ಅಳಿಯ ಇದ್ದನು. ಹಾಡಬಂದರೂ ಹಾಡು ಹೇಳುತ್ತಿದ್ದಿಲ್ಲ ; ಕಥೆ ಬಂದರೂ ಕಥೆ ಹೇಳುತ್ತಿದ್ದಿಲ್ಲ. “ಏನು ಬಂದು ಏನುಕಂಡೆವು. ಇವನೇನು ಒಂದು ಹಾಡು ಹೇಳಲಿಲ್ಲ ; ಕಥೆ ಹೇಳಲಿಲ್ಲ. ಇವನನ್ನು ಹೇಗಾದರೂ ಮಾಡಿ ಕೊಲ್ಲಬೇಕು” ಎಂದು ಕಥೆ ಹಂಚಿಕೆ ಹಾಕಿತು.
“ಮುಂಜಾನೆ ಎದ್ದಕೂಡಲೇ ಜೋಡು ಮೆಡುತ್ತಾನೆ. ಆವಾಗ ಅವನಿಗೆ ಚೇಳು ಆಗಿ ಕಡೆಯಬೇಕು. ಹೆಂಡತಿಯನ್ನು ಕರೆಯಲಿಕ್ಕೆ ಹೋಗುತ್ತಾನೆ- ಆವಾಗ ಅಗಸೆ ಅವನ ತಲೆಯಮೇಲೆ ಬೀಳುವಂತೆ ಮಾಡಬೇಕು” ಹೀಗೆನ್ನುವ ಕಥೆಯ ಮಾತನ್ನು ಆಳುಮಗ ಕೇಳಿರುತ್ತಾನೆ.
“ಎವ್ವಾ ಎವ್ವಾ, ನಾನೂ ಹೇಣತೀಗಿ ಕರಕೊಂಡು ಬರ್ತೀನಿ” ಎಂದು ಅವ್ವನಿಗೆ ಕೇಳಿ, ಆಕೆಯ ಅಪ್ಪಣೆ ಪಡೆಯುತ್ತಾನೆ, ಆ ಅಳಿಯ.
ಆವಾಗ ಆಳುಮಗ ಅನ್ನುತ್ತಾನೆ – “ನಾನು ಬರ್ತೀನಿ. ನಿನ್ನೊಡನೆ ಧಣೀ” “ಯಾತಕ್ಕ ಬರತೀಯೋ ಎತ್ತು ದನ ನೋಡಕೋತ ಇರು” ಎಂದರೂ ಕೇಳುವದಿಲ್ಲ. ಕುದುರೆಯ ಮೇಲೆ ಜೀನು ಬಿಗಿದು ಸಜ್ಜುಗೊಳಿಸುತ್ತಾನೆ. ಧಣಿಯು ಮುಂಜಾನೆ ಎದ್ದು ಜೋಡು ಮೆಡುವಷ್ಟರಲ್ಲಿ ಆಳು ಜೋಡಿನಲ್ಲಿರುವ ಚೇಳನ್ನು ನೋಡಿ ಅದನ್ನು ಕಡಿದು ಕಿಸೆಯಲ್ಲಿ ಹಾಕಿಕೊಂಡುಬಿಟ್ಟನು.
ಊರುಬಿಟ್ಟು ಹೊರಬೀಳುವಾಗ ಆಳು ಸುತ್ತು ಸುತ್ತು ದಾರಿಯಲ್ಲಿ ಕರಕೊಂಡು ಹೊರಟನು. ಅಗಸೆಯ ಎರಡೂ ದಾರಿ ಬಿಟ್ಟು, ಮೂರನೇ ಅಡ್ಡದಾರಿ ಹಿಡಿದು ಊರ ದಾಟಲಿಕ್ಕೆ ಅನುವು ಮಾಡಿಕೊಟ್ಟನು.
ಇಷ್ಟೆಲ್ಲ ಪಾರು ಆಗಿ ಅತ್ತೆಮಾವನ ಊರು ತಲುಪುತ್ತಾರೆ. ಅಲ್ಲಿ ಕೈಕಾಲು ತೊಳೆಯಲಿಕ್ಕೆ ಮನೆಯವರು ನೀರು ಕೊಟ್ಟರು; ಉಣಬಡಿಸಿದರು. ಬಹಳ ದಿನಗಳ ಮೇಲೆ ಬಂದವನೆಂದು ತಿಳಿದು ಹಾಸಿಗೆ ಮಾಡಿಕೊಟ್ಟು, ಅಳಿಯನಿಗೆ ಮಲಗಲು ಹೇಳಿದರು. ಪ್ರವಾಸದಿಂದ ದಣಿದ ಅಳಿಯ ಮಲಗಿಬಿಟ್ಟನು. ಹೆಂಡತಿಯ ನಡತೆ ಸರಿಯಾಗಿರಲಿಲ್ಲ. ಗಂಡನು ಮಲಗಿದ್ದನ್ನು ನೋಡಿದ ಕೂಡಲೇ, ದಿನಾಲು ಹೋಗುವಂತೆ ಮನೆಬಿಟ್ಟು ಹೊರಗೆ ಹೊರಟಳು. ಅವಳ ಹಿಂದಿನಿಂದ ಆಳುಮಗನೂ ಸಾಗಿದನು, ಆಕೆಗೆ ಗೊತ್ತಾಗದಂತೆ.
ಆಕೆ ನೇರವಾಗಿ ಫಕೀರನ ಮನೆಗೆ ಹೋದಳು; ಅವನನ್ನು ತೆಕ್ಕೆಹೊಡೆದಳು.
“ಇಷ್ಟೇಕೆ ತಡಮಾಡಿ ಬಂದಿ ? ಇಷ್ಟೇಕೆ ರಾತ್ರಿ ಮಾಡಿದಿ ?” ಎಂದು ಅವಳ ಮೂಗನ್ನೇ ಕೊಯ್ದು ಹಾಕಿದನು. ಆಕೆ ಅಳುತ್ತ ಕರೆಯುತ್ತ ಮನೆಯ ಕಡೆಗೆ ಹೊರಟಳು.
ಇನ್ನು ಗಂಡನ ಮನೆಗೆ ಯಾವ ಮುಖದಿಂದ ಹೋಗುವದು ?
“ಅವನೇ ಮೂಗು ಕೊಯ್ದನೆಂದು ಅಪವಾದ. ಹೊರಿಸಿದರಾಯಿತು. ತಾನೇ ಮೂಕಾಟಲೆ ಕರಕೊಂಡು ಹೋಗುತ್ತಾನೆ. ಮತ್ತು ಎಲ್ಲ ಸುರಳೀತ ನಡೀತದೆ” ಎಂದು ಲೆಕ್ಕ ಹಾಕಿದಳು. ಹಾಗೂ ಗಂಡನ ಮಗ್ಗುಲಲ್ಲಿ ಮಲಗಿಕೊಂಡಳು.
ಬೆಳಗಾಗುವ- ಮೊದಲೇ ಆಕೆಯೆದ್ದು “ನನ್ನ ಮೂಗು ಹೋಯಿತು” ಎಂದು ಬೊಬ್ಬೆ ಹೊಡೆದಳು. ಗಂಡನು ಗಾಬರಿಗೊಂಡು ಎದ್ದನು. ತಾಯಿತಂದೆ ಎಲ್ಲರೂ ಬಂದರು, “ಯಾಕೆ ಮಗಾ, ಏನಾಯ್ತು” ಎಂದು ಎಲ್ಲರೂ ಕೇಳುವವರೇ.
“ನನ್ನ ಗಂಡ ನನ್ನ ಮೂಗು ಕೊಯ್ದರೆಪ್ಪೋ” ಎಂದು ಗುಲ್ಲುಮಾಡಿದಳು.
ನೆರೆದ ಜನ ಅಳಿಯನಿಗೆ ಛೀ ಥೂ ಅಂದಿತು.
ಅಲ್ಲಿಯೇ ನಿಂತ ಆಳುಮಗ ಹೇಳಿದನು – “ನನ್ನ ಧೊರೀನೇ ಮೂಗು ಕೊಯ್ದಾನೆಂದರೆ ಅವನ ಕೈ ರಕ್ತ ಆಗಿರಬೇಕು. ಹಾಂಗ ಆಗಿಲ್ಲವಾದರೆ ಮತ್ತೆ ಯಾರಾದರೂ ಅವಳ ಮೂಗು ಕೊಯ್ದಿರಬೇಕು. ಫಕೀರ ಬಾವಾ ಸಾಹೇಬ ಅವಳ ಮೂಗು ಕೊಯ್ದಾನ.”
ಆಳು ಗಟ್ಟಿಸಿ ಹೇಳುವುದನ್ನು ಸುಳ್ಳು ಸತ್ಯ ನಿರ್ಣಯಿಸುವ ಸಲುವಾಗಿ ನೆರೆದವರೆಲ್ಲರೂ ಕಂದೀಲು ಹಿಡಕೊಂಡು ಫಕೀರನ ಮನೆಗೆ ಹೋದರು.
ಅಲ್ಲಿ ನೋಡಿದರೆ ಫಕೀರನ ಮನೆಯಲ್ಲಿ ರಕ್ತ ಬಿದ್ದಿರುತ್ತದೆ.
ಮಾವನನ್ನೂ ಮಾಲಕನ ಹೆಂಡತಿಯನ್ನೂ ಕಚೇರಿಗೆ ಕಳಿಸಲಾಯಿತು. ಆಳು ಮಗನು ಅಳಿಯನನ್ನು ಕರಕೊಂಡು ಮರಳಿ ತನ್ನೂರಿಗೆ ಹೋದನು.
ಕಲಿತ ಕಥೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ ಹೀಗೆ ಅಪವಾದ ಬರುತ್ತವೆ. ಅವು ಜನ್ಮಕ್ಕೇ ಮೂಲವಾಗುವವು. ಆದ್ದರಿಂದ ಬಂದಕಥೆ ಮಂದಿಗೆ ಹೇಳಬೇಕು.
*****