ಪ್ರಿಯ ಸಖಿ,
ಬಸ್ಸಿನ ಎರಡು ಸೀಟುಗಳ ಜಾಗದಲ್ಲಿ ಒಂದು ಸೀಟಿನಲ್ಲಿ ಇವಳು ಕುಳಿತಿದ್ದಾಳೆ. ಪಕ್ಕದಲ್ಲಿ ಯಾರೂ ಬಂದು ಕುಳಿತುಕೊಳ್ಳದಿದ್ದರೆ ಸಾಕು ಎಂದು ಯೋಚಿಸುತ್ತಾ, ಮತ್ತಷ್ಟು ವಿಶಾಲವಾಗಿ ಕುಳಿತುಕೊಳ್ಳುತ್ತಾಳೆ. ಅಷ್ಟರಲ್ಲಿ ತನ್ನಪ್ಪನೊಡನೆ ಬಸ್ಸು ಹತ್ತಿ ಬಂದ ೧೦-೧೨ ವರ್ಷದ ಹಳ್ಳಿ ಹುಡುಗ ತನ್ನಪ್ಪ ಕೂತ ಜಾಗದಲ್ಲಿ ಸ್ಥಳವಿರದೇ ಇವಳ ಪಕ್ಕದಲ್ಲಿ ಕೂತಾಗ ಇವಳು ಮನಸ್ಸಿನಲ್ಲೇ ಸಿಡಿಮಿಡಿಗುಟ್ಟುತ್ತಲೇ ಬದಿಗೆ ಸರಿದು ಕುಳಿತುಕೊಳ್ಳುತ್ತಾಳೆ. ಆ ಹುಡುಗನ ಕೊಳೆಯಾದ ಬಟ್ಟೆಗಳು, ಹರಳೆಣ್ಣೆ ಮೆತ್ತಿದ ತಲೆ, ಗಲೀಜು ಚೀಲಗಳನ್ನು ಕಂಡು ಮತ್ತಷ್ಟು ಮುದುಡಿ ಆ ಹುಡುಗನಿಗೆ ತಾಕದಂತೆ ಕುಳಿತುಕೊಳ್ಳುತ್ತಾಳೆ. ಬಸ್ಸುಸಾಗಿದಂತೆಲ್ಲಾ ತನ್ನ ಬ್ಯಾಗಿನಿಂದ ಬಿಸ್ಕತ್ತು. ಹಣ್ಣು, ಕುರಕಲನ್ನು ತಾನೊಬ್ಬಳೇ ನಿಧಾನಕ್ಕೆ ಮೇಯುತ್ತಾಳೆ. ಪಕ್ಕದಲ್ಲಿದ್ದ ಹುಡುಗನ ಆಸೆಗಣ್ಣನ್ನು ಕಂಡೇ ಇಲ್ಲವೆಂಬಂತೆ ಕಿಟಕಿಗೆ ಮುಖಮಾಡಿ ಕುಳಿತುಕೊಳ್ಳುತ್ತಾಳೆ. ಬಸ್ಸಿನ ವೇಗಕ್ಕೋ, ವಯೋ ಸಹಜವಾಗಿಯೋ ಹುಡುಗನಿಗೆ ಈಗ ತೂಕಡಿಕೆ ಪ್ರಾರಂಭವಾಗಿದೆ. ಇವಳು ಎಷ್ಟೇ ಬದಿಗೆ ಸರಿದು ಕುಳಿತುಕೊಳ್ಳುತ್ತಿದ್ದರೂ ಹುಡುಗ ಅವಳ ತೋಳಿನ ಮೇಲೆ ತನಗರಿವಿಲ್ಲದೇ ವರಗುತ್ತಿದ್ದಾನೆ. ಹುಡುಗನ ಎಣ್ಣೆ ತಲೆ ತನ್ನ ಬಟ್ಟೆಯನ್ನೆಲ್ಲಾ ಗಲೀಜು ಮಾಡುತ್ತಿದೆಯಲ್ಲಾ ಎಂದವಳಗೆ ಕೋಪ, ಸಿಡಿಮಿಡಿ. ಕೆಲಬಾರಿ ಅವನ ತಲೆಯನ್ನು ಪಕ್ಕಕ್ಕೆ ನೂಕಿದರೂ ಆ ಕ್ಷಣಕ್ಕೆ ಹುಡುಗ ನೆಟ್ಟಗೆ ಕುಳಿತರೂ ಮತ್ತೆ ಇವಳ ಮೇಲೇ ತೂಕಡಿಸುತ್ತಾನೆ!
ಈ ಫಜೀತಿಯೇ ಬೇಡ ಎಂದುಕೊಂಡವಳು ಮುಂದೆ ಯಾವುದೋ ಊರಿನಲ್ಲಿ ಮುಂದಿನ ಸೀಟು ಖಾಲಿಯಾದಾಗ ಎದ್ದು ಮುಂದಿನ ಸೀಟಿಗೆ ಹೋಗಿ ಕುಳಿತು ನೆಮ್ಮದಿಯಿಂದ ನಿಟ್ಟುಸಿರು ಬಿಡುತ್ತಾಳೆ. ಕಿಟಕಿಯಿಂದ ದೃಷ್ಟಿ ಹಾಯಿಸಿ ಕುಳಿತವಳಿಗೆ ಪಕ್ಕದಲ್ಲೇ ಅಕ್ಕ ಎಂಬ ಧ್ವನಿ ಕೇಳಿದಾಗ ಆ ಕೊಳಕ ಇಲ್ಲಿಗೂ ಬಂದನೇ ಎಂದು ನಿದ್ದೆ ಬಂದವಳಂತೆ ಗಟ್ಟಿಯಾಗಿ ಕಣ್ಣು ಮುಚ್ಚುತ್ತಾಳೆ. ಸ್ವಲ್ಪ ಹೊತ್ತಿನ ನಂತರ ಇವಳ ಕೈಯನ್ನು ಅಲುಗಿಸಿದ್ದರ ಅರಿವಾಗಿ ಮೈಯಿಡೀ ಉರಿದಂತಾಗಿ ಕೋಪದಿಂದ ಕೆಂಗಣ್ಣು ಮಾಡಿ, ಬೈಯಲು ಬಾಯಿ ತೆರೆಯುವಷ್ಟರಲ್ಲಿ ಹುಡುಗನ ಕೈಯಲ್ಲಿ ತನ್ನ ಪರ್ಸನ್ನು ಕಂಡು ತಣ್ಣಗಾಗುತ್ತಾಳೆ.
ಹುಡುಗ ಅವಳ ಕೈಗೆ ಪರ್ಸು ನೀಡಿ, ನಿಮ್ಮ ಬ್ಯಾಗಿಂದ ಕೆಳಗೆ ಬಿದ್ದಿತ್ತೇನೋ ಅಕ್ಕ ತಗೊಳ್ಳಿ ಎಂದಾಗ ಪರ್ಸು ತೆಗೆದುಕೊಳ್ಳಲು ಹೋದ ಇವಳ ಕೈ ನಡುಗುತ್ತದೆ.
ನಾಚಿಕೆಯಿಂದ ತಲೆ ಎತ್ತಲೂ ಸಾಧ್ಯವಾಗುವುದಿಲ್ಲ. ಪರ್ಸು ತೆಗೆದು ನೋಡಿದವಳಿಗೆ ನೂರರ ನೋಟುಗಳು ತಣ್ಣಗೆ ಮಲಗಿರುವುದು ಕಂಡಾಗ ಸಮಾಧಾನವಾದರೂ ಎದೆಯೊಳಗೆಲ್ಲಾ ಏನೋ ಕಸಿವಿಸಿ, ಸಂಕಟ. ಆ ಕೊಳಕು ಹುಡುಗ ತನ್ನ ಪ್ರಾಮಾಣಿಕತೆಯಿಂದ ಎತ್ತರೆತ್ತರಕ್ಕೆ ಏರಿ ನಿಂತಂತೆ. ತಾನು ಅವನ ಬಾಹ್ಯ ಕೊಳಕನ್ನು ಕೆಲಹೊತ್ತು ಸಹಿಸಲಾಗದೇ ಕುಬ್ಜಳಾಗುತ್ತಾ ಹೋಗಿ ಅವನ ಕಾಲಕಸವಾದಂತೆ. ಮನಃಪಟಲದಲ್ಲಿ ಚಿತ್ರ ಮೂಡಿಬಂದಾಗ, ಅವನಿಗೆ ಥ್ಯಾಂಕ್ಸ್ ಹೇಳಲೂ ತಾನು ಅರ್ಹಳಲ್ಲ ಎನ್ನಿಸಿ ಪಶ್ಚಾತ್ತಾಪದಿಂದ ತಲೆತಗ್ಗಿಸುತ್ತಾಳೆ. ಸಖಿ, ಕೊಳಕರ್ಯಾರು? ಎಂದು ತಿಳಿಯಲಿಲ್ಲವೇ? ಬಾಹ್ಯದಲ್ಲಿ ಎಷ್ಟೇ ಸ್ವಚ್ಚವಾಗಿದ್ದರೂ ಇಂತಹ ಅಂತರಂಗದ ಕೊಳಕುಗಳಿದ್ದಾಗ ವ್ಯಕ್ತಿ ಕುಬ್ಜನಾಗಿಬಿಡುವುದು ಸಹಜ ತಾನೇ?
*****