ಪ್ರಿಯ ಸಖಿ,
ತಮಿಳುನಾಡಿನ ಚಿದಂಬರಂನ ನಟರಾಜನ ದೇವಸ್ಥಾನ ದಕ್ಷಿಣ ಭಾರತದ ದೇವಸ್ಥಾನಗಳಲ್ಲೇ ವಿಶಿಷ್ಟ ಸ್ಥಾನವನ್ನು ಹೊಂದಿದೆ. ೯ನೇ ಶತಮಾನದಲ್ಲಿ ಚೋಳರಿಂದ ಕಟ್ಟಲ್ಪಟ್ಟ ಈ ದೇವಾಲಯ ೪೦ ಎಕರೆ ವಿಸ್ತೀರ್ಣ ಹೊಂದಿದೆ. ಇಲ್ಲಿ ದೇವರು ಅಥವಾ ಶಕ್ತಿಯೆನ್ನುವುದನ್ನು ಆಕಾಶಕ್ಕೆ ಹೋಲಿಸಲಾಗಿದೆ.
ಚಿದ್+ಅಂಬರ ಎಂದರೆ ಜ್ಞಾನ + ಆಕಾಶ ಎಂದಾಗುತ್ತದೆ. ಆಕಾಶದಷ್ಟು ಅನಂತವಾಗಿರುವ ಜ್ಞಾನವನ್ನು ಹೊಂದಿರುವುದೇ ನಮ್ಮೆಲ್ಲರ ಸೃಷ್ಟಿಗೆ ಕಾರಣವಾಗಿರುವ ಶಕ್ತಿಯ ವಿಶೇಷತೆ. ಅದನ್ನಿಲ್ಲಿ ಎರಡು ರೂಪಗಳಲ್ಲಿ ವಿಶೇಷವಾಗಿ ಬಿಂಬಿಸಲಾಗಿದೆ. ಇಲ್ಲಿರುವ ಮುಖ್ಯ ನಟರಾಜಮೂರ್ತಿ ಆನಂದತಾಂಡವ ರೂಪದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದೆ. ಇದು ಜೀವನದ ಉತ್ಸಾಹಕ್ಕೆ ಪ್ರೇರಕವಾಗಿದೆ. ಹಾಗೇ ರುದ್ರತಾಂಡವ ನಟರಾಜಮೂರ್ತಿಯೂ ಇಲ್ಲಿದೆ. ಇದನ್ನು ಸೃಷ್ಠಿಯಲ್ಲಿ ಕೆಡುಕಿನ ಸಮಯದಲ್ಲಿ ದೈವ ಶಕ್ತಿಯ ರುದ್ರತಾಂಡವಕ್ಕೆ ಹೋಲಿಸಲಾಗಿದೆ. ನಟರಾಜನನ್ನು ಸೃಷ್ಠಿಕ್ರಿಯೆ, ರಕ್ಷಣೆ, ಲಯ, ಸ್ಥಿತಿ ಹಾಗೂ ಕೃಪೆಗೆ ಸಾಕ್ಷಾತ್ಕಾರವಾಗಿ ಮೂರ್ತೀಕರಿಸಲಾಗುತ್ತದೆ. ನಟರಾಜ ನೃತ್ಯಗುರುವೂ ಹೌದು. ಈ ದೇವಾಲಯದಲ್ಲೇ ೧೦೮ ನೃತ್ಯಭಂಗಿಯ ನಟರಾಜನನ್ನು ಕೆತ್ತಲಾಗಿದೆ. ಇಂತಹ ಅಪೂರ್ವಭಂಗಿಗಳು ಇನ್ನಾವ ದೇವಾಲಯದಲ್ಲೂ ಇಲ್ಲ ಎಂದು ಹೇಳಲಾಗುತ್ತದೆ.
ಸಖಿ, ಇದೇನು ಎಂದೂ ಇಲ್ಲದೆ ದೇವಸ್ಥಾನದ ಇತಿಹಾಸದ ಕಥೆ ಹೇಳಹೊರಟಿದ್ದಾಳೆ? ಇಷ್ಟೆಲ್ಲಾ ಹೇಳಿಯೂ ಚಿದಂಬರ ರಹಸ್ಯ ಎಂದೇನೆಂದು ಹೇಳಲೇ ಇಲ್ಲವೆನ್ನುತ್ತೀಯಾ ? ರಹಸ್ಯವನ್ನು ಏನೂ ಪೀಠಿಕೆ ಇಲ್ಲದೇ ಹೇಳಿಬಿಡಲಾಗುತ್ತದೆಯೇ? ಆದರೆ ನಾನು ಎಷ್ಟೆಲ್ಲಾ ಚಿದಂಬರ ರಹಸ್ಯದ ಬಗೆಗೆ ಹೇಳಿದ ನಂತರವೂ ಅದರ ಹೊರರೂಪವನ್ನಷ್ಟೇ ಹೇಳಲಾಗುವುದು ಎಂಬುದೂ ಅಷ್ಟೇ ಸತ್ಯ.
ಚಿದಂಬರಂನ ದೇವಾಲಯದ ಒಳಭಾಗದಲ್ಲಿರುವ ಕನಕಸಭಾದಲ್ಲಿ ದೇವರ-ವಿಶಿಷ್ಟ ಶಕ್ತಿಯ ನಿಗೂಢತೆಯನ್ನು, ನಿರಾಕಾರವನ್ನು ಪ್ರತಿಬಿಂಬಿಸುವ ಒಂದು ಅಮೂರ್ತ ಕಲ್ಪನೆಯನ್ನು ಕಾಣುತ್ತೇವೆ. ಇಲ್ಲಿ ಯಾವುದೇ ದೇವರ ಮೂರ್ತಿಯೂ ಇಲ್ಲ, ಚಿನ್ನದ ಬಿಲ್ವಪತ್ರೆಯ ಹಾರವೊಂದನ್ನು ತೆರೆಯೊಂದಕ್ಕೆ ತೂಗಿಬಿಡಲಾಗಿದೆಯಷ್ಟೇ. ಬಹುಶಃ ಹಿಂದೂ ದೇವಾಲಯಗಳಲ್ಲಿ ಇನ್ನೆಲ್ಲಿಯೂ ಇಂತಹ ವಿಶಿಷ್ಟ ಕಲ್ಪನೆಯನ್ನು ಕಾಣಲಾಗುವುದಿಲ್ಲ. ಈ ಕನಕ ಸಭಾವನ್ನು ಪ್ರವೇಶಿಸಿದ ಪ್ರತಿಯೊಬ್ಬ ವ್ಯಕ್ತಿಯೂ ದೈವದ ಅಸ್ತಿತ್ವದ ಬಗೆಗೆ, ನಿರಾಕಾರ ವಿಶಿಷ್ಟ ಶಕ್ತಿ ಕುರಿತು, ಕೆಲ ಕ್ಷಣಗಳಾದರೂ ಯೋಚಿಸುವಂತೆ ಮಾಡುತ್ತದೆ. ಹಾಗೇ ಅವರವರ ಆಲೋಚನೆ, ವಿಚಾರ, ನಂಬಿಕೆ, ಭಕ್ತಿ, ಭಾವಗಳಿಗನುಗುಣವಾಗಿ ನಿರಾಕಾರ ಶಕ್ತಿಯನ್ನು ಕಲ್ಪಿಸಿಕೊಂಡು ವಿಶಿಷ್ಟ ಅನುಭೂತಿಯನ್ನು ಪಡೆಯಲು ಸಾಧ್ಯವಿದೆ. ಸಖಿ, ಈ ಸೃಷ್ಟಿ, ಅದರಲ್ಲಿನ ಈ ಜೀವಿಗಳು, ಅವುಗಳ ಪೂರ್ವಪರಗಳು, ಬದುಕಿನ ಒಳಮರ್ಮ, ಅದರ ಉಪದೇಶ, ಸೃಷ್ಟಿ ರಹಸ್ಯ, ಹುಟ್ಟುಸಾವಿನ ನಿಗೂಢ ಹೀಗೆ ಈ ಕ್ಷಣ, ಇದರ ಅರ್ಥವೆಲ್ಲವನ್ನು ಕುರಿತು ಆಲೋಚಿಸುತ್ತಾ ಹೋದಷ್ಟು ಈ ಬ್ರಹ್ಮಾಂಡವೆಂಬುದೊಂದು ಚಿದಂಬರ ರಹಸ್ಯದ ಗೋಲವೆಂದು ಗೋಚರಿಸುತ್ತಾ ಹೋಗುತ್ತದೆ. ಇಂತಹ ನೂರಾರು ನಿಗೂಢ ಪ್ರಶ್ನೆಗಳಿಗೆ ಉತ್ತರಗಳನ್ನು ಎಂದೆಂದಿಗೂ ಕಂಡುಹಿಡಿಯಲಾಗದ ಅಲ್ಪಮತಿ ಮನುಷ್ಯ ತಾನೇ ಮಹಾನ್ ವಿವೇಕಿ, ಬುದ್ಧಿವಂತ, ಜ್ಞಾನಿ ಎಂದು ಬೀಗುತ್ತಾನೆ. ಬದುಕು ಎಂದೆಂದಿಗೂ ಬಿಡಿಸಲಾಗದ ಚಿದಂಬರ ರಹಸ್ಯ ಎಂದರಿಯದೇ ನಮ್ಮ ನಮ್ಮ ಮಿತಿಗಳಲ್ಲಿ ಮಾತ್ರ ಇದು. ಇಷ್ಟೇ, ಹೀಗೆ ಎಂಬ ಚೌಕಟ್ಟು ಹಾಕಿಕೊಂಡು ಅಹಂನಿಂದ ಬೀಗುವ ನಾವು ನಿಜಕ್ಕೂ ಮಹಾನ್ ಮೂರ್ಖರಲ್ಲವೇ?
*****