ಏನೀ ಸೃಷ್ಟಿಯ ಚೆಲುವು
ಏನು ಇದರ ಗೆಲುವು!
ಈ ಚೆಲುವಿನ ಮೂಲ ಏನು,
ಯಾವುದದರ ಬಲವು?
ಹಾಡುವ ಹಕ್ಕಿಯೆ ಮೋಡವೆ ಓಡುವ ಮರಿತೊರೆಯೇ
ಕಾಡುವ ಹೆಣ್ಣೇ ಪರಿಮಳ ತೀಡುವ ಮಲ್ಲಿಗೆಯೇ
ಎಳೆಯುವ ಸೆಳವೇ ಜೀವವ ಸುಲಿಯುವ ಸವಿನೋವೇ
ಕಾಮಿಸಿ ಮಾತ್ರವೆ ಕಾಣುವ ದರ್ಶನದಾ ಗೆಲುವೇ !
ಊರುವ ಬೇರೇ, ಮೋಡವ ತೂರುವ ಗಿರಿಶಿರವೇ
ಹಸಿರೇ, ಬಾನಿಗೆ ಏರಿ ಜಲವಾಗುವ ಉಸಿರೇ
ಕಾಲಕೆ ತಪ್ಪದೆ ಮೂಡುವ ತಾರೆಯೆ ರವಿ ಶಶಿಯೇ
ಕಾಮಿಸಿ ಕಣ್ಣನು ಕೂಡುವ ದರ್ಶನದಾ ಬಗೆಯೇ
ಯಾರೀ ಸೃಷ್ಟಿಯ ಬೇರಿಗೆ ನೀರನು ಎರೆವವರು?
ಯಾರೀ ಸೃಷ್ಟಿಯ ಬೇರೇ ತಾವಾಗಿರುವವರು?
ತಾವೇ ಜಗವಾಗಿದ್ದೂ ಮರೆಯಲಿ ನಿಂದವರು?
ಜವನಿಕೆಯಾಚೆಗೆ ನಿಂತೂ ಜಗವನು ಪೊರೆವವರು?
*****