ಹಾಡೆಲೆ ಹೃದಯದ ಹಕ್ಕಿಯೆ ಹಾಡು
ನವ ಜೀವನ ಸುಮಧುರ ಗಾನ
ಕೊರಡು ಕೊನರುತಿದೆ ಚೆಲುವು ಹರಡುತಿದೆ
ಉದಿಸಲಿ ಚೇತನ ತಂತಾನ
ರಾತ್ರಿ ಸರಿಯುತಿದೆ ಉಷೆಯು ಬರುತಲಿದೆ
ಓಹೋ ಎಂಥಹ ಸುರ ಚೆಲುವು
ಇದನ್ನು ಕಾಣಲು ಉಂಡದ್ದಾಯಿತು
ಓ ಹಾ ಇರುಳಿನ ಕಡು ನೋವು
ಜಗವೆ ಸುಂದರಾ ಬಾಳು ಸುಂದರಾ
ಕಾಣೋ ನಗುತಿಹ ಸೃಷ್ಟಿಯನು
ನೀನೂ ಕೂಡಾ ಅದರ ಚೆಲುವಿನಲಿ
ಕೂಡುತ ಹಾಡೋ ತುಷ್ಟಿಯನು
ಕೋಶ ಕೀಟದೊಲು ಬಾಳಿದ್ದಿನ್ನೂ
ಸಾಕಾಗಿಲ್ಲವೆ ಮಹರಾಯ
ಚೆಲ್ಲುತ ಹೊದಿಕೆಯ ಮೇಲೆದ್ದೇಳು
ಸೊಬಗನು ಸವಿಯುವ ಬಾರಯ್ಯ
ಹೊತ್ತು ಮುಳುಗುವಾ ಅಂಜಿಕೆಯೇಕೆ
ಹಗಲನು ನಗುತಲೆ ಕಳೆಯೋಣ
ಕತ್ತಲಾದರೂ ರವಿಯು ಸಾಯುವನೆ
ಭೂಮಿಯ ಭ್ರಮೇಯೇ ತಾ ಕಾರಣ
*****