿಗೇರಾಕ ಬಯಸಾದು
ಇವೆಲ್ಲಾ ಆ ಕಳ್ಳೀ ಲಕ್ಷಣಗಳು
ಮಳೆ-ಗಾಳಿ-ಚಳಿ-ಬಿಸಿಲು
ಉಪವಾಸ ವನವಾಸ, ರೋಗ ವೈಭೋಗ
ಎಲ್ಲದರಾಗೂ ಮ್ಯಾಲೆ ಅಲ್ಲಾಡಿಸಿದಂಗೆಲ್ಲಾ
ಒಳಾಗೆ ಬೇರು ಅದಿರ್ತಾತೆ-ಬೇರು ಅದಿರಿದಂಗೆಲ್ಲಾ
ತನ್ನ ಬೆಳ್ಳು ನೆಲದಾಗ ಚಾಚಿ ಚಾಚಿ ಆಳಕ್ಕೆ ಅಗಲಕ್ಕೆ
ತನ್ನ ಬೇರು ಭದ್ರಾ ಮಾಡಿಕೆಂತಾತೆ
ಈ ಜಿಗುಟು ತಲಿತಲಾಂತರ ಹರಿದು ಬರ್ತಾತೆ
ಮಣ್ಣಾಗೊಂದಾಗಿ ದುಡತಾನೇ ಉಸರಾಗಿ ಬಾಳೋದರಿಂದ
ತಾಳ್ತಾತೆ-ಬಾಳ್ತಾತೆ. ಬೆವರಿನ ನೀರು ಬೇರಿಗೆ ನೀರು
ಹೊಲಸು ತೊಳಿಯಾಕೆ, ಕಸಾ ಸುಡಾಕೆ, ನೂರು ವರ್ಷ ಬಾಳಾಕೆ
ಭಂಡವಾಳ,
ಗಟ್ಟಿ ಮುಟ್ಟ ಆರೋಗ್ಯಕ್ಕೆ ಗುಟ್ಟು ಸಂತಾನಕ್ಕೆ ಅಸಲ ಸತ್ವ
ಇದೇ ದಾರ್ಯಾಗೆ ಹೋದ್ರೆ ಎಲ್ಲೆಲ್ಲಿ ರಸಾ ಕಾಣ್ತದೋ
ಅಲ್ಲಲ್ಲಿ ಎದೀ ತುಂಬ್ತತೆ
ಎದೀ ಗೊತ್ತಿಗೊಂತಾತೆ
*****