ಮಹಾಭಾರತದ ಮಹಾಮುನಿಗಳಲಿ ದೂರ್ವಾಸ
ಅಪೂರ್ವ ನಿನ್ನ ಮಹಿಮೆ. ವ್ಯಾಸ, ಕುವರವ್ಯಾಸ
ಕಾಲ ಶಿಲೆಯಲ್ಲಿ ಕಡೆದಿಹರು ನಿನ್ನ ಅಶಾಂತ
ಗ್ರೀಷ್ಮ ಮಧ್ಯಾಹ್ನ ಮೂರ್ತಿಯನು. ಆರ್ಯಾವರ್ತ
ಒಂದು ಕಾಲದಲಿ ಆಶ್ರಮ ನಿಯಮ ಹದಗೆಟ್ಟು
ತ್ಯಾಗದ ಮುಖದ ಮೇಲೆ ಭೋಗದ ಬಂಗು ಬರಲು
ನೀ ಬಂದೆ, ಋಷಿ ಕುಲವ ಶಾಪದಿಂದಲೆ ತೊಳೆದೆ,
ಬೆಳಗಿದೆ, ನಿಲ್ಲಿಸಿದೆ ಧರ್ಮಾಸನದ ಮೇಲೆ.-
ಮುಟ್ಟಿದರೆ ಮುನಿಯೆಂದು ದೂರುತ್ತಲೇ ಇರಲಿ
ನಿನ್ನ ನೆನೆಯಲು ಕೂಡ ಬಲವಿರದ ಹೆಂಬೇಡಿ,
ವರ ಕೊಡುವ ಸಣ್ಣ ಕರುಣೆಗೆ ತೊತ್ತೆ ನೀನು?
ಶಾಪವೇ ನಿನ್ನ ಭಾಗ್ಯದ ಕಾಮಧೇನು.
ನೀನಿತ್ತ ಶಾಪದಿಂದಲೆ, ಶಾಪದಿಂದಲೇ
ಸರ್ವದಮನೋದಯವ ಕಂಡಳು ಶಕುಂತಲೆ.
*****