ಕಾಣಬಹುದು ಹೇಗೆ ನಿನ್ನ ಕರೆಯಬಹುದು ಹೇಗೆ!
ಯಾವ ಎಲ್ಲೆ ಇರದ ನಿನ್ನ ಅರಿಯಬಹುದು ಹೇಗೆ?
ಹಗಲು ನಗಲು ಬೆಳಕ ಚೆಲ್ಲಿ ದೃಷ್ಟಿ ಕೊಡುವ ದಿವ್ಯವೇ
ಇರುಳಿನಲ್ಲಿ ನೀಲನಭದಿ ದೀಪವುರಿವ ಕರುಣೆಯೇ
ಮಳೆ ಬಿಸಿಲಿನ, ಹೊಳೆ ಉಸಿರಿನ ಪಾದದಲ್ಲಿ ಚಲಿಸಿ
ಉದಯಾಸ್ತದ ಹೊನ್ನ ಬಣ್ಣದಲ್ಲಿ ಪುಟಿವ ಭಾಗ್ಯವೇ
ಬಿತ್ತ ಸೀಳಿ ಮರದೆತ್ತರವಾಗಿ ನಿಲುವ ಶಕ್ತಿಯೇ
ಬರಿಕೊಂಬೆಯೆ ಹೂಚಿಗುರಲಿ ಮುಚ್ಚುವಂಥ ಯುಕ್ತಿಯೇ
ಬೀಜದಿಂದ ಹಣ್ಣು ತೆಗೆದು ಹಣ್ಣಿನಲ್ಲಿ ಬೀಜ ಹುಗಿದು
ಸೃಷ್ಟಿಯ ಸಂತತಿ ಕಾಯುವ ಮ್ಯತ್ಯುಂಜಯ ಸತ್ಯವೇ
ಎದೆಯಲೆಲ್ಲೊ ಹೊಳೆವೆ, ತುಟಿಯ ತುದಿಗೆಬರದೆ ನಿಲುವೆ
ಬಳಿಯೆ ನಿಂತು ಸಿಗದೆ ನನ್ನ ಹಂಗಿಸುತ್ತ ನಗುವೆ
ನಿನ್ನ ಹೊರತು ಬಾಳೆಲ್ಲವು ಬೀಳು ಎಂದೆನಿಸುವೆ
ಜೀವನದೀ ನಿಡುಯಾತ್ರೆಗೆ ಅಂತಿಮಗುರಿ ಎನಿಸಿಹೆ!
*****