ಸಾವಿರ ನೇತ್ರದ ಸಾವಿರ ಪಾತ್ರದ
ಸಹಸ್ರಶೀರ್ಷ ಪುರುಷನೆ ನೀ
ಸಾವಿರ ದನಿಗಳ ಗಾನದ ಮೇಳಕೆ
ಆಧಾರದ ಶ್ರುತಿಯಾಗಿಹೆ ನೀ
ಸಾಗುತ್ತಿರೆ ದೊರೆ ನೀ ರಥದಲ್ಲಿ
ಬೆಳುದಿಂಗಳ ಹೊಳೆ ಹರಿಯುವುದು,
ನಿನ್ನ ಮೈಯ ಆಭರಣಗಳಾಗಿ
ಚಿಕ್ಕೆ ಚಿಕ್ಕೆಯೂ ಮೆರೆಯುವುದು
ಆಗಸದಿಂದ ಭೂಮಿಯವರೆಗೆ
ಮಳೆಯ ರೂಪಾಗಿ ಇಳಿವವನೆ,
ದಿಗಂತದಿಂದ ದಿಗಂತಗಳಿಗೆ
ಗಾಳಿ ರೂಪಾಗಿ ಅಲೆವವನೆ
ಶಿಲೆಯಲಿ ಉಳಿದು, ಜಲದಲಿ ಹರಿದು
ಆಡುವೆ ಗಾಳಿಯ ಅಲೆಯಲ್ಲಿ;
ಉರಿಯಲಿ ಬೆಳಗಿ ಧರೆಯಲಿ ಕರಗಿ
ಏಳುವೆ ಮೇಲೆ ಹಸಿರಲ್ಲಿ!
ನೀನೇ ಇರುವೆ ಎಲ್ಲೆಲ್ಲೂ
ಕುಳಿತಾಡುತ್ತಿಹೆ ನನ್ನಲ್ಲೂ,
ನೋಡಬಲ್ಲವಗೆ ಕಾಣಿಸಿಕೊಳ್ಳುವೆ
ಆಡುವ ಮಕ್ಕಳ ಕಣ್ಣಲ್ಲೂ
*****