ಇದು ನಿರಂತರವೂ ರಣರಂಗ, ಇಲ್ಲಿ ಯಾವುದೇ ಒಂದು ಆಯುಧ, ಒಬ್ಬ ವೀರನಾಯಕ, ಒಂದು ವಾಹನ, ಒಂದು ರೀತಿಯ ಕವಚ, ಒಂದು ತಂತ್ರ, ಒಂದು ಕೈಚಳಕ, ಒಂದು ವ್ಯೂಹ, ಒಂದು ಬಗೆಯ ಸೈನ್ಯ, ಒಂದು ನೆರೆಬೆಂಬಲ, ಒಂದು ತಯಾರಿ, ಒಂದು ಯುದ್ಧ ಘೋಷಣೆ, ಒಂದು ಅವಧಿ…. ಯಾವಾಗ್ಯೂ ಗೆಲುವಿಗೆ ಕಾರಣವಾಗಲಾರವು. ಒಮ್ಮೊಮ್ಮೆ ಇಲ್ಲಿಯವರೆಗೆ ಗೊತ್ತಿರುವ ಸಾಧ್ಯತೆಗಳೆಲ್ಲಾ ವಿಫಲವಾಗಿ ಹೊಸ ಸಾಹಸ ಸೃಷ್ಟಿಗೆ ವೀಳ್ಯಕೊಡುವುದಾಗುತ್ತದೆ. ಚರಿತ್ರೆಯ ಚಕ್ರ ಪುನರಾವರ್ತಿಸುವುದಿಲ್ಲ.
ಈ ರಣರಂಗದಲ್ಲಿ ಒಮ್ಮೆ ಪ್ರಬಲಾಸ್ತ್ರವಾಗಿದ್ದದ್ದು ಇನ್ನೊಮ್ಮೆ ಮೊಂಡ ಪೊರಕೆಯಂತಾದೀತು.
ಒಮ್ಮೆ ಸುಸಜ್ಜಿತವಾಹನವಾದದ್ದು ಇನ್ನೊಮ್ಮೆ ಹಳೆ ಬಂಡಿಯಾದೀತು
ಒಮ್ಮೆ ಮೆರೆದ ಧೀರ ನಾಯಕ ಇನ್ನೊಮ್ಮೆ ಅಯೋಗ್ಯನಾದಾನು,
ಒಮ್ಮೆ ರಕ್ಷಸಿದ ಕವಚ ಇನ್ನೊಮ್ಮೆ ಮೃತ್ಯು ಕವಾಟವಾದೀತು
ಒಮ್ಮೆ ಬಳಸಿದ ತಂತ್ರ ಇನ್ನೊಮ್ಮೆ ಹುಡುಗಾಟವಾದೀತು
ಒಮ್ಮೆ ರಚಿಸಿದ ವ್ಯೂಹ ಇನ್ನೊಮ್ಮೆ ಮರುಳುಗೂಡಾದೀತು,
ಒಮ್ಮೆ ತೋರಿದ ಲಾಘವ ಇನ್ನೊಮ್ಮೆ ಅರುಳು ಮರುಳಾದೀತು,
ಒಮ್ಮೆ ಅಜೇಯವೆನಿಸಿದ ಸೈನ್ಯ ಇನ್ನೊಮ್ಮೆ ದನಜಂಗುಳಿಯಾದೀತು,
ಒಮ್ಮೆ ಮೆರೆದ ದೈರ್ಯ ಶೌರ್ಯ ಇನ್ನೊಮ್ಮೆ ಪುಂಡು ಬಂಡಾಟವಾದಾವು,
ಒಮ್ಮೆ ನಂಬಿದ ನೆರೆ ಬೆಂಬಲ ಇನ್ನೊಮ್ಮೆ ಬರಿ ನೆರಿಕೆಯಾದೀತು
ಒಮ್ಮೆ ಕೂಡಿದ ಒಪ್ಪಂದ ಇನ್ನೊಮ್ಮೆ ಚಕ್ಕಂದವಾದೀತು
ಒಮ್ಮೆ ಹರಿದ ಹುಮ್ಮಸ್ಸು ಇನ್ನೊಮ್ಮೆ ಹುಚ್ಚು ಎನಿಸೀತು
ಒಮ್ಮೆ ನಡೆಸಿದ ತಯ್ಯಾರಿ ಇನ್ನೊಮ್ಮೆ ವಯ್ಯಾರವಾದೀತು
ಒಮ್ಮೆ ದೊರೆತ ಬಿರುದಿನ ಪುಚ್ಚ ಒಣರವುದೆಯಾದೀತು ಇನ್ನೊಮ್ಮೆ
ಒಮ್ಮೆ ದೂರೆತ ಬಹುಮಾನಪದಕ ಖೋಟಾ ಪೈಸಾವಾದೀತು
ಇನ್ನೊಮ್ಮೆ
*****